ಹಿರಿಯ ನಾಗರಿಕರಿಗೆ 500 ಮನೆ : ಡಾ.ವೀರೇಂದ್ರ ಹೆಗ್ಗಡೆ ಘೋಷಣೆ

ಧರ್ಮಸ್ಥಳ ಅಂದರೆ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದ ಸ್ಥಳ. ಮಾತ್ರವಲ್ಲದೆ ಧರ್ಮ ಎಂದು ಕೇಳಿದಾಗ ಕೈ ಚಾಚಿ ಧರ್ಮ ನೀಡುವ ಪುಣ್ಯ ಕ್ಷೇತ್ರ ಆಗಿದೆ. ಹೌದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳವನ್ನು ಆ ರೀತಿ ಬೆಳವಣಿಗೆ ಮಾಡಿದ್ದಾರೆ ಅನ್ನುವ ಕೀರ್ತಿ ಇದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭದಲ್ಲಿ ಸೋಮವಾರ ಅನಾಥ ಹಿರಿಯ ನಾಗರಿಕರ ಪಾಲನೆ ಮತ್ತು ಪೋಷಣೆಗಾಗಿ 5 ಕೋಟಿ ವೆಚ್ಚದಲ್ಲಿ 500 ಮನೆಗಳನ್ನು ನಿರ್ಮಾಣ, 100 ಕೆರೆಗಳ ಪುನಶ್ಚೇತನ ಸೇರಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಘೋಷಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಆಪತ್ತು ಸಂಭವಿಸಿದಾಗ ತುರ್ತು ನೆರವು ಮತ್ತು ರಕ್ಷಣೆಗಾಗಿ 3 ಸಾವಿರ ಶೌರ್ಯ ಸ್ವಯಂ ಸೇವಕರ ತಂಡಗಳನ್ನು ರಚಿಸಲಾಗಿದ್ದು, ಸದ್ಯದಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಇದನ್ನು ಉದ್ಘಾಟಿಸಲಿದ್ದಾರೆ ಎಂದು ವೀರೇಂದ್ರ ಹೆಗ್ಗಡೆ ಅವರು ಪ್ರಸ್ತಾಪಿಸಿದ್ದಾರೆ.

ಅಲ್ಲದೆ ರಾಜ್ಯಸಭಾ ಸದಸ್ಯನ ನೆಲೆಯಲ್ಲಿ ಬೀದರ್‌ ಜಿಲ್ಲೆಯಲ್ಲಿ ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡಲು ಉದ್ದೇಶಿಸಿದ್ದು, ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ಸರ್ಕಾರದ ಸೇವೆಗಳನ್ನು ಜನರಿಗೆ ತಲುಪಿಸಲು ಈಗಾಗಲೇ 6,500 ಸಾಮಾನ್ಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಈ ವರ್ಷ ಇನ್ನೂ 1 ಸಾವಿರ ಸಾಮಾನ್ಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದಿದ್ದಾರೆ.

ಈಗಾಗಲೇ ಕಳೆದ ವರ್ಷದಂತೆ ಈ ವರ್ಷವೂ ಆಸ್ಪತ್ರೆಗಳಿಗೆ 3 ಸಿ.ಟಿ.ಸ್ಕ್ಯಾನ್‌, 365 ಸರ್ಕಾರಿ ಶಾಲೆಗಳಿಗೆ 2700 ಬೆಂಚು-ಡೆಸ್ಕ್‌ಗಳನ್ನು ವಿತರಣೆ, 100 ಕೆರೆಗಳ ಹೂಳೆತ್ತಿ ಪುನಶ್ಚೇತನಕ್ಕೆ ಕ್ರಮ, 40 ಶುದ್ಧಗಂಗಾ ಘಟಕಗಳ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ, ಉಜಿರೆಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ 47 ಲಕ್ಷ ರು. ನೆರವು ನೀಡಲಾಗುವುದು ಎಂದು ಹೆಗ್ಗಡೆಯವರು ಘೋಷಿಸಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದರು. ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಪ್ರೊ.ಎಸ್‌. ಪ್ರಭಾಕರ್‌, ಡಿ. ರಾಜೇಂದ್ರ ಕುಮಾರ್‌, ಮಾಣಿಲದ ಮೋಹನದಾಸ ಸ್ವಾಮೀಜಿ ಇತರರು ವೇದಿಕೆಯಲ್ಲಿ ಆಸೀನರಿದ್ದರು.

Leave A Reply

Your email address will not be published.