ಅಮೆರಿಕ ಮಧ್ಯಂತರ ಚುನಾವಣೆ : ಭಾರತ ಮೂಲದ ನಬೀಲಾ ಸಯ್ಯದ್ ರಿಂದ ಇತಿಹಾಸ ಸೃಷ್ಟಿ!

ಭಾರತ ಮೂಲದ ನಬೀಲಾ ಸಯ್ಯದ್ ಅವರು ಅಮೆರಿಕದ ಇಲ್ಲಿನೊಯಿಸ್ ಜನರಲ್ ಅಸೆಂಬ್ಲಿಗೆ ಚುನಾಯಿತರಾಗಿ ಅತ್ಯಂತ ಕಿರಿಯ ಸದಸ್ಯೆ ಎಂಬ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಹೌದು, ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಭಾರತ ಮೂಲದ, 23 ವರ್ಷದ ಯುವತಿ ತಮ್ಮ ಪ್ರತಿಪಕ್ಷವಾದ ರಿಪಬ್ಲಿಕನ್ ಪಕ್ಷದ ಕ್ರಿಸ್ ಬಾಸ್ ಅವರನ್ನು ಸೋಲಿಸಿದ್ದಾರೆ. ಇಲ್ಲಿನೊಯಿಸ್ ರಾಜ್ಯ ಜನಪ್ರತಿನಿಧಿ ಸಭೆಯ 51ನೇ ಜಿಲ್ಲೆಯ ಚುನಾವಣೆಯಲ್ಲಿ ನಬೀಲಾ ಸಯ್ಯದ್ ಅವರು ಶೇ 52.3ರಷ್ಟು ಮತಗಳನ್ನು ಗಳಿಸಿದ್ದಾರೆ.

ತಮ್ಮ ಈ ಗೆಲುವಿನ ಸಂಭ್ರಮವನ್ನು ನಬೀಲಾ ಸಯ್ಯದ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಹೆಸರು ನಬೀಲಾ ಸಯ್ಯದ್. ನಾನು 23 ವರ್ಷದ ಮುಸ್ಲಿಂ, ಭಾರತೀಯ- ಅಮೆರಿಕನ್ ಮಹಿಳೆ. ರಿಪಬ್ಲಿಕನ್ ಹಿಡಿತದಲ್ಲಿದ್ದ ಉಪನಗರ ಜಿಲ್ಲೆಯನ್ನು ನಾವು ಉಲ್ಟಾ ಮಾಡಿದ್ದೇವೆ”. ಮತ್ತು ಜನವರಿಯಲ್ಲಿ ನಾನು ಇಲ್ಲಿನೊಯಿಸ್ ಅಸೆಂಬ್ಲಿಯ ಅತ್ಯಂತ ಕಿರಿಯ ಸದಸ್ಯೆಯಾಗಲಿದ್ದೇನೆ. ಅಷ್ಟೇ ಅಲ್ಲದೆ, ನಮ್ಮ ಬಳಿ ಇದ್ದ ನಂಬಲು ಅಸಾಧ್ಯವಾದ ತಂಡ ಇದನ್ನು ಸಾಧ್ಯವಾಗಿಸಿದೆ ಎಂದು ಸಂತಸದಿಂದ ನಬೀಲಾ ತಿಳಿಸಿದ್ದಾರೆ.

ಹಾಗೇ ತಮ್ಮ ಪಯಣದ ಬಗ್ಗೆ ನಬೀಲಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಯೋಜನೆಯ ಬಗ್ಗೆ ಮಾತನಾಡಿರುವ ಅವರು, “ನಾನು ರಾಜ್ಯ ಪ್ರತಿನಿಧಿಯ ಉಮೇದುವಾರಿಕೆ ಪ್ರಕಟಿಸಿದಾಗ, ಜನರ ಜತೆ ಪ್ರಾಮಾಣಿಕವಾಗಿ ಸಂಭಾಷಿಸುವ ಯೋಜನೆಯನ್ನು ಆರಂಭಿಸಿದ್ದೆನು. ನಮ್ಮ ಪ್ರಜಾಪ್ರಭುತ್ವದಲ್ಲಿ ಭಾಗಿಯಾಗಲು ಅವರಿಗೆ ಕಾರಣ ನೀಡುವುದು ಮತ್ತು ಅವರ ಮೌಲ್ಯಗಳನ್ನು ಪ್ರತಿನಿಧಿಸಲು ಉತ್ತಮ ನಾಯಕತ್ವದ ಆಶಯ ಹೊಂದುವುದು ಇದರ ಉದ್ದೇಶವಾಗಿತ್ತು. ಆ ರೀತಿಯ ಸಂಭಾಷಣೆಗಳಲ್ಲಿ ನಾವು ತೊಡಗಿಸಿಕೊಂಡಿರುವ ಕಾರಣ ಸ್ಪರ್ಧೆಯಲ್ಲಿ ಜಯಗಳಿಸಿದ್ದೇವೆ” ಎಂದು ಹೇಳಿದ್ದಾರೆ.

