ಕ್ಯಾಬ್ ಚಾಲಕನಿಗೆ ಮೋಸ ಮಾಡಿ ಕಾರು ಕದ್ದಿದ್ದಲ್ಲದೆ ಅದನ್ನೇ ಮನೆಯಾಗಿಸಿಕೊಂಡ ದಂಪತಿ!!

ಕ್ಯಾಬ್‌ ಬುಕ್ ಮಾಡಿ ಚಾಲಕನನ್ನು ಫುಲ್ ಟೈಟ್ ಮಾಡಿಸಿ ಆತನ ಕಾರನ್ನೇ ಕಳ್ಳತನ ಮಾಡಿದ್ದಲ್ಲದೆ, ಅದನ್ನೇ ಮನೆಯಾಗಿಸಿಕೊಂಡಿದ್ದ ದಂಪತಿಗಳು ಇದೀಗ ಪೊಲೀಸ್ ವಶವಾಗಿದ್ದಾರೆ.

ಇಂತಹದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿಗಳಾದ ಯಲಹಂಕ ನಿವಾಸಿ ಮಂಜುನಾಥ್‌ (27), ಆತನ ಪತ್ನಿ ವೇದಾವತಿ (25) ಯನ್ನು ಯಲಹಂಕ ಉಪನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ?:

ದಂಪತಿಗಳಿಗಳು ಮೊದಲೇ ಎಲ್ಲಾ ಪ್ಲಾನ್ ಮಾಡಿ, ಸೆ.5ರಂದು ರಾತ್ರಿ 10.30ಕ್ಕೆ ಶಿವಶಂಕರ್‌ ಎಂಬುವವರ ಟೊಯೋಟಾ ಇಟಿಯೋಸ್‌ ಕಾರನ್ನು ಬುಕ್ ಮಾಡಿದ್ದರು. ಅದರಂತೆ, ಕ್ಯಾಬ್‌ ಚಾಲಕ ಶಿವಶಂಕರ್‌  ಕಾರನ್ನು ಯಲಹಂಕ ಉಪನಗರದ ನಾಗನಹಳ್ಳಿ ಗೇಟ್‌ ಬಳಿ ನಿಲ್ಲಿಸಿಕೊಂಡಿದ್ದರು. ಬಳಿಕ, ಓಲಾ ಬುಕ್‌ ಮಾಡಿದ್ದ ಆರೋಪಿಗಳು ನಗರದಲ್ಲಿ ಸುತ್ತಾಡಿಸುವಂತೆ ಹೇಳಿ ಮುಂಗಡ ಹಣ ನೀಡಿ ತಾವು ಒಳ್ಳೆಯವರಂತೆ ನಟಿಸಿದ್ದರು.

ಎಲ್ಲಾ ನಗರ ಸುತ್ತಿ ಬಂದ ನಂತರ ತಡರಾತ್ರಿ ಚಾಲಕನನ್ನು ಬಾರ್‌ವೊಂದಕ್ಕೆ ಕರೆದೊಯ್ದು ಕಂಠಪೂರ್ತಿ ಮದ್ಯಪಾನ ಕುಡಿಸಿದ್ದರು. ಇದು ಅವರ ಪ್ರೀ ಪ್ಲಾನ್ ಆಗಿತ್ತು. ಬಳಿಕ ಕುಡಿದ ನಶೆಯಲ್ಲಿದ್ದ ಶಿವಶಂಕರ್‌ಗೆ ಕಾರು ಚಲಾಯಿಸಲು ಕಷ್ಟವಾಗುತ್ತದೆ ಎಂಬ ನೆಪವೊಡ್ಡಿ ಮಂಜುನಾಥ್‌ ಚಾಲಕನ ಜೇಬಿನಿಂದ ಕಾರಿನ ಕೀ ತೆಗೆದುಕೊಂಡು ಆತನನ್ನು ಹಿಂದಿನ ಸೀಟಿನಲ್ಲಿ ಕೂರಿಸಿ ಕಾರು ಚಲಾಯಿಸಿಕೊಂಡು ಹೋಗಿದ್ದರು.

ಸ್ವಲ್ಪ ದೂರ ಹೋಗುತ್ತಿದ್ದಂತೆ ಕೊಲುವರಾಯನಹಳ್ಳಿ ಬಳಿ ಆರೋಪಿ ದಂಪತಿ ಚಾಲಕ ಶಿವಶಂಕರ್‌ನನ್ನು ಹೊರಗೆ ತಳ್ಳಿ ಕಾರು ಸಮೇತ ಪರಾರಿಯಾಗಿದ್ದರು. ಕುಡಿದ ಅಮಲಿನಲ್ಲಿದ್ದ ಶಿವಶಂಕರ್‌ ಮಧ್ಯರಾತ್ರಿ ರಸ್ತೆಮಧ್ಯೆ ಏನು ಮಾಡಬೇಕೆಂದು ತೋಚದೇ  ಒದ್ದಾಡುತ್ತಿದ್ದ. ನಂತರ ಸ್ನೇಹಿತರ ಸೂಚನೆ ಮೇರೆಗೆ ಯಲಹಂಕ ನ್ಯೂಟೌನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದ. ಇತ್ತ ಪ್ರಕರಣ ದಾಖಲಿಕೊಂಡ ಪೊಲೀಸರು ಕಾರಿನ ನಂಬರ್‌ ಹಾಗೂ ಇನ್ನಿತರ ದಾಖಲೆಗಳನ್ನು ಪಡೆದು ಆರೋಪಿಗಳಿಗೆ ಶೋಧ ನಡೆಸುತ್ತಿದ್ದರು.

ಬಳಿಕ ಪೋಲಿಸರ ತನಿಖೆ ಗೆ ಯಶಸ್ಸು ಸಿಕ್ಕಿದ್ದು, ಬೆಂಗಳೂರು ಹೊರ ವಲಯದಲ್ಲಿ ಆರೋಪಿಗಳು ಕಾರಿನಲ್ಲಿ ಸುತ್ತಾಡುತ್ತಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಕೂಡಲೇ ಅವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಬಂಧಿತರಿಂದ ಇಟಿಯೋಸ್‌ ಕಾರು, 2 ಮೊಬೈಲ್‌ಗ‌ಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ದಂಪತಿ ಕದ್ದ ಕಾರನ್ನೇ ಮನೆಯನ್ನಾಗಿ ಮಾಡಿಕೊಂಡಿದ್ದರು. ಇವರು ಇತ್ತೀಚೆಗೆ ಬಾಡಿಗೆ ಮನೆಯಲ್ಲಿ ತೊರೆದಿದ್ದರು. ಉಳಿದುಕೊಳ್ಳಲು ಮನೆ ಇರಲಿಲ್ಲ. ಹೀಗಾಗಿ ಕದ್ದ ಕಾರಿನಲ್ಲಿ ನಗರಾದ್ಯಂತ ಸುತ್ತಾಡುತ್ತಾ, ರಾತ್ರಿ ಹೊತ್ತು ಅದರಲ್ಲೇ ಮಲಗುತ್ತಿದ್ದರು ಎಂದು ತಿಳಿದು ಬಂದಿದೆ. ಕಾರು ಪಡೆದು ಪರಾರಿಯಾಗಿದ್ದ ಆರೋಪಿ ಮಂಜುನಾಥ್‌ ವಿರುದ್ಧ 1 ಕೊಲೆ, 4 ಕೊಲೆಯತ್ನ, ರಾಬರಿ, ಕಳವು, ಸುಲಿಗೆ ಸೇರಿ 16 ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.