ಅವಲಕ್ಕಿ ಬಾತ್ ಚಿತ್ರಾನ್ನಕ್ಕಿಂತ ಹೇಗೆ ಭಿನ್ನ? ಇಲ್ಲಿದೆ ಮಹತ್ವದ ಮಾಹಿತಿ

ಮನೆಯವರೆಲ್ಲರ ಆಹಾರ ಬೇಡಿಕೆಗಳನ್ನು ಈಡೇರಿಸಲು ಮನೆಯ ಗೃಹಿಣಿ ಹಗಲಿರುಳು ಶ್ರಮಿಸುವುದು ಸಹಜ. ಕೆಲಸಕ್ಕೆ ತಯಾರಾಗುವ ಗಂಡ, ಮಕ್ಕಳನ್ನು ಶಾಲೆಗೆ ಹೊರಡಿಸುವ ತರಾತುರಿಯಲ್ಲಿ ಬೆಳಗ್ಗಿನ ಉಪಹಾರಕ್ಕೆ ಸುಲಭವಾಗಿ ಮಾಡುವ ಫಲಾಹಾರದ ಬಗ್ಗೆ ಚಿಂತನೆ ಮಾಡುವ ಹೆಂಗೆಳೆಯರು ಹೆಚ್ಚಾಗಿ ಚಿತ್ರಾನ್ನ ಮಾಡಿ, ಮನೆಯವರಿಗೆ ಉಣ ಬಡಿಸುತ್ತಾರೆ.

ನಾವು ಸೇವಿಸುವ ಆಹಾರವು ಎಷ್ಟರ ಮಟ್ಟಿಗೆ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ ಎನ್ನುವುದನ್ನು ಅರಿತಿರುವುದು ಒಳ್ಳೆಯದು..ಚಿತ್ರಾನ್ನ ಸ್ವಾದಿಷ್ಟ ತಿಂಡಿಯಾಗಿದ್ದು, ಮಹಿಳೆಯರ ಪಾಲಿಗೆ ವರದಾನದಂತೆ ತಕ್ಷಣ ಮಾಡಲು ಸುಲಭವಾಗುವ ಕಾರಣ ಮಹಿಳೆಯರು ಚಿತ್ರಾನ್ನವನ್ನು ಮೆಚ್ಚಿಕೊಂಡರೆ, ಹೆಚ್ಚಿನ ಬಾರಿ ಮನೆಯಲ್ಲಿ ಚಿತ್ರಾನ್ನ ತಯಾರಿಸಿದರೆ, ಗಂಡಸರು ಮೂಗು ಮುರಿಯುವುದರಲ್ಲಿ ಅಚ್ಚರಿಯಿಲ್ಲ. ಅಷ್ಟಕ್ಕೂ ಚಿತ್ರಾನ್ನ ತಿನ್ನದೇ ಇರುವವರು ಇರಲು ಸಾಧ್ಯವೆ ಇಲ್ಲ!!

ಆದರೆ ಈ ಚಿತ್ರಾನ್ನ ಆರೋಗ್ಯದ ದೃಷ್ಟಿಯಿಂದ ಅಷ್ಟೊಂದು ಹಿತಕರವಲ್ಲ ಅದರ ಬದಲಿಗೆ ಬೇರೆ ಪರ್ಯಾಯವಾದ ತಿಂಡಿಗಳನ್ನು ಮಾಡಬಹುದು. ಚಿತ್ರಾನ್ನ ಮಾಡಿ ಆರೋಗ್ಯ ಕೆಡಿಸಿಕೊಳ್ಳುವ ಬದಲು ಬಹುತೇಕವಾಗಿ ಚಿತ್ರಾನ್ನವನ್ನೇ ಹೋಲುವ ಮತ್ತೊಂದು ಸ್ವಾದಿಷ್ಟ ತಿಂಡಿಯಾದ ಅವಲಕ್ಕಿ ಬಾತ್​​ ಸುಲಭವಾಗಿ ತಯಾರಿಸಬಹುದು.

ಜೊತೆಗೆ ಅವಲಕ್ಕಿ ಬಾತ್ ಚಿತ್ರಾನ್ನಕ್ಕೆ ಪರ್ಯಾಯವಷ್ಟೇ ಅಲ್ಲದೇ, ಆರೋಗ್ಯದ ದೃಷ್ಟಿಯಿಂದ ಚಿತ್ರಾನ್ನಕ್ಕಿಂತ ಅವಲಕ್ಕಿ ಬಾತ್​ ಉತ್ತಮವಾಗಿದೆ. ಬೆಳಗಿನ ಉಪಹಾರವಾಗಿ ಅಲ್ಲದೆ ಇದರಿಂದ ಅನೇಕ ತಿಂಡಿಗಳನ್ನು ಮಾಡಬಹುದಾಗಿದ್ದು, ಸಂಜೆ ಸಮಯದಲ್ಲಿ ಕೂಡ ತಿನ್ನುವ ತಿಂಡಿಯಾಗಿದೆ.

