ವಾಹನ ಸವಾರರು ಧರಿಸುವ ಹೆಲ್ಮೆಟ್ ಮೇಲೆ ಹದ್ದಿನ ಕಣ್ಣಿಡಲಿದೆ ಕ್ಯಾಮರಾ!! | ನವೆಂಬರ್ ನಿಂದಲೇ ಜಾರಿಯಾಗಲಿದೆ ನ್ಯೂ ರೂಲ್ಸ್

ವಾಹನ, ರಸ್ತೆ, ಸಾರಿಗೆ ಹಾಗೂ ಹೆದ್ದಾರಿಗಳ ನಿಯಮಗಳಲ್ಲಿ ಹೊಸ ಬದಲಾವಣೆಗಳನ್ನು ತರುತ್ತಲೇ ಇದೆಂ ಈಗ ಮತ್ತೊಂದು ಮಹತ್ವದ ಬದಲಾವಣೆ ತರಲು ಮುಂದಾಗಿದ್ದು, ಸವಾರರ ಹಿತದೃಷ್ಟಿಯಿಂದ ಕಳಪೆ ಗುಣಮಟ್ಟದ ಹೆಲ್ಮೆಟ್‌ ನಿರ್ಮೂಲನೆಗೆ ಮುಂದಾಗಿದೆ.

ಹೌದು. ಬೆಂಗಳೂರು ಸಂಚಾರ ವಿಭಾಗದ ಪೊಲೀಸರು, ಕಳಪೆ ಗುಣಮಟ್ಟದ ಹೆಲ್ಮೆಟ್‌ ಧರಿಸುವವರ ಮೇಲೆ 500ರೂ. ದಂಡ ವಿಧಿಸಲು ನಿರ್ಧರಿಸಿದ್ದಾರೆ. ಕಿವಿ ಮುಚ್ಚುವಷ್ಟು ಇಲ್ಲದ ಹಾಗೂ ಐಎಸ್‌ಐ ಮುದ್ರೆ ಹೊಂದಿಲ್ಲದ ಹೆಲ್ಮೆಟ್‌ಗಳನ್ನು ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳೆಂದು ಪೊಲೀಸರು ಪರಿಗಣಿಸಿದ್ದಾರೆ. ಹೆಲ್ಮೆಟ್‌ ಖರೀದಿಸುವ ಮುನ್ನ ಐಎಎಸ್‌ ಮುದ್ರೆ ಪರಿಶೀಲಿಸುವಂತೆ ಗ್ರಾಹಕರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮೊದಲ ಹಂತದಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಹಾಫ್‌ ಹೆಲ್ಮೆಟ್‌ ಧರಿಸುವ ಪೊಲೀಸರಿಗೆ ವಿಶೇಷ ಕಾರ್ಯಾಚರಣೆ ಕೈಗೊಂಡು ಬಿಸಿ ಮುಟ್ಟಿಸಿರುವ ಸಂಚಾರ ವಿಭಾಗದ ಪೊಲೀಸರು, ಇದುವರೆಗೆ 140 ಪೊಲೀಸರಿಗೆ ದಂಡ ವಿಧಿಸಿದ್ದಾರೆ. ತಮ್ಮ ಇಲಾಖೆಯಲ್ಲಿ ಹಾಫ್‌ ಹೆಲ್ಮೆಟ್‌ ಬಳಕೆ ನಿಷೇಧ ನಿಯಮವನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕಿಳಿಸಿದ ಬಳಿಕ ಪೊಲೀಸರು ಎರಡನೇ ಹಂತದಲ್ಲಿ ಸಾರ್ವಜನಿಕರಿಗೆ ದಂಡ ವಿಧಿಸಲು ತೀರ್ಮಾನಿಸಿದ್ದಾರೆ. ಈ ಹಿನ್ನಲೆಯಲ್ಲಿ ನವೆಂಬರ್‌ನಲ್ಲಿ ಹೆಲ್ಮೆಟ್‌ ದಂಡ ವಿಧಿಸುವ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ.

ಮೋಟಾರು ಕಾಯ್ದೆ 129 ಐಎಂಎ ಪ್ರಕಾರ, ಬೈಕ್‌ ಸವಾರ ಹೆಲ್ಮೆಟ್‌ ಧರಿಸದಿರುವುದು ತಪ್ಪು ಎಂದು ಹೇಳುತ್ತದೆ. ಈ ತಪ್ಪಿಗೆ ಸೆಕ್ಷನ್‌ 194ಡಿ ಅನ್ವಯ 500 ದಂಡ ವಿಧಿಸಲಾಗುತ್ತದೆ. ಅದೇ ರೀತಿ ಹಿಂಬದಿ ಸವಾರನಿಗೆ ಕರ್ನಾಟಕ ಮೋಟಾರು ವಾಹನ ನಿಯಮ-1 ಅನ್ವಯ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ನಗರದ ಪ್ರಮುಖ 50 ಜಂಕ್ಷನ್‌ಗಳಲ್ಲಿ ಕೂಡಾ ಕಳಪೆ ಹೆಲ್ಮೆಟ್‌ ಧರಿಸುವವರ ಮೇಲೆ ಕ್ಯಾಮರಾಗಳು ಹದ್ದಿನ ಕಣ್ಣಿಡಲಿವೆ. ಈಗಾಗಲೇ ಈ ಕ್ಯಾಮರಾಗಳನ್ನು ಆಪ್‌ಡೇಟ್‌ ಮಾಡಲಾಗಿದೆ. ಹಾಪ್‌ ಹೆಲ್ಮೆಟ್‌ ಹಾಕಿದ್ದರೆ ಅಂಥವರನ್ನು ಹೆಲ್ಮೆಟ್‌ ಧರಿಸದಿರುವವರು ಎಂದು ಫೋಟೋ ಕ್ಲಿಕಿಸಿ ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ)ಗೆ ರವಾನೆಯಾಗಲಿದೆ. ಈ ಭಾವಚಿತ್ರದ ಆಧರಿಸಿ ಆ ಬೈಕ್‌ ಸವಾರ ಅಥವಾ ಹಿಂಬದಿ ಸವಾರನಿಗೆ ದಂಡ ವಿಧಿಸಿ ನೋಟಿಸನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕಳಪೆ ಅಥವಾ ಹಾಫ್‌ ಹೆಲ್ಮೆಟ್‌ ಬಗ್ಗೆ ಜಾಗೃತಿ ಅಭಿಯಾನ ಮುಗಿದ ಬಳಿಕ ತಪ್ಪು ಮಾಡಿದವರಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಈ ವಿಚಾರದಲ್ಲಿ ಮೊದಲು ನಮ್ಮ ಮನೆಯನ್ನು (ಪೊಲೀಸ್‌ ಇಲಾಖೆ) ಸ್ವಚ್ಛಗೊಳಿಸಬೇಕಿತ್ತು. ಅಂತೆಯೇ ಹಾಫ್‌ ಹೆಲ್ಮೆಟ್‌ ಧರಿಸಿದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಸಂಚಾರ ವಿಭಾಗದ ಪೊಲೀಸರಿಗೆ ತಾಕೀತು ಮಾಡಲಾಯಿತು. ಈ ಸೂಚನೆಯನ್ನು ಸಿಬ್ಬಂದಿ ಪಾಲಿಸಿದರು ಎಂದು ಜಂಟಿ ಪೊಲೀಸ್‌ ಆಯುಕ್ತ ಸಂಚಾರ ರವಿಕಾಂತೇಗೌಡ ತಿಳಿಸಿದ್ದಾರೆ.

Leave A Reply

Your email address will not be published.