Ragi Upma Recipe : ತುಂಬಾ ಆರೋಗ್ಯಪೂರ್ಣ ರಾಗಿ ಉಪ್ಪಿಟ್ಟು ಮಾಡಿದ್ದೀರಾ? ಈ ರೀತಿ ಮಾಡಿದರೆ ತಿಂದವರು ವಾಹ್ ಎನ್ನದೇ ಸುಮ್ಮನಿರಲ್ಲ!!!

ಇಂದಿನ ದಿನಚರಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಊಟವೇ ಮಾಡದೇ ಇರುವವರು ಒಂದು ಕಡೆಯಾದರೆ, ಹೊಟ್ಟೆ ಬಿರಿಯುವಂತೆ ಸಿಕ್ಕಿದ್ದನ್ನೆಲ್ಲ ತಿಂದು ಅನಾರೋಗ್ಯಕ್ಕೆ ಎಡೆ ಮಾಡಿಕೊಡುವವರು ಮತ್ತೊಂದೆಡೆ .

ಆಹಾರ ಸೇವನೆಯಲ್ಲಿ ಪೌಷ್ಟಿಕ ತೆಯ ಜೊತೆಗೆ ನಿದ್ರಾ ಹೀನತೆ ಬೆರೆತು ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಮಾತು ಬಲ್ಲವನಿಗೆ ಜಗಳವಿಲ್ಲ… ಊಟ ಬಲ್ಲವನಿಗೆ ರೋಗವಿಲ್ಲ.. ಎಂಬ ಮಾತಿನಂತೆ ಹಿಂದಿನ ಕಾಲದಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ ಪ್ರಮೇಯವೇ ಕಡಿಮೆ ಎಂದರೆ ತಪ್ಪಾಗದು. ಆಗಿನ ಜೀವನ ಶೈಲಿಗೂ ಇಂದಿನ ಆಹಾರ ಕ್ರಮ ಜೀವನದ ವಿಧಾನಕ್ಕೆ ಅಜಗಜಾಂತರ ವ್ಯತ್ಯಾಸವಿದೆ.

ಹೆಚ್ಚಿನ ಜನರ ಬಾಯಲ್ಲಿ ನೀರೂರಿಸುವ ರಾಗಿ ಮುದ್ದೆ (Ragi Ball) ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂಬ ಅಭಿಪ್ರಾಯವಿದೆ. ಆದರೆ, ಕೆಲವರಿಗೆ ಬೆಳಗ್ಗೆ ರಾಗಿ ಮುದ್ದೆ ಮಾಡಲು ಸಮಯದ ಅಭಾವದಿಂದ ಇಲ್ಲವೇ ಗೃಹಿಣಿಯರು (Women) ಕೆಲಸಕ್ಕೆ ತೆರಳುವವರಾದರೆ ರಾಗಿ ಮುದ್ದೆ ತಯಾರಿಸಲು (Ragi ball making) ಸಾಧ್ಯವಾಗುವುದಿಲ್ಲ.

ಬದಲಾಗಿರುವ ಆಹಾರ ಕ್ರಮದಿಂದ ಒತ್ತಡದ ಜೀವನ ಶೈಲಿಗೆ ಒಗ್ಗಿಕೊಂಡು ತರಾತುರಿಯಲ್ಲಿ ಅವಸರದಲ್ಲಿ ಆರೋಗ್ಯಕರ ತಿಂಡಿ (Breakfast) ಮಾಡಿಕೊಳ್ಳಲು ಸಮಯ ಸಿಗುತ್ತಿಲ್ಲ. ಮ್ಯಾಗಿ ಅಂತಹ ತಿಂಡಿಗಳನ್ನೇ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಪರಿಪಾಠ ಮುಂದುವರೆದಿದೆ. ಆದರೆ ಇದು ಆ ಕ್ಷಣಕ್ಕೆ ಮಾತ್ರ ಹೊಟ್ಟೆ ತುಂಬಬಹುದು.