ಇದರಿಂದ ಚಿವಡಾ ಪೋಹ, ಗೊಜ್ಜವಲ್ಲಕ್ಕಿ, ಅವಲಕ್ಕಿ ಚಿತ್ರಾನ್ನ ಮೊಸರವಲ್ಲಕ್ಕಿ, ಬಾತ್, ವಡೆ, ಟಿಕ್ಕಾ, ದೇವರಿಗೆ ಮಾಡುವ ಬೆಲ್ಲದ ಅವಲಕ್ಕಿ ಪ್ರಸಾದ ಹೀಗೆ ನಾನಾ ಬಗೆಯ ತಿಂಡಿ ಮಾಡಿ ಆಸ್ವಾದಿಸಹುದು.

ಬೆಳ್ತಿಗೆ ಅಕ್ಕಿಗಿಂತ ಇದು ಉತ್ತಮವಾಗಿದ್ದು, ಅಕ್ಕಿಗೆ ಪಾಲಿಶ್ ಮಾಡಿರುವುದರಿಂದ ನಾರಿನ ಅಂಶ ಕಡಿಮೆ ಆಗಿರುತ್ತದೆ. ಆದರೆ, ಅವಲಕ್ಕಿ ಮಾಡುವ ವಿಧಾನ ಬೇರೆ ರೀತಿ ಯಾಗಿರುವುದರಿಂದ ಅದರಲ್ಲಿ ಶೇಕಡಾ 70 % ರಷ್ಟು ಕಾರ್ಬೋಹೈಡ್ರೇಡ್ , 30 % ಫ್ಯಾಟ್ ಇರುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳುವ ಇರಾದೆ ಹೊಂದಿದವರು ಇದನ್ನು ಉಪಯೋಗಿಸಬಹುದು.

ಅವಲಕ್ಕಿಯಲ್ಲಿ ವಿಟಮಿನ್ ಬಿ ಅಂಶ ಇರುವ ಕಾರಣ, ದೇಹದ ಶಕ್ತಿಯನ್ನು ಹೆಚ್ಚಿಸಿ, ಮೆದುಳಿನ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಇದೊಂದು ಅದ್ಭುತ ಆಹಾರ ಪದಾರ್ಥವಾಗಿದೆ. ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಸಮೃದ್ಧ ಖನಿಜಗಳನ್ನು ಅವಲಕ್ಕಿಯಲ್ಲಿದೆ.

ಅವಲಕ್ಕಿ ಬಾತ್​​ನಲ್ಲಿ ಈರುಳ್ಳಿ, ಟೊಮ್ಯಾಟೊ ಮುಂತಾದ ತರಕಾರಿಗಳನ್ನು ಬಳಕೆ ಮಾಡುವುದರಿಂದ ಇವೆಲ್ಲವೂ ವಿಟಮಿನ್‌ಗಳು ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳ ಅತ್ಯುತ್ತಮ ಮೂಲಗಳಾಗಿವೆ. ನಿಂಬೆ, ಹಸಿರು ಮೆಣಸಿನಕಾಯಿ ಇತ್ಯಾದಿಗಳು ವಿಟಮಿನ್ ಸಿ ಯನ್ನು ಪೂರೈಸುತ್ತವೆ.

ಅವಲಕ್ಕಿ ಫೈಬರ್ ಯುಕ್ತ ಮತ್ತು ಆರೋಗ್ಯಕರ ಕಾರ್ಬೋಹೈಡ್ರೇಟ್​​​ ಗಳ ಮೂಲವಾಗಿದೆ. 100 ಗ್ರಾಂ ಅವಲಕ್ಕಿ ಸೇವನೆಯಲ್ಲಿ 2-4 ಗ್ರಾಂ ಫೈಬರ್ ಇರುತ್ತದೆ. ಇದರಲ್ಲಿ ಹೆಚ್ಚು ಫೈಬರ್ ಅಂಶ ಇರುವ ಕಾರಣ ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಏರುವುದಿಲ್ಲ. ಇದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ.

ಜೀರ್ಣಿಸಿಕೊಳ್ಳಲು ಸುಲಭವಾದ ಅವಲಕ್ಕಿ ಹೊಟ್ಟೆಯನ್ನು ಹಗುರವಾಗಿಡುತ್ತದೆ. ಹಾಗಾಗಿ ಹೆಚ್ಚು ಚಿಂತಿಸದೆ ಅವಲಕ್ಕಿಯನ್ನು ಸೇವಿಸಬಹುದಾಗಿದೆ. ಇದರಿಂದ ದಪ್ಪವಾಗುವ ಪ್ರಮೇಯ ಬರುವುದಿಲ್ಲ. ಬಿಡುವುದಿಲ್ಲ. ಪೋಹಾ ಯಾವಾಗ ಬೇಕಾದರೂ ತಿನ್ನಬಹುದು. ಇದಲ್ಲದೆ, ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ದೇಹದ ತೂಕ ಇಳಿಸಲು ಇದು ಅತ್ಯುತ್ತಮ ತಿಂಡಿಯಾಗಿದೆ.

