BIGG NEWS ಮಂಗಳೂರು : ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾದ ದಿ.ಪ್ರವೀಣ್ ನೆಟ್ಟಾರು ಪತ್ನಿ !!!

ಮಂಗಳೂರು: ಬಿಜೆಪಿ ಯುವ ಮುಖಂಡ ದಿ.ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನಕುಮಾರಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರು ಇಂದು ( ಗುರುವಾರ) ಬೆಳಗ್ಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರಿಂದ ನೇಮಕಾತಿ ಆದೇಶಪತ್ರವನ್ನು ಸ್ವೀಕರಿಸಿದ್ದಾರೆ.

ದಿ. ಪ್ರವೀಣ್ ನೆಟ್ಟಾರು ಪತ್ನಿ ನೂತನಕುಮಾರಿ ಅವರು ಜಿಲ್ಲಾಧಿಕಾರಿ ಕಚೇರಿಯ ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿಭಾಗದಲ್ಲಿ ಸಹಾಯಕಿಯಾಗಿ ಕೆಲಸ ಮಾಡಲಿದ್ದಾರೆ. ನೂತನಕುಮಾರಿ ಅವರಿಗೆ ಬೆಂಗಳೂರಿನ ಮುಖ್ಯಮಂತ್ರಿ ಕಚೇರಿಯಲ್ಲಿ ಗ್ರೂಪ್ ‘ಸಿ’ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿತ್ತು. ಆದರೆ, ಅವರು ಮಂಗಳೂರಿನಲ್ಲೇ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುವಂತೆ ಮುಖ್ಯಮಂತ್ರಿ ಅವರಲ್ಲಿ ವಿನಂತಿಸಿಕೊಂಡ ಕಾರಣ, ಅವರ ಇಚ್ಛೆಯಂತೆ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ.

ತನ್ನ ಕುಟುಂಬದ ಆಧಾರಸ್ತಂಭವಾಗಿದ್ದ ಪ್ರವೀಣ್ ನೆಟ್ಟಾರು ಮೃತಪಟ್ಟ ಹಿನ್ನೆಲೆಯಲ್ಲಿ, ಮಾನವೀಯ ನೆಲೆಯಲ್ಲಿ ಆತನ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಸಿಗಬೇಕು ಎಂದು ಸ್ಥಳೀಯ ಬಿಜೆಪಿ ಮುಖಂಡರು ಮುಖ್ಯಮಂತ್ರಿಯನ್ನು ವಿನಂತಿಸಿ ಕೊಂಡಿದ್ದರು. ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವೀಣ್ ನೆಟ್ಟಾರು ಪತ್ನಿಗೆ ಸಿಎಂ ಸಚಿವಾಲಯದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದರು. ಅದರಂತೆ ಸಿಎಂ ಸಚಿವಾಲಯದಲ್ಲಿನ ಗ್ರೂಪ್ ಸಿ ಹುದ್ದೆಗೆ ಕರ್ನಾಟಕ ನಾಗರಿಕ ಸೇವಾ(ಸಾಮಾನ್ಯ ನೇಮಕಾತಿ) ನಿಯಮಾವಳಿ, 1977ರ ನಿಯಮ 15,1(ಬಿ)(1)ರ ಪ್ರಕಾರ ಸೆ.29ರಂದು ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೇಮಕಾತಿ ಆದೇಶ ಹೊರಡಿಸಿದ್ದರು.

ಬೆಂಗಳೂರಿಗೆ ಕಳೆದ ವಾರ ನೂತನಕುಮಾರಿ ತೆರಳಿ ಸಿಎಂ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರಿಗೆ ಕೃತಜ್ಞತೆ ಸಲ್ಲಿಸಿ, ನಂತರ ಸಿಎಂ ಸಚಿವಾಲಯಕ್ಕೆ ನೇಮಕಾತಿ ಆದೇಶಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು.

Leave A Reply

Your email address will not be published.