ಹಾಗಾಗಿ ಇಂದು ನಾವು ಪೌಷ್ಠಿಕಾಂಶಗಳನ್ನು ಒಳಗೊಂಡಿರುವ ರಾಗಿ ಉಪ್ಪಿಟ್ಟು ತಯಾರಿಸುವ ಕುರಿತು ಮಾಹಿತಿ ನೀಡಲಿದ್ದೇವೆ.

ಸಾಮಾನ್ಯವಾಗಿ ಮಾಡುವ ಉಪ್ಪಿಟ್ಟಿನ ರೀತಿಯಲ್ಲಿಯೇ ಇದನ್ನು ತಯಾರಿಸಬಹುದಾಗಿದ್ದು, ಆರಂಭದಲ್ಲಿ ರಾಗಿ ಹಿಟ್ಟು ಹುರಿದುಕೊಳ್ಳುವಾಗ ಎಚ್ಚರದಿಂದಿರಬೇಕು.

ರಾಗಿ ಉಪ್ಪಿಟ್ಟು ಮಾಡುವ ವಿಧಾನಕ್ಕಾಗಿ ಹಿಟ್ಟು ಒಂದು ಕಪ್, ಚಿರೋಟಿ ರವೆ ಒಂದು ಕಪ್ ಕತ್ತರಿಸಿದ ಈರುಳ್ಳಿ ಒಂದು ಕಪ್, ಹಸಿಮೆಣಸಿನಕಾಯಿ 4 ರಿಂದ 5, ಕರಿಬೇವು 4 ರಿಂದ 5, ಜೀರಿಗೆ, ಸಾಸವೆ ಒಂದು ಟೀ ಸ್ಪೂನ್ ಅರಿಶಿಣ, ಚಿಟಿಕೆ ಇಂಗು, ಚಿಟಿಕೆ ಉದ್ದಿನಬೇಳೆ, ಒಂದು ಟೀ ಸ್ಪೂನ್ ಕಡಲೆಬೇಳೆ, ಅರ್ಧ ಟೀ ಸ್ಪೂನ್ ಟೊಮಾಟೋ ಅರ್ಧ ಕಪ್, ಕೊತ್ತಂಬರಿ ಸೊಪ್ಪು, ಗೋಡಂಬಿ: 4 ರಿಂದ 5, ಎಣ್ಣೆ ಕೊನೆಗೆ ಉಪ್ಪು ರುಚಿಗೆ ತಕ್ಕಷ್ಟು ಮೇಲೆ ತಿಳಿಸಿದ ಸಾಮಗ್ರಿ ಬಳಸಿ ಸರಳ ರುಚಿಕರ ಉಪ್ಪಿಟ್ಟು ತಯಾರಿಸಬಹುದು.

ಮೊದಲಿಗೆ ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ಆದರೆ, ಹುರಿಯುವಾಗ ರಾಗಿ ಹಿಟ್ಟು ಕಪ್ಪು ಆಗದಂತೆ ಎಚ್ಚರ ವಹಿಸಬೇಕು. ರಾಗಿ ಹಿಟ್ಟು ಕಪ್ಪಾದ್ರೆ ಉಪ್ಪಿಟ್ಟಿನ ರುಚಿ ಕೆಡುತ್ತದೆ. ನಂತರ ಇದೇ ಪ್ಯಾನ್​​ನಲ್ಲಿ ರವೆಯನ್ನು ಹುರಿದುಕೊಳ್ಳಬೇಕು.

ರವೆ ಮತ್ತು ರಾಗಿ ಹಿಟ್ಟು ಹುರಿದುಕೊಂಡ ನಂತರ ತರಕಾರಿಯನ್ನು ಕತ್ತರಿಸಿಕೊಳ್ಳಬೇಕು. ಗ್ಯಾಸ್​ ಸ್ಟೌವ್ ಅನ್ ಮಾಡಿಕೊಂಡು ದೊಡ್ಡದಾದ ಪಾತ್ರೆ ಇರಿಸಿಕೊಂಡು ಒಗ್ಗರಣೆಗೆ ಸಿದ್ಧತೆ ಮಾಡಿಕೊಂಡು ,ಮತ್ತೊಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟು ನೀರು ಬಿಸಿ ಮಾಡಿಕೊಳ್ಳಬೇಕು.

