Deepavali : ದೀಪಾವಳಿ ಪಟಾಕಿ ಸಿಡಿಸಲು ಸಮಯ ನಿಗದಿ : ರಾಜ್ಯ ಸರ್ಕಾರದಿಂದ ಆದೇಶ!!!

ದೀಪಾವಳಿ ಬೆಳಕಿನ ಹಬ್ಬದ ಪ್ರಯುಕ್ತ ಜನರ ಹಿತದೃಷ್ಟಿ ಸಲುವಾಗಿ ಮತ್ತು ಹಬ್ಬದ ಆಚರಣೆ ಪ್ರಯುಕ್ತ ಸರ್ಕಾರ ಮುಖ್ಯವಾದ ಸುತ್ತೋಲೆ ಸಿದ್ಧಪಡಿಸಿದೆ.

ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪಟಾಕಿ ಸಿಡಿಸಲು ಸಮಯ ನಿಗದಿ ಮಾಡಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸುತ್ತೋಲೆ ಹೊರಡಿಸಿದೆ.

ಹೌದು ಈಗಾಗಲೇ ಬೆಳಕಿನ ಹಬ್ಬ ದೀಪಾವಳಿ ಸಡಗರ-ಸಂಭ್ರಮ ರಾಜ್ಯಾದ್ಯಂತ ಮನೆ ಮಾಡಿದೆ. ಈ ನಡುವೆ ಪಟಾಕಿ ಹಚ್ಚಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಬಂಧ ವಿಧಿಸಿದೆ.

ಅಕ್ಟೋಬರ್ 24 ಮತ್ತು 26ರವರೆಗೆ ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ದಿನದ 2 ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬೇಕು ಎಂದು ಷರತ್ತು ಬದ್ಧ ಎಚ್ಚರಿಕೆ ನಿಯಮ ಹೊರಡಿಸಿದ್ದಾರೆ. ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಷೇಧಿತ ಅವಧಿಯಲ್ಲಿ ಪಟಾಕಿ ಸಿಡಿಸುವುದು ಅಥವಾ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಅಲ್ಲದೆ, ಪಟಾಕಿ ಸಿಡಿಸುವವರು ಘನತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಹಬ್ಬದ ವೇಳೆ ಸುಪ್ರೀಂ ಕೋರ್ಟ್‌ ನೀಡಿದ ನಿರ್ದೇಶನ ಪಾಲಿಸುವಂತೆ ಮಂಡಳಿ ಸೂಚಿಸಿದೆ. ಈ ವಿಚಾರವಾಗಿ ಆಯಾ ಜಿಲ್ಲಾಧಿಕಾರಿಗಳು, ನಗರ ಪೊಲೀಸ್‌ ಆಯುಕ್ತರು, ಅಗ್ನಿಶಾಮಕ, ತುರ್ತು ಸೇವೆಗಳ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರಿಗೆ ಸುತ್ತೋಲೆ ಹೊರಡಿಸಲಾಗಿದೆ.

ಸುಪ್ರೀಂ ಕೋರ್ಟ್ ನಿಯಮಾವಳಿ ಪ್ರಕಾರ ನಿಯಮಗಳನ್ನು ಕಡ್ಡಾಯ ಪಾಲನೆ ಮಾಡಬೇಕು. 125 ಡೆಸಿಬೆಲ್ ಗಿಂತ ಕಡಿಮೆ ಇರುವ ಪಟಾಕಿ ಬಳಸಬೇಕು. ಪಟಾಕಿ ಮಾರುವವರಿಗೆ ತ್ಯಾಜ್ಯ ವಿಲೇವಾರಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಆದೇಶಿಸಲಾಗಿದೆ.

ಅಲ್ಲದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಷಯ ಕೋರಿದ್ದಾರೆ. ”ದೀಪಾವಳಿ ಹಬ್ಬ ನಾಡಿನ ಸಮಸ್ತರಿಗೂ ಬೆಳಕು ತರಲಿ. ಪರಿಸರ ಉಳಿಸುವ ಸಲುವಾಗಿ ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ. ಶಬ್ದ ಹಾಗೂ ವಾಯು ಮಾಲಿನ್ಯ ತಡೆಯೋಣ. 125 ಡೆಸಿಬಿಲ್‌ಗಿಂತ ಕಡಿಮೆ ಇರುವ ಪಟಾಕಿಗಳನ್ನು ಬಳಸಿ” ಎಂದು ಹೇಳಿದ್ದಾರೆ.

ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರವು ಜನತೆಗೆ ಎಚ್ಚರಿಕೆ ಸಹ ನೀಡಲಾಗಿದೆ.

Leave A Reply

Your email address will not be published.