ವಿಕೃತ ಕಾಮಿ, ನಟೋರಿಯಸ್ ಕಿಲ್ಲರ್ ಉಮೇಶ್ ರೆಡ್ಡಿಯ ಮರಣದಂಡನೆ ರದ್ದು : ಸುಪ್ರೀಂ ಕೋರ್ಟ್

ವಿಕೃತ ಕಾಮಿ, ನಟೋರಿಯಸ್ ಕಿಲ್ಲರ್ ಬಿ.ಎ.ಉಮೇಶ್ ಅಲಿಯಾಸ್ ಉಮೇಶ್ ರೆಡ್ಡಿಯ ಮರಣದಂಡನೆಯನ್ನು
ಸುಪ್ರೀಂಕೋರ್ಟ್ ರದ್ದುಗೊಳಿಸಿ, 30 ವರ್ಷ ಜೀವಾವಧಿ ಶಿಕ್ಷೆ ವಿಧಿಸಿದೆ. ಹೀಗಾಗಿ ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಾನೂನು ಹೋರಾಟ ನಡೆಸಿದ್ದ ಉಮೇಶ್ ರೆಡ್ಡಿಯ ಪ್ರಯತ್ನಕ್ಕೆ ಜಯ ದೊರಕಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ತ್ರಿಸದಸ್ಯ ಪೀಠ, ಐತಿಹಾಸಿಕ ಸುನಿಲ್ ಬಾತ್ರಾ ಪ್ರಕರಣವನ್ನು ಉಲ್ಲೇಖಿಸಿ
ಈ ತೀರ್ಪನ್ನು ನೀಡಿದೆ. ಸಿಜೆಐ ಉದಯ್ ಉಮೇಶ್ ಲಲಿತ್, ನ್ಯಾ., ಎಸ್. ರವೀಂದ್ರ ಭಟ್, ನ್ಯಾ. ಪಿ.ಎಸ್. ನರಸಿಂಹ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತ್ತು.

2011ರ ನವೆಂಬರ್ 6 ರಿಂದ ಅಪರಾಧಿಯನ್ನು ಇಲ್ಲಿಯವರೆಗೆ ಏಕಾಂತ ಬಂಧನದಲ್ಲಿ ಇರಿಸಲಾಗಿತ್ತು ಎಂಬ ಬೆಳಗಾವಿ ಜೈಲಿನ ವೈದ್ಯ ಅಧಿಕಾರಿ ಸಲ್ಲಿಸಿದ್ದ ಪತ್ರವನ್ನು ಪರಿಗಣಿಸಿ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ. ಆತನನ್ನು ಈ ಹತ್ತು ವರ್ಷಗಳ ಕಾಲ ಏಕಾಂಗಿಯಾಗಿ ಜೈಲಿನಲ್ಲಿರಿಸಿರುವುದರಿಂದ ಮಾನಸಿಕ ಹಿಂಸೆಗೊಳಗಾಗಿರುವ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ ಎಂದು ತಿಳಿಸಿದೆ.

ಅಷ್ಟು ಮಾತ್ರವಲ್ಲದೇ, ಒಂದು ವೇಳೆ ಇನ್ನು ಅಪರಾಧಿಯ ಪರವಾಗಿ ಯಾವುದೇ ಅರ್ಜಿಯನ್ನು ಸಲ್ಲಿಸಿದರೆ 30 ವರ್ಷಗಳ ಶಿಕ್ಷೆ ಅನುಭವಿಸಿದ ಬಳಿಕವೇ ಪರಿಗಣಿಸಲಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಒಂದು ವೇಳೆ ಆ ಬಳಿಕವೂ ಯಾವುದೇ ಅರ್ಜಿ ಸಲ್ಲಿಕೆಯಾಗದಿದ್ದರೆ ಉಮೇಶ್ ರೆಡ್ಡಿ ಆಜೀವ ಶಿಕ್ಷೆಗೊಳಪಡುತ್ತಾರೆ ಎಂದು ಸರ್ವೋಚ್ಚ
ನ್ಯಾಯಾಲಯ ತಿಳಿಸಿದೆ.

ಉಮೇಶ್ ರೆಡ್ಡಿಗೆ 2007ರಲ್ಲಿ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು 2011ರಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಹಾಗಾಗಿ ಈ ಸಂದರ್ಭದಲ್ಲೇ, ಉಮೇಶ್ ರೆಡ್ಡಿ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿಯೊಂದನ್ನು ಸಲ್ಲಿಸಿದ್ದ. 2013 ರ ಮೇ 12 ರಂದು ಉಮೇಶ್ ರಡ್ಡಿ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳೂ ತಿರಸ್ಕರಿಸಿದರು.

10 ವರ್ಷಗಳಿಂದ ಉಮೇಶ್ ರೆಡ್ಡಿ ಒಂಟಿಯಾಗಿ ಜೈಲಿನಲ್ಲಿದ್ದ. ಇದರಿಂದ ರೆಡ್ಡಿ ಮಾನಸಿಕ ಯಾತನೆ ಅನುಭವಿಸಿದ್ದು, ಜೊತೆಗೆ ಆತನ ಕ್ಷಮಾದಾನ ಅರ್ಜಿಯ ಇತ್ಯರ್ಥ ಕೂಡಾ ವಿಳಂಬವಾಗಿದ್ದು, ಹಾಗಾಗಿ ಶಿಕ್ಷೆಯನ್ನು ಜೀವಾವಧಿಯಾಗಿ ಮಾರ್ಪಾಡು ಮಾಡುವಂತೆ ಆತನ ಪರ ವಕೀಲ ಬಿ.ಎನ್. ಜಗದೀಶ್ ಅವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಆದರೆ ಇದನ್ನು ಒಪ್ಪದ ನ್ಯಾ. ಅರವಿಂದ ಕುಮಾರ್ ಮತ್ತು ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರನ್ನೊಳಗೊಂಡ ಪೀಠವು ಮಂಗಳವಾರ ಗಲ್ಲು ಶಿಕ್ಷೆ ಖಾಯಂ ಮಾಡಿತ್ತು. ಆದರೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ನೀಡಿದ್ದರಿಂದ ಅಲ್ಲಿಯ ತನಕ ಗಲ್ಲಿಗೇರಿಸಬಾರದು ಎಂಬ ಮನವಿಯನ್ನು ಒಪ್ಪಿಕೊಂಡಿತ್ತು.

ಸುಪ್ರೀಂ ಕೋರ್ಟ್ ನ ತೀರ್ಪು ಇದೀಗ ಬಂದಿದ್ದು ಉಮೇಶ್ ರೆಡ್ಡಿ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡು ಮಾಡಲಾಗಿದೆ.

Leave A Reply

Your email address will not be published.