ಒಗ್ಗರಣೆಗೆ ಮೊದಲಿಗೆ ಎಣ್ಣೆ ಹಾಕಿಕೊಂಡು ಎಣ್ಣೆ ಬಿಸಿಯಾದ ನಂತರ ಸಾಸಿವೆ, ಜೀರಿಗೆ ಹಾಕಿದ ಬಳಿಕ ಕಡ್ಲೆಬೇಳೆ, ಗೋಡಂಬಿ , ಉದ್ದಿನಬೇಳೆ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.

ತದನಂತರ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವರೆಗೂ ಹುರಿದುಕೊಳ್ಳಬೇಕು. ಬಳಿಕ ಹಸಿ ಮೆಣಸಿನಕಾಯಿ, ಕರಿಬೇವು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಬೇಕು.

ಕೊನೆಗೆ ಟೊಮಾಟೋ ಸೇರಿಸಿ ಅದು ಸಾಫ್ಟ್ ಆಗೋವರೆಗೂ ಬೇಯಿಸಿಕೊಳ್ಳಬೇಕು. ನಂತರ ಚಿಟಿಕೆ ಅರಿಶಿನ, ಉಪ್ಪು ಮತ್ತು ಇಂಗು ಸೇರಿಸಿ ಫ್ರೈ ಮಾಡಬೇಕು.

ಒಗ್ಗರಣೆ ಮಸಾಲೆ ಸಿದ್ಧವಾಗುತ್ತಿದ್ದಂತೆ ಮೊದಲಿಗೆ ಹುರಿದಿಟ್ಟುಕೊಂಡಿರುವ ರವೆ ಮತ್ತು ರಾಗಿ ಹಿಟ್ಟು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ರವೆ ಮತ್ತು ರಾಗಿ ಮಿಕ್ಸ್ ಮಾಡುವಾಗ ಉರಿಯನ್ನು ಕಡಿಮೆ ಮಾಡಿಕೊಳ್ಳಬೇಕು. ಇಲ್ಲಾದಿದ್ದರೆ ಗಂಟು ಗಂಟು ಆಗುವ ಸಾಧ್ಯತೆಗಳಿರುತ್ತವೆ.

ಒಗ್ಗರಣೆ ಜೊತೆ ರವೆ ಮತ್ತು ರಾಗಿಹಿಟ್ಟು ಮಿಶ್ರಣ ಆಗುತ್ತಿದ್ದಂತೆ ನೀರು ಸೇರಿಸಿ ನಾಲ್ಕರಿಂದ ಐದು ನಿಮಿಷ ಬೇಯಿಸಬೇಕು. ಕೊನೆಗೆ ಸಿದ್ಧವಾದ ರಾಗಿ ಉಪ್ಪಿಟ್ಟು ಮೇಲೆ ಕೋತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿದ್ರೆ ಉಪ್ಮಾ ರೆಡಿಯಾಗುತ್ತದೆ.

ಸಿದ್ಧವಾದ ಉಪ್ಮಾವನ್ನು ಹಸಿ ತೆಂಗಿನಕಾಯಿ ಚಟ್ನಿ ಅಥವಾ ಟೊಮಾಟೋ ಚಟ್ನಿ ಜೊತೆ ಸವಿಯಬಹುದು.

ಬೆಳ್ಳುಳ್ಳಿ ಸೇವಿಸಲು ಇಷ್ಟಪಡುವವರು ಈರುಳ್ಳಿ ಬದಲಾಗಿ ಇದನ್ನು ಬಳಸಬಹುದು. ಶುಚಿ ರುಚಿಯಾದ ಉಪ್ಪಿಟ್ಟು ಆರೋಗ್ಯಕ್ಕೆ ಕೂಡ ಒಳ್ಳೆಯದು ಹಾಗೂ ಹೊಟ್ಟೆಯು ತುಂಬುತ್ತದೆ.

Leave A Reply

Your email address will not be published.