Kantara: ಕಾಂತಾರ ಸಿನಿಮಾ‌ ವೀಕ್ಷಣೆ ಮಾಡಲಿರುವ ವೀರೇಂದ್ರ ಹೆಗ್ಗಡೆ ಹಾಗೂ ಕುಟುಂಬ | ಇಂದು ಇವರ ಅಭಿಪ್ರಾಯ ಬಹಳ ಮುಖ್ಯ!!!

ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ‌ ಎಲ್ಲಾ ವರ್ಗದ ಜನರನ್ನು ಸೆಳೆದು, ಬ್ಲಾಕ್ ಬ್ಲಸ್ಟರ್ ಹಿಟ್ ಆಗಿದೆ. ರಿಷಬ್ ಶೆಟ್ಟಿ (Rishab Shetty) ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬಂದಿರುವ ಈ ಚಿತ್ರ ಹಲವು ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರಭಾಸ್, ಅನುಷ್ಕಾ ಶೆಟ್ಟಿ, ಕಂಗನಾ ರಣಾವತ್ ಸೇರಿದಂತೆ ಹಲವರು ತಮ್ಮ ಪ್ರಶಂಸೆ ವ್ಯಕ್ತಪಡಿಸಿದ್ದಾಗಿದೆ.

ಈಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ (Veerendra Hegade) ಅವರು ಕೂಡ ‘ಕಾಂತಾರ’ ನೋಡುತ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಇಂದು (ಅ.21) ಸಂಜೆ 7 ಗಂಟೆಗೆ ಮಂಗಳೂರಿನ ಪ್ರಭಾತ್ ಚಿತ್ರಮಂದಿರದಲ್ಲಿ ಕುಟುಂಬ ಸಮೇತರಾಗಿ ಸಿನಿಮಾ ವೀಕ್ಷಿಸಲಿದ್ದಾರೆ. ಚಿತ್ರ ನೋಡಿದ ಬಳಿಕ ಅವರು ಯಾವ ರೀತಿಯ ಅಭಿಪ್ರಾಯ ತಿಳಿಸಲಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹೆಚ್ಚಿದೆ.

‘ಕಾಂತಾರ’ ಸಿನಿಮಾ ಎಷ್ಟು ಬೇಗ ಹಿಟ್ ಆಯಿತೋ ಅಷ್ಟೇ ವೇಗದಲ್ಲಿ ಚರ್ಚೆ, ವಿವಾದಗಳು ಉಂಟಾದವು. ಈ ಚಿತ್ರದಲ್ಲಿ ತೋರಿಸಲಾದ ಭೂತಕೋಲವು ಹಿಂದು ಧರ್ಮಕ್ಕೆ ಸೇರಿದ್ದಲ್ಲ ಎಂದು ‘ಆ ದಿನಗಳು’ ಚೇತನ್ ಅವರು ವಿವಾದದ ಕಿಡಿ ಹತ್ತಿಸಿದರು. ಆ ಕುರಿತು ಪರ-ವಿರೋಧದ ಚರ್ಚೆ ಹುಟ್ಟಿಕೊಂಡಿತ್ತು. ದೈವ ನರ್ತಕರು, ಧಾರ್ಮಿಕ ಮುಖಂಡರು, ಭಕ್ತರು ಸೇರಿದಂತೆ ಅನೇಕರು ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಈ ವೇಳೆ ವೀರೇಂದ್ರ ಹೆಗ್ಗಡೆ ಅವರು ತಿಳಿಸಲಿರುವ ಅಭಿಪ್ರಾಯ ತುಂಬ ಮುಖ್ಯವಾಗಲಿದೆ.

ತುಳುನಾಡಿನ ಸಂಸ್ಕೃತಿಯನ್ನು ‘ಕಾಂತಾರ’ ಸಿನಿಮಾದಲ್ಲಿ ತೋರಿಸಲಾಗಿದೆ. ಭೂತಾರಾಧನೆಗೆ ಸಂಬಂಧಿಸಿದಂತೆ ಈ ಚಿತ್ರದಲ್ಲಿ ಹಲವು ದೃಶ್ಯಗಳಿವೆ. ಈ ಸನ್ನಿವೇಶಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ವೀರೇಂದ್ರ ಹೆಗ್ಗಡೆ ಅವರು ಸಿನಿಮಾ ನೋಡಿದ ಬಳಿಕ ಏನು ಹೇಳಲಿದ್ದಾರೆ ಎಂಬುದರ ಮೇಲೆ ಈ ಚರ್ಚೆಗೆ ಹೊಸ ಆಯಾಮ ಸಿಗುವ ಸಾಧ್ಯತೆ ಇದೆ. ‘ಹೊಂಬಾಳೆ ಫಿಲ್ಮ್’ ಬ್ಯಾನರ್‌ನಲ್ಲಿ ‘ಕಾಂತಾರ’ ಸಿನಿಮಾ ಮೂಡಿಬಂದಿದೆ. ಪರಭಾಷೆಗೂ ಡಬ್ ಆಗಿ ಬಿಡುಗಡೆ ಆಗಿದ್ದು, ಭರ್ಜರಿ ಕಲೆಕ್ಷನ್ ಆಗುತ್ತಿದೆ. ಇದರಿಂದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಭರ್ಜರಿ ಕಲೆಕ್ಷನ್ ಮಾಡಿದೆ ಎಂದೇ ಹೇಳಬಹುದು.

Leave A Reply

Your email address will not be published.