KSRTC ಸಿಬ್ಬಂದಿಗಳಿಗೆ ಗುಡ್ ನ್ಯೂಸ್ | ಇದೇ ಮೊದಲ ಬಾರಿಗೆ 50 ಲಕ್ಷ ರೂ. ಅಪಘಾತ ವಿಮಾ ಸೌಲಭ್ಯ

ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ಅಪಘಾತದಲ್ಲಿ ಮೃತಪಟ್ಟರೆ ಅವಲಂಬಿತರಿಗೆ ಈವರೆಗೆ ಯಾವುದೇ ಪರಿಹಾರ ಸಿಗುತ್ತಿರಲಿಲ್ಲ. ಹೀಗಾಗಿ, ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಇದೇ ಮೊದಲ ಬಾರಿಗೆ ಕೆಎಸ್ ಆರ್ ಟಿಸಿ ಸಿಬಂದಿಗಳು ಹಾಗೂ ಅವರ ಅವಲಂಬಿತರಿಗಾಗಿ 50 ಲಕ್ಷ ರೂ. ಅಪಘಾತ ವಿಮೆ ಪ್ಯಾಕೇಜ್ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಅಪಘಾತ ವಿಮಾ ಪ್ಯಾಕೇಜ್ ಯೋಜನೆಯ ಒಡಂಬಡಿಕೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ಶಾಸಕ, ಕೆಎಸ್ ಆರ್ ಟಿಸಿ ಅಧ್ಯಕ್ಷರಾದ ಎಂ. ಚಂದ್ರಪ್ಪರವರ ಸಮ್ಮುಖದಲ್ಲಿ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಎಂ ಪಂಕಜ್ ತಪ್ಲಿಯಾಲ್ ಅವರು ಬುಧವಾರ ಸಹಿ ಹಾಕಿದರು.

ಹೊಸ ಯೋಜನೆಯಿಂದ ಎಸ್‌ ಬಿ ಐ ಬ್ಯಾಂಕ್‌ನಲ್ಲಿ ವೇತನ ಖಾತೆ ಹೊಂದಿರುವ ನೌಕರರಿಗೆ ಪ್ರೀಮಿಯಂ ರಹಿತ ವೈಯಕ್ತಿಕ ಅಪಘಾತ ವಿಮೆ ಲಭ್ಯವಾಗಲಿದೆ. ನಿಗಮದ ಶೇ55ಕ್ಕೂ ಹೆಚ್ಚು ಸಿಬ್ಬಂದಿ ಎಸ್‌ಬಿ ಐ ನಲ್ಲಿ ವೇತನ ಖಾತೆ ಹೊಂದಿದ್ದಾರೆ.

ಈ ವೈಯಕ್ತಿಕ ವಿಮಾ ಯೋಜನೆ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟರೆ ಅವರ ಅವಲಂಬಿತರಿಗೆ 50 ಲಕ್ಷ ಪರಿಹಾರ ದೊರೆಯಲಿದೆ. ಶಾಶ್ವತ ಅಂಗವಿಕಲರಾದರೆ 20 ಲಕ್ಷ ಹಾಗೂ ಭಾಗಶಃ ಅಂಗವಿಕಲರಾದರೆ 10 ಲಕ್ಷ ವಿಮಾ ಪರಿಹಾರ ದೊರೆಯಲಿದೆ. ಅಲ್ಲದೆ, ಕರ್ತವ್ಯದಲ್ಲಿ ಇಲ್ಲದ ಅವಧಿಯಲ್ಲಿ ಅಪಘಾತ ಸಂಭವಿಸಿದರೂ ಪಾಲಿಸಿದಾರರಿಗೆ ವಿಮಾ ಸೌಲಭ್ಯ ಲಭ್ಯವಾಗಲಿದೆ. ಸಿಬಂದಿಗಳ ಅಪಘಾತದಲ್ಲಿನ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗಾಗಿ ಗರಿಷ್ಟ ರೂ.10 ಲಕ್ಷ, ಔಷಧಗಳ ಆಮದಿಗಾಗಿ ಗರಿಷ್ಟ ರೂ.5 ಲಕ್ಷ, ಕೋಮಾದಲ್ಲಿ ಮೃತಪಟ್ಟರೆ ಹೆಚ್ಚುವರಿ ರೂ.2 ಲಕ್ಷ (ರೂ.50 ಲಕ್ಷ + ರೂ.2 ಲಕ್ಷ), ಏರ್ ಅಂಬ್ಯೂಲೆನ್ಸ್ ಸೇವೆಗೆ ರೂ.10 ಲಕ್ಷ ವಿಮಾ ಪರಿಹಾರ ನೀಡಲಾಗುವುದು. ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟರೆ ಅವರ ಮಕ್ಕಳ ಪದವಿ ಶಿಕ್ಷಣಕ್ಕೆ ಗರಿಷ್ಠ 5 ಲಕ್ಷ ಹಾಗೂ ಹೆಣ್ಣುಮಗಳ ವಿವಾಹಕ್ಕೆ ಗರಿಷ್ಠ ₹5 ಲಕ್ಷದ ತನಕ ಆರ್ಥಿಕ ಸಹಾಯವನ್ನೂ ಈ ವಿಮೆ ಒಳಗೊಂಡಿದೆ ಎಂದು ನಿಗಮ ವಿವರಿಸಿದೆ.

ನಿಗಮವು ಜಾರಿಗೊಳಿಸುತ್ತಿರುವ ಈ ವಿಮಾ ಯೋಜನೆಯು ಕಾರ್ಮಿಕ ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ ಜಾರಿಗೊಳಿಸುತ್ತಿರುವ ಉತ್ತಮವಾದ ಯೋಜನೆಯಾಗಿದೆ, ಭಾರತೀಯ ಸ್ಟೇಟ್ ಬ್ಯಾಂಕ್ ರವರ ಸಹಯೋಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರಸ್ತೆ ಸಾರಿಗೆ ನಿಗಮಗಳಲ್ಲಿಯೇ ಅತ್ಯಧಿಕ ಮೊತ್ತದ ಅಪಘಾತ ( On duty ಮತ್ತು Off duty ಒಳಗೊಂಡಂತೆ ನೀಡಲಾಗುವ ವಿಮಾ ಯೋಜನೆಯಾಗಿರುವುದಾಗಿ ಎಂ. ಚಂದ್ರಪ್ಪ ಹೇಳಿದರು.

Leave A Reply

Your email address will not be published.