ಈ ದಿನಾಂಕದಂದು ನಡೆಯಲಿದೆ ಖಗ್ರಾಸ ಚಂದ್ರಗ್ರಹಣ | ದೇಶದ ಯಾವ್ಯಾವ ಭಾಗಗಳಲ್ಲಿ ಗ್ರಹಣ ಕಾಣಿಸಲಿದೆ ? ಸಂಪೂರ್ಣ ವಿವರ ಇಲ್ಲಿದೆ

ದೀಪಾವಳಿ ಅಮಾವಾಸ್ಯೆಯಂದು (ಅಕ್ಟೋಬರ್ 25) ಪಾರ್ಶ್ವ ಸೂರ್ಯ ಗ್ರಹಣವಾದರೆ, ಈಗ ಮತ್ತೊಂದು ಗ್ರಹಣವನ್ನು ಜಗತ್ತು ಕಾಣಲಿದೆ. ಈ ಗ್ರಹಣ ದೇಶದ ಯಾವ್ಯಾವ ಭಾಗಗಳಲ್ಲಿ ಗೋಚರಿಸಲಿದೆ ? ಯಾವ ಸಮಯದಲ್ಲಿ ಗ್ರಹಣ ಆರಂಭವಾಗಲಿದೆ? ಯಾವ ಸಮಯದಲ್ಲಿ ಅಂತ್ಯವಾಗಲಿದೆ? ಎಂಬ ಸಂಪೂರ್ಣ ವಿವರವನ್ನು ನೋಡೋಣ.

ಕಾರ್ತಿಕ ಹುಣ್ಣಿಮೆ (ನವೆಂಬರ್ 8) ರಂದು ಖಗ್ರಾಸ ಚಂದ್ರಗ್ರಹಣ ಉಂಟಾಗಲಿದೆ. ಕೋಲ್ಕತ್ತಾ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಗ್ರಹಣ ಗೋಚರಿಸಲಿದೆ. ಅಲ್ಲದೇ ಪಾಕಿಸ್ತಾನ, ಅಫ್ಘಾನಿಸ್ತಾನ, ರಷ್ಯಾ, ಅಮೆರಿಕ, ಆಸ್ಟ್ರೇಲಿಯಾ, ಉತ್ತರ ಅಟ್ಲಾಂಟಿಕ್‌ ಸಮುದ್ರ, ಪೆಸಿಫಿಕ್‌ ಸಮುದ್ರ ಪ್ರದೇಶದಿಂದಲೂ ಈ ಖಗೋಳ ವಿಸ್ಮಯವನ್ನು ನೋಡಬಹುದು ಎಂದು ಖಗೋಳವಿಜ್ಞಾನಿಗಳು ತಿಳಿಸಿದ್ದಾರೆ.

ಇದೇ ನವಂಬರ್ 8ರಂದು ಮಧ್ಯಾಹ್ನ 2.39ಕ್ಕೆ ಭಾಗಶಃ ಚಂದ್ರಗ್ರಹಣ ಆರಂಭವಾಗಲಿದ್ದು, 3.46ರ ವೇಳೆಗೆ ಅದು ಪೂರ್ಣಪ್ರಮಾಣದಲ್ಲಿ ಆವರಿಸಲಿದೆ. ಸಂಜೆ 4.29ರ ವೇಳೆಗೆ ರಕ್ತ ಚಂದಿರನ ದರ್ಶನವಾಗಲಿದೆ. ಸಂಜೆ 5.11ಕ್ಕೆ ಖಗ್ರಾಸ ಚಂದ್ರಗ್ರಹಣ ಅಂತ್ಯವಾದರೆ, 6.19ಕ್ಕೆ ಪಾರ್ಶ್ವ ಚಂದ್ರಗ್ರಹಣದ ಅವಧಿ ಮುಗಿಯಲಿದೆ.

ಈ ಗ್ರಹಣಗಳು ಭಾರತಕ್ಕೆ ಪಾರ್ಶ್ವ ಗ್ರಹಣಗಳಾದರೂ, ಖಗೋಳ ವಿದ್ಯಮಾನಕ್ಕೆ ಹೋಲಿಸಿದರೆ ಈ ಎರಡೂ ಗ್ರಹಣಗಳು ಬಲು ಅಪರೂಪ ಎಂದೇ ಹೇಳಬಹುದು. ಈ ಖಗ್ರಾಸ ಚಂದ್ರಗ್ರಹಣ ಗ್ರಹಣವನ್ನು ಬರಿ ಕಣ್ಣಿಂದಲೇ ನೋಡಬಹುದು. ಇದು ಈ ವರ್ಷದ ಕೊನೆಯ ಸಂಪೂರ್ಣ ಚಂದ್ರಗ್ರಹಣವಾಗಿದೆ. ಇನ್ನೂ 2025ರ ಮಾ.14ರಂದು ಈ ಖಗ್ರಾಸ ಚಂದ್ರಗ್ರಹಣ ಉಂಟಾಗಲಿದೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.

Leave A Reply

Your email address will not be published.