ತಮಗೆ ಬೆಂಬಲ ನೀಡಿದ್ದಕ್ಕಾಗಿ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿರುವ ನಬೀಲಾ, “ಈ ಜಿಲ್ಲೆಯ ಪ್ರತಿ ಮನೆ ಮನೆಯ ಬಾಗಿಲನ್ನೂ ನಾನು ತಟ್ಟಿದ್ದೇನೆ. ನಾಳೆ, ನನ್ನಲ್ಲಿ ನಂಬಿಕೆ ಇರಿಸಿದ್ದ ಕಾರಣಕ್ಕೆ ಧನ್ಯವಾದ ಸಲ್ಲಿಸಲು ಅವರ ಮನೆ ಬಾಗಿಲನ್ನು ಮತ್ತೆ ತಟ್ಟಲು ಆರಂಭಿಸುತ್ತೇನೆ. ನಾನು ಕೆಲಸಕ್ಕೆ ಹಾಜರಾಗಲು ಸಿದ್ಧಳಾಗಿದ್ದೇನೆ” ಎಂದು ತಿಳಿಸಿದ್ದಾರೆ.

ಇಲ್ಲಿನೊಯಿಸ್‌ನ ಪ್ಯಾಲಟೈನ್‌ನಲ್ಲಿ ಬೆಳೆದ ನಬೀಲಾ, ಬರ್ಕ್ಲಿಯಲ್ಲಿನ ಕ್ಯಾಲಿಫೋರ್ನಿಯಾ ವಿವಿಯಲ್ಲಿ ರಾಜ್ಯಶಾಸ್ತ್ರ ಹಾಗೂ ಬಿಜಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದಿದ್ದಾರೆ. ಹಲವಾರು ಸಂಘಟನೆಗಳ ಜತೆ ನಬೀಲಾ ಸಹಯೋಗವನ್ನು ಹೊಂದಿದ್ದಾರೆ. ಇದರಲ್ಲಿ ಕಾಂಗ್ರೆಸ್‌ಗೆ ಡೆಮಾಕ್ರಟಿಕ್ ಪಕ್ಷದ ಸದಸ್ಯರನ್ನು ಆಯ್ಕೆ ಮಾಡಲು ಹಣ ಸಂಗ್ರಹಿಸುವ ಎಮಿಲೀಸ್ ಲಿಸ್ಟ್ ಕೂಡ ಸೇರಿದೆ. ಇದೀಗ ಅವರು ಲಾಭರಹಿತ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮತದಾರರ ಕ್ರೂಡೀಕರಣ, ಕಾಲೇಜ್ ಆವರಣಗಳಲ್ಲಿ ಲೈಂಗಿಕ ದೌರ್ಜನ್ಯಗಳ ತಡೆ, ಲಿಂಗ ಸಮಾನತೆಯಂತಹ ಮೊದಲಾದ ಉತ್ತಮ ಕಾರ್ಯಗಳಲ್ಲಿ ಈ ಸಂಸ್ಥೆ ತೊಡಗಿಸಿಕೊಂಡಿದೆ.

ಕಿರಿಯ ವಯಸ್ಸಿನಲ್ಲಿಯೇ ಜನರಲ್ ಅಸೆಂಬ್ಲಿಯ ಸದಸ್ಯೆಯಾಗಿ ಚುನಾಯಿತರಾಗಿರುವ ಭಾರತ ಮೂಲದ ನಬೀಲಾ ಸಯ್ಯದ್ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆ ಹಾಗೂ ಅಭಿನಂದನೆಗಳು ಹರಿದು ಬರುತ್ತಿವೆ. ಇದು ಎಲ್ಲರೂ ಹೆಮ್ಮೆ ಪಡುವಂತಹ ವಿಚಾರವಾಗಿದೆ. ಕಿರಿಯ ವಯಸ್ಸಿನಲ್ಲಿ ಹಿರಿಯ ಕಾರ್ಯ ಶ್ಲಾಘನೀಯವಾಗಿದೆ.

Leave A Reply

Your email address will not be published.