ಮುಸ್ಲಿಂ ರಾಷ್ಟ್ರ ದುಬೈನಲ್ಲಿ ತಲೆಯೆತ್ತಿದ  ಎರಡನೇ ಹಿಂದೂ ದೇವಾಲಯ

ಜಗತ್ತಿನ ಪ್ರಬಲ ಮುಸ್ಲಿಂ ರಾಷ್ಟ್ರಗಳಲ್ಲೊಂದಾದ ಯುನೈಟೆಡ್ ಅರಬ್ ಎಮಿರೇಟ್ಸ್ – ದುಬೈ ದೇಶವು ಹಿಂದೂ ಧರ್ಮದ ದೇವಾಲಯದ ಭವ್ಯ ಉದ್ಘಾಟನೆಗೆ ಇಂದು ಸಾಕ್ಷಿಯಾಗಿದೆ. ನಾಡ ಹಬ್ಬ ದಸರಾ ಹಬ್ಬಕ್ಕೆ ವಿಶೇಷ ಸುವ್ಯವಸ್ಥೆಯುಳ್ಳ ಹೊಸ ದೇವಾಲಯವು ಇಂದು ಉದ್ಘಾಟನೆಗೊಂಡಿದೆ.

16 ದೇವತೆಗಳು ಮತ್ತು ವಿಶಿಷ್ಟ ವಾಸ್ತುಶಿಲ್ಪದೊಂದಿಗೆ ನಿರ್ಮಾಣಗೊಂಡಿರುವ ಭವ್ಯ ಹಿಂದೂ ದೇವಾಲಯದ ಉದ್ಘಾಟನೆಗೆ ಯುಎಇ ಟೋಲೆರೆಂಟ್ ಆಂಡ್ ಕೋಎಕ್ಸಿಸ್ಟೆನ್ಸ್ ಮಂತ್ರಿ ( ಸಹಿಷ್ಣುತೆ ಮತ್ತು ಸಹಬಾಳ್ವೆ ಸಚಿವ)  ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಮತ್ತು ಯುಎಇ ಭಾರತೀಯ ರಾಯಭಾರಿ ಸಂಜಯ್ ಸುಧೀರ್ ಭಾಗವಹಿಸಿದ್ದರು.

ಈ ದೇವಾಲಯವ ನಿರ್ಮಾಣಕ್ಕೆ ಮೂರು ವರ್ಷಗಳು ತಗುಲಿದ್ದು, 2019 ರಲ್ಲಿ ಯುಎಇ ಸರ್ಕಾರವು ದೇವಾಲಯ ನಿರ್ಮಾಣಕ್ಕೆ ಭೂಮಿಯನ್ನು ನೀಡಿತ್ತು. ಸರ್ವ ಧರ್ಮದ ಜನರು ಈ ದೇವಾಲಯಕ್ಕೆ ಭೇಟಿ ನೀಡಬಹುದು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ದೇವಾಲಯವು ವಿಶಿಷ್ಟ ವಾಸ್ತುಶಿಲ್ಪವನ್ನು ಹೊಂದಿದ್ದು, ಪ್ರವಾಸಿಗರನ್ನು ಆಕರ್ಷಿಸುವ ವಿಶೇಷತೆಯನ್ನೂ ಹೊಂದಿದೆ.  ಇದನ್ನು 80,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಇದು ದುಬೈನ ಜೆಬೆಲ್ ಅಲಿ ಪ್ರದೇಶದ ‘ಆರಾಧನಾ ಗ್ರಾಮ’ದಲ್ಲಿದೆ. ಈ ಸ್ಥಳದಲ್ಲಿ ಹಲವಾರು ಚರ್ಚುಗಳು ಮತ್ತು ಗುರುದ್ವಾರಗಳೂ ಇವೆ.

ಈ ದೇವಾಲಯದ  ಇನ್ನೊಂದು ವಿಶೇಷತೆಯೇನೆಂದರೆ ಇದು ಶಿವ, ಕೃಷ್ಣ, ಗಣೇಶ ಮತ್ತು ಮಹಾಲಕ್ಷ್ಮಿ ಸೇರಿದಂತೆ 16 ದೇವತೆಗಳ ಜೊತೆಗೆ ಗುರು ಗ್ರಂಥ ಸಾಹಿಬ್ ಅವರ ಶಿಲ್ಪಕಲೆಯನ್ನೂ ಹೊಂದಿದೆ. ಇದರ ಹೊರಭಾಗವು ಗುಮ್ಮಟಗಳ ಮೇಲೆ ಒಂಬತ್ತು ಹಿತ್ತಾಳೆಯ ಗೋಪುರಗಳು ಮತ್ತು ಕಲಶಗಳ ರೂಪದಲ್ಲಿ  ನಿರ್ಮಾಣಗೊಂಡಿದೆ.

ಆವರಣದಲ್ಲಿ ಪ್ರತಿದಿನ 1000 ರಿಂದ 1200 ಆರಾಧಕರಿಗೆ ಅವಕಾಶ ಕಲ್ಪಿಸಲಾಗಿದೆ. ದೇವಾಲಯದ ಆಡಳಿತವು ಆನ್ಲೈನ್ ಪ್ಲಾಟ್ಫಾರ್ಮ್ ಕ್ಯೂಆರ್-ಕೋಡ್ ಆಧಾರಿತ ನೇಮಕಾತಿಯನ್ನು ಚಾಲ್ತಿಗೊಳಿಸಿದೆ. ಈ ದೇವಾಲಯವು ಬೆಳಿಗ್ಗೆ 6.30 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ.

ದುಬೈನಲ್ಲಿ ಕೇವಲ ಎರಡು ಹಿಂದೂ ದೇವಾಲಯಗಳಿದ್ದು, ಮೊದಲನೆಯದನ್ನು 1958 ರಲ್ಲಿ ನಿರ್ಮಿಸಲಾಗಿದೆ. ಇಂದು ಹೊಸದಾಗಿ ಉದ್ಘಾಟನೆಗೊಂಡ ಹಿಂದೂ ದೇವಾಲಯವು ಎರಡನೇ ದೇವಾಲಯವಾಗಿದೆ. ಈ ದೇವಾಲಯವು ದೀಪಾವಳಿಯವರೆಗೆ ಮಾತ್ರ ಬುಕಿಂಗ್ ಮೂಲಕ ಭಕ್ತರಿಗೆ ತೆರೆದಿರುತ್ತದೆ. ದೀಪಾವಳಿ ಹಬ್ಬದ ಬಳಿಕ ಪ್ರತಿದಿನ ನಡೆಯುವ ಆರತಿ ಸಮಾರಂಭದೊಂದಿಗೆ ದೇವಾಲಯವು ಮುಕ್ತವಾಗಿ ತೆರೆಯಲಾಗುತ್ತದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.