ಭತ್ತವನ್ನು ಬೇಯಿಸಿ ನಂತರ ಬಿಸಿಲಿನಲ್ಲಿ ಕೆಲವು ಗಂಟೆಗಳ ಕಾಲ ಒಣಗಿಸಿ ಅವಲಕ್ಕಿವನ್ನು ಸಿದ್ಧಪಡಿಸುವುದರಿಂದ ಅವಲಕ್ಕಿ ಉತ್ತಮ ಪ್ರೋಬಯಾಟಿಕ್ (probiotic) ತಿಂಡಿಯಾಗಿದೆ. ಒಣಗಿದ ವಸ್ತುವನ್ನು ನಂತರ ಚಪ್ಪಟೆಯಾಗಿ ಬಡಿದು ಅವಲಕ್ಕಿಯನ್ನು ರೂಪಿಸಲಾಗುತ್ತದೆ.

ಪೂರ್ಣಗೊಂಡ ಅವಲಕ್ಕಿ ಹುದುಗಿಸಿದ್ದರ ಕಾರಣವಾಗಿ, ಭಾಗಶಃ ಜೀರ್ಣವಾಗುವ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳನ್ನು ಸಂರಕ್ಷಿಸುವುದರಿಂದ ಇದು ಕರುಳಿಗೆ ಪ್ರಯೋಜನಕಾರಿಯಾಗಿದೆ. ಕಚ್ಚಾ ಅವಲಕ್ಕಿಯಲ್ಲಿ ಶೂನ್ಯ ಪ್ರಮಾಣದ ಸಕ್ಕರೆ ಮತ್ತು ಶೂನ್ಯ ಕೊಬ್ಬಿನಾಂಶ ಇರುತ್ತದೆ.

ಅವಲಕ್ಕಿ ಗ್ಲುಟನ್-ಮುಕ್ತವಾಗಿದ್ದು, ಅವಲಕ್ಕಿಯನ್ನು ಸೂರ್ಯನ ಬೆಳಕಿನಲ್ಲಿ ಒಣಗಿಸುವುದರಿಂದ ವಿಟಮಿನ್ ಡಿ ಜೊತೆ , ಖನಿಜಾಂಶಗಳಿರುತ್ತವೆ. ಉಬ್ಬಿದ ಅಕ್ಕಿಯನ್ನು ಚಪ್ಪಟೆಯಾದ ಅವಲಕ್ಕಿ ಅಥವಾ ಪೋಹಾ ರೂಪಿಸಲು ಸಂಸ್ಕರಿಸಿದಾಗ, ಅದರಲ್ಲಿರುವ ಕಬ್ಬಿಣಾಂಶವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹಾಗಾಗಿ ರಕ್ತಹೀನತೆಯಿಂದ ಬಳಲುತ್ತಿರುವವರು ಇದನ್ನು ಗರ್ಭಿಣಿಯರು ಪೋಹಾ ಮಾಡಿ ತಿಂದರೆ ಬಹಳ ಒಳ್ಳೆಯದು.

ನಮ್ಮ ದೇಹಕ್ಕೆ ಕಬ್ಬಿಣದ ಅಂಶ ತುಂಬಾ ಮುಖ್ಯವಾಗಿದ್ದು, ಇದರ ಕೊರತೆ ಉಂಟಾದರೆ, ಅನಿಮಿಯ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇರುತ್ತದೆ. ಈ ತಿಂಡಿಯಲ್ಲಿ ಕಬ್ಬಿಣಾಂಶ ಹೆಚ್ಚಿದ್ದು, ಇದನ್ನು ಪ್ರತಿದಿನ ತಿಂದರೆ ಯಾವತ್ತೂ ಕಬ್ಬಿಣಾಂಶದ ಕೊರತೆ ಕಾಡುವುದಿಲ್ಲ. ಅದರ ಆರೋಗ್ಯ ಪ್ರಯೋಜನಗಳನ್ನು ಇನ್ನಷ್ಟು ಹೆಚ್ಚಿಸಲು ಅದರ ಮೇಲೆ ಸ್ವಲ್ಪ ನಿಂಬೆ ರಸವನ್ನು ಹಿಂಡಬಹುದು.

ಇದು ದೇಹದ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮಧುಮೇಹ ಇರುವವರು ಅಕ್ಕಿಯ ಬದಲು ಅವಲಕ್ಕಿಯನ್ನು ಬಳಸಬಹುದು. ಅಕ್ಕಿ ರಕ್ತದಲ್ಲಿರುವ ಸಕ್ಕರೆ ಅಂಶ ಹೆಚ್ಚಿಸುತ್ತದೆ ಆದರೆ, ಅವಲಕ್ಕಿ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಸಮತೋಲನದಲ್ಲಿ ಇಡಲು ಸಹಾಯಮಾಡುತ್ತದೆ.

ಆರೋಗ್ಯ ಕಾಪಾಡಲು ಹೆಚ್ಚು ಕಬ್ಬಿಣದ ಅಂಶವನ್ನು ಒಳಗೊಂಡ ಆಹಾರ ಪದಾರ್ಥಗಳ ಮೇಲೆ ನಮ್ಮ ಗಮನ ನೀಡಬೇಕು. ಅವುಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬಹುದು.

Leave A Reply

Your email address will not be published.