ಪುತ್ತೂರು : ಕಾಣಿಯೂರಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಬ್ಬರ ಮೇಲೆ ಅಮಾನುಷ ಗುಂಪು ಹಲ್ಲೆ ನಡೆಸಿದವರ ವಿರುದ್ಧ ನ್ಯಾಯಕ್ಕಾಗಿ ಆಗ್ರಹಿಸಿ ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಆಶ್ರಯದಲ್ಲಿ ಕಿಲ್ಲೆ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್ ಅವರು ಕಾಣಿಯೂರಿನಲ್ಲಿ ವ್ಯಾಪಾರಿಗಳಿಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದು ಖಂಡನೀಯವಾಗಿದ್ದು ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಮನುಷ್ಯತ್ವ, ಮಾನವೀಯತೆ, ಸಂಸ್ಕಾರ ಇಲ್ಲದವರು ಈ ಕೃತ್ಯ ಎಸಗಿದ್ದಾರೆ ಅವರೆಲ್ಲರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಅವರು ಒತ್ತಾಯಿಸಿದರು.
ಮುಸ್ಲಿಂ ಜಸ್ಟೀಸ್ ಫಾರಂನ ಸ್ಥಾಪಕಾಧ್ಯಕ್ಷ ರಫಿಯುದ್ದೀನ್ ಕುದ್ರೋಳಿ ಮಾತನಾಡಿ ಕಾಣಿಯೂರಿನಲ್ಲಿ ಇಬ್ಬರು ಅಮಾಯಕರ ಮೇಲೆ ಮಾರಣಾಂತಿಕ ಗುಂಪು ಹಲ್ಲೆ ನಡೆದಿರುವುದನ್ನು ನಾಗರಿಕ ಸಮಾಜ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಮುಸ್ಲಿಂ ವ್ಯಾಪಾರಿಗಳ ಬದಲು ಬೇರೆಯವರಿಗೆ ಈ ರೀತಿಯ ಹಲ್ಲೆ ನಡೆದಿದ್ದರೆ ಇದೀಗ ಜಿಲ್ಲೆಗೆ ಬೆಂಕಿ ಬೀಳುತ್ತಿತ್ತು. ಕಾಣಿಯೂರಿನ ಘಟನೆ ಗಂಭೀರ ಘಟನೆಯಾದರೂ ರಾಜ್ಯ ಮಟ್ಟದ ಮಾಧ್ಯಮಗಳು ಮೌನಕ್ಕೆ ಶರಣಾಗಿವೆ. ಸಣ್ಣ ಪುಟ್ಟ ಪ್ರಕರಣಗಳನ್ನೂ ಎನ್ಐಎ, ಸಿಬಿಐಗೆ ಒಪ್ಪಿಸುವ ಸರಕಾರ ಇದನ್ನೂ ಎನ್ಐಎಗೆ ಒಪ್ಪಿಸಿ ಎಂದು ಹೇಳಿದರು.
ಎಸ್ಕೆಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ ಮಾತನಾಡಿ ರಾಜ್ಯದ ಪತ್ರಿಕಾ ಮಾಧ್ಯಮಗಳೂ ಪಕ್ಷಪಾತಿ ಧೋರಣೆ ಅನುಸರಿಸುತ್ತಿದೆ. ಕೋಮು ವಿಷಬೀಜ ಬಿತ್ತುವವರ ಮೇಲೆ ಪೊಲೀಸರು ಯಾಕೆ ಕೇಸು ದಾಖಲಿಸುತ್ತಿಲ್ಲ ಎಂದು ಅವರು ಪ್ರಶ್ನೆ ಮಾಡಿದರು.
ಪ್ರಮುಖರಾದ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಮಹಮ್ಮದ್ ಕುಂಞಿ ವಿಟ್ಲ, ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ಬಿ.ಎ ಶಕೂರ್ ಹಾಜಿ ಕಲ್ಲೇಗ, ಎಚ್ ಮಹಮ್ಮದಾಲಿ, ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಯೂಸುಫ್ ಡ್ರೀಮ್ಸ್, ಇಕ್ಬಾಲ್ ಎಲಿಮಲೆ, ಉಮ್ಮರ್ ಕೆ.ಎಸ್ ಸುಳ್ಯ, ಎಂ.ಪಿ ಅಬೂಬಕ್ಕರ್, ಅಶ್ರಫ್ ಬಾವು ಹಾಗೂ ಯುವಜನ ಪರಿಷತ್ ಪದಾಧಿಕಾರಿಗಳು, ಸದಸ್ಯರು ಮತ್ತು ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮುಸ್ಲಿಂ ಯುವಜನ ಪರಿಷತ್ ಕೋಶಾಧಿಕಾರಿ ಶಾಕಿರ್ ಹಾಜಿ ಮನವಿ ಪತ್ರ ವಾಚಿಸಿದರು. ಸಂಚಾಲಕ ಅಡ್ವೊಕೇಟ್ ನೂರುದ್ದೀನ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.