ಬಾಣಂತಿ ಮತ್ತು ಶಿಶುಗಳ ಸಾವು ಪ್ರಕರಣ; ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಮಾರ್ಗಸೂಚಿ – ಆರೋಗ್ಯ ಇಲಾಖೆಯಿಂದ ಮಹತ್ವದ ಆದೇಶ!!!

ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣ ಎಲ್ಲೆಡೆ ಸಂಚಲನ ಸೃಷ್ಟಿ ಮಾಡಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಮತ್ತು ನವಜಾತ ಶಿಶುಗಳ ಸಾವಿನ ಪ್ರಕರಣ ಮೊನ್ನೆಯಷ್ಟೇ ನಡೆದಿದ್ದು,ಎಲ್ಲೆಡೆ ತುಮಕೂರಿನ ಅಸ್ಪತ್ರೆಯ ಸಿಬ್ಬಂದಿ ವರ್ಗದ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ವಿಷಯವನ್ನು ಪರಿಗಣಿಸಿ ಎಚ್ಚೆತ್ತ ಆರೋಗ್ಯ ಇಲಾಖೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಮಾರ್ಗಸೂಚಿಗಳನ್ನು ಪ್ರಕಟ ಮಾಡಿದೆ.

ಈ ಮಾರ್ಗಸೂಚಿಯ ಅನ್ವಯ, ಇನ್ನು ಮುಂದೆ ತುರ್ತು ಆರೋಗ್ಯ ಸೇವೆಯನ್ನು ನೀಡುವ ಸಂದರ್ಭದಲ್ಲಿ ತಾಯಿ ಕಾರ್ಡ್ ಆಧಾರ್ ಕಾರ್ಡ್, ಪಡಿತರ ಕಾರ್ಡ್ ಇತ್ಯಾದಿ ಯಾವುದೇ ದಾಖಲೆಗಳು ಸಲ್ಲಿಸುವ ಅವಶ್ಯಕತೆ ಎದುರಾಗುವುದಿಲ್ಲ.

ಮಾರ್ಗ ಸೂಚಿಯಲ್ಲಿ ಒಳಗೊಂಡ ವರದಿಯನ್ನು ಗಮನಿಸುವುದಾದರೆ:

ತುರ್ತು ಆರೋಗ್ಯ ಸೇವೆಯನ್ನು ನೀಡುವ ಸಂದರ್ಭದಲ್ಲಿ ಯಾವುದೇ ದಾಖಲೆಗಳು ಅವಶ್ಯಕವಲ್ಲ. ತಾಯಿ ಕಾರ್ಡ್, ಆಧಾರ ಕಾರ್ಡ್, ಪಡಿತರ ಚೀಟಿ ಇತರೆ ದಾಖಲೆಗಳು ಇಲ್ಲದೇ ಇದ್ದರೂ ಕೂಡ ಇನ್ನೂ ಮುಂದೆ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದೆ. ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ಸೇವೆಯನ್ನು ನೀಡುವುದು ಆರೋಗ್ಯ ಕೇಂದ್ರಗಳ ಆದ್ಯ ಕರ್ತವ್ಯವಾಗಿದ್ದು, ಆರೋಗ್ಯ ಸೇವೆಯನ್ನು ನೀಡುವಾಗ ರೋಗಿಯ ರಾಷ್ಟ್ರೀಯತೆ, ಜಾತಿ, ವರ್ಗ, ಆರ್ಥಿಕ ಸ್ಥಿತಿಯನ್ನು ಅವಲಂಬಿತ ವಾಗಿರಬಾರದು.

ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ತುರ್ತು ಪರಿಸ್ಥಿತಿಯಲ್ಲಿ ರೋಗಿಯು ಯಾವುದೇ ರೀತಿಯ ದಾಖಲೆಗಳನ್ನು ನೀಡಲು ಒತ್ತಾಯಿಸಬಾರದು. ತುರ್ತು ಪರಿಸ್ಥಿತಿಯಲ್ಲಿ ರೋಗಿಯ ನೋವು ಸಂಕಟವನ್ನು ನಿವಾರಿಸುವುದು ವೈದ್ಯರ, ಶುಶ್ರೂಷಕರ ಮತ್ತು ಇತರೆ ಸಿಬ್ಬಂದಿ ವರ್ಗದವರ ಆದ್ಯ ಕರ್ತವ್ಯವಾಗಿದೆ.

ಈ ರೀತಿಯ ಪ್ರಕರಣಗಳು ಮತ್ತೆ ಮರುಕಳಿಸಿದರೆ ಅಂತಹ ಅಧಿಕಾರಿ, ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗುತ್ತದೆ ಅಲ್ಲದೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

Leave A Reply

Your email address will not be published.