ಕ್ಲಾಸ್ ಟೆಸ್ಟ್ ನಲ್ಲಿ ಕಾಪಿ ಮಾಡಿ ಸಿಕ್ಕಿ ಬಿದ್ದ SSLC ವಿದ್ಯಾರ್ಥಿ | ನೊಂದ ಬಾಲಕ ಮಾಡಿದ್ದು ಮಾತ್ರ ಘೋರ ದುರಂತ!

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೋರ್ವ 14ನೇ ಮಹಡಿಯಿಂದ ಕೆಳಗಡೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆಯೊಂದು ನಡೆದಿದೆ.
ಕ್ಲಾಸ್ ಟೆಸ್ಟ್‌ನಲ್ಲಿ ಕಾಪಿ ಹೊಡೆಯುವಾಗ ಸಿಕ್ಕಿಬಿದ್ದ ಕಾರಣಕ್ಕೆ ತರಗತಿಯಿಂದ ಹೊರಗೆ ಕಳುಹಿಸಿದ ಕಾರಣಕ್ಕೆ ನೊಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ. ಈ ಘಟನೆ ಹೆಗಡೆ ನಗರದಲ್ಲಿ ಮಂಗಳವಾರ ನಡೆದಿದೆ. ಮೊಯಿನ್ ಖಾನ್ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಮೊಯಿನ್, ಮಧ್ಯಾಹ್ನ 4.30ರ ಸುಮಾರಿಗೆ ಆರ್.ಆರ್. ಸಿಗ್ನೇಚರ್ ಅಪಾರ್ಟ್‌ಮೆಂಟ್‌ನ 14ನೇ ಮಹಡಿಯಿಂದ ಹಾರಲು ಪ್ರಯತ್ನಿಸಿದ್ದ. ಕೂಡಲೇ ಸ್ಥಳೀಯರು ಇದನ್ನು ಗಮನಿಸಿದ್ದಾರೆ ಹಾಗೂ ಕೆಳಗಡೆ ಇಳಿಯುವಂತೆ ಕೇಳಿದ್ದಾರೆ. ಇನ್ನೂ ಕೆಲವರು ಆತನನ್ನು ಹಿಡಿದುಕೊಳ್ಳಲು ಮೇಲೆ ಹೋಗಿದ್ದಾರೆ. ಆದರೆ, ಯಾರ ಮಾತನ್ನೂ ಕೇಳದ ಮೊಯೀನ್ ಜನರು ನೋಡ ನೋಡುತ್ತಲೇ ಕೆಳಗಡೆ ಜಿಗಿದಿದ್ದ. ಬಿದ್ದ ರಭಸಕ್ಕೆ ಸ್ಥಳದಲ್ಲಿಯೇ ಅಸುನೀಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಶಾಲೆಯಲ್ಲಿ ಕ್ಲಾಸ್‌ಟೆಸ್ಟ್ ನಡೆದಿತ್ತು. ಈ ವೇಳೆ ವಿದ್ಯಾರ್ಥಿ ಮೊಯಿನ್ ಕಾಪಿ ಹೊಡೆಯುತ್ತಿದ್ದಾಗ ಟೀಚರ್ ಕೈಗೆ ಸಿಕ್ಕಿಬಿದ್ದಿದ್ದ. ಹೀಗಾಗಿ, ಆತನನ್ನು ತರಗತಿಯಿಂದ ಹೊರಗಡೆ ಕಳುಹಿಸಲಾಗಿತ್ತು. ಇದರಿಂದ ನೊಂದ ಮೊಯಿನ್ ಶಾಲೆಯಿಂದ ಹೊರಬಂದು ತನ್ನ ಸ್ನೇಹಿತನ ಮನೆಯಿದ್ದ ಅಪಾರ್ಟ್‌ಮೆಂಟ್‌ಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಯ ಸಾವಿಗೆ ಆತ ವ್ಯಾಸಂಗ ಮಾಡುತ್ತಿದ್ದ ಹೆಗಡೆ ನಗರ ಪಬ್ಲಿಕ್ ಸ್ಕೂಲ್ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಮಕ್ಕಳಿಗೆ ಸೂಕ್ತ ರಕ್ಷಣೆ ಕಲ್ಪಿಸದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಮೃತ ಮೊಯೀನ್ ತಂದೆ ಮೊಹಮದ್ ನೂರ್ ನೀಡಿರುವ ದೂರು ಆಧರಿಸಿ ಶಾಲಾ ಆಡಳಿತ ಮಂಡಳಿ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

Leave A Reply

Your email address will not be published.