Viral Video | ಈ ಸರ್ಕಾರೀ ಶಾಲೆಯ ವಿದ್ಯಾರ್ಥಿನಿಯರ ಇಂಗ್ಲಿಷ್ ಮಾತಾಡೋ ಸ್ಟೈಲ್ ಕೇಳಿದ್ರೆ, ಬ್ರಿಟಿಷರು ನಾಚಿಕೊಳ್ಳೋದು ಪಕ್ಕಾ !!

ಆಂಧ್ರಪ್ರದೇಶದ ಈ ಸರ್ಕಾರೀ ಶಾಲೆಯ ವಿದ್ಯಾರ್ಥಿನಿಯರ ಇಂಗ್ಲಿಷ್ ಕೇಳಿದರೆ, ನಿಮ್ಮಲ್ಲಿ ಒಂದಿಷ್ಟು ಕೀಳರಿಮೆ ಮೂಡುವುದಂತೂ ಖಚಿತ. ಆ ಮಟ್ಟಿಗೆ ಬ್ರಿಟಿಷ್ ನೆಲದಲ್ಲಿ ಹುಟ್ಟಿ ಬಂದವರೇನೋ ಅನ್ನಿಸುವಷ್ಟರ ಅಸೆಂಟ್ ನಲ್ಲಿ ಅವರು ಇಂಗ್ಲಿಷ್ ಪಟ ಪಟ ಹೊಡೆಯುವ ವೀಡಿಯೋ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಯವರು ಅಲ್ಲಿನ ಎಲಿಮೆಂಟರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ಶಿಕ್ಷಣವನ್ನು ಜಾರಿಗೊಳಿಸಿದ್ದಾರೆ. ಇದರ ಅನುಷ್ಟಾನದ ಪ್ರಗತಿ ತಿಳಿದುಕೊಳ್ಳುವ ಸಲುವಾಗಿ ಇತ್ತೀಚೆಗೆ ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸಿದ್ದರು. ಆಗ ಹೊರ ಬಂದಿತ್ತು, ಸರ್ಕಾರಿ ಶಾಲೆಯ ಹುಡುಗಿಯರ ಇಂಗ್ಲಿಷ್ ಪ್ರೌಢಿಮೆ.

ಆಂಧ್ರದ ಗೋದಾವರಿ ಜಿಲ್ಲೆಯ ತೊಂಡಂಗಿ ಮಂಡಲದಲ್ಲಿರುವ ಬೆಂಡಪುಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರ ಪಾಶ್ಚಾತ್ಯ ಶೈಲಿಯ ಸ್ಪೋಕನ್ ಇಂಗ್ಲೀಷ್, ಅವರ ಆತ್ಮವಿಶ್ವಾಸ, ಮಾತನಾಡುವ ಶೈಲಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸ್ವತಃ ಸಿಎಂ ಜಗನ್‌ ಮೋಹನ್ ರೆಡ್ಡಿ ವಿದ್ಯಾರ್ಥಿಗಳ ಕಾನ್ರಿಡೆನ್ಸ್ ನೋಡಿ ಬೆರಗಾಗಿದ್ದಾರೆ.

ವಿದ್ಯಾರ್ಥಿನಿಯರ ಈ ಸಕ್ಸಸ್ ನ ಹಿಂದಿನ ವ್ಯಕ್ತಿಯೇ ಅಲ್ಲಿನ ಶಿಕ್ಷಕರೊಬ್ಬರು. ಸ್ವತಃ ತೆಲುಗು ಮಾಧ್ಯಮದಲ್ಲಿ ಓದಿ ಇಂಗ್ಲಿಷ್ ಮಾತನಾಡದ್ದಕ್ಕೆ ಮೂದಲಿಕೆಗೊಳಗಾಗಿದ್ದ 42 ರ ಹರೆಯದ ಶಿಕ್ಷಕ ಜಿ.ವಿ. ಪ್ರಸಾದ್, ಇಂಗ್ಲಿಷ್ ಕಲಿಕೆಯನ್ನು ಸವಾಲಾಗಿ ಸ್ವೀಕರಿಸಿ ತಮ್ಮ ವಿದ್ಯಾರ್ಥಿಗಳ ಇಂಗ್ಲಿಷ್ ಕಲಿಕೆಯನ್ನು ತರಬೇತುಗೊಳಿಸಿದ್ದು, ಇದರ ವಿಡಿಯೋ ದೇಶಾದ್ಯಂತ ಗಮನ ಸೆಳೆದಿದೆ.

ಸರ್ಕಾರಿ ಶಾಲೆಗಳಲ್ಲೂ ಇಂಗ್ಲೀಷ್ ಮೀಡಿಯಂ ಜಾರಿಗೊಳಿಸುವ ಮೂಲಕ ಜಗಮ್ಮೋಹನ್ ರೆಡ್ಡಿ ನೆರವಾಗಿದ್ದಕ್ಕೆ ವಿದ್ಯಾರ್ಥಿನಿಯರು ಧನ್ಯವಾದ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಇಂಗ್ಲಿಷ್ ಮಾತನಾಡುವ ವೀಡಿಯೋ ಅನ್ನು ನೀವು ಕೇಳಲೇ ಬೇಕು.

Leave A Reply

Your email address will not be published.