Loose motion : ಭಯ ಬೇಡ, ಇಲ್ಲಿದೆ ಕೆಲವೊಂದು ಮನೆ ಮದ್ದು

ಬೇಧಿ ಅಥವಾ ಲೂಸ್‌ ಮೋಶನ್ ಎಂದು ಹೆಚ್ಚಾಗಿ ಜನರು ಗುರುತಿಸುವ ಅತಿಸಾರ. ಈ ಹೆಸರೇ ಸೂಚಿಸುವಂತೆ ದೇಹದಿಂದ ಸಾರವನ್ನು ಹೊರಹಾಕುವ ಖಾಯಿಲೆಯಾಗಿದೆ. ನಾವೆಲ್ಲರೂ ಒಂದಲ್ಲಾ ಒಂದು ಸಂದರ್ಭದಲ್ಲಿ ಅತಿಸಾರದ ತೊಂದರೆಗೆ ಈಡಾಗಿ ಇದರಿಂದ ಎದುರಾಗುವ ಸುಸ್ತು ಮತ್ತು ನೋವು ಅನುಭವಿಸಿರುತ್ತೇವೆ.

ಅತಿಸಾರವೂ, ದೇಹದ ರೋಗ ನಿರೋಧಕ ವ್ಯವಸ್ಥೆಯ ಒಂದು ಕ್ರಮವೇ ಆಗಿದ್ದು ಜೀರ್ಣಾಂಗಗಳಲ್ಲಿ ಆಗಿರುವ ಯಾವುದೋ ತೊಂದರೆಯನ್ನು ಉಲ್ಬಣಿಸುವ ಬದಲು ಹೆಚ್ಚಿನ ನೀರಿನೊಂದಿಗೆ ದೇಹದಿಂದ ಆದಷ್ಟೂ ಬೇಗನೇ ವಿಸರ್ಜಿಲು ಕೈಗೊಳ್ಳುವ ಕ್ರಮವೇ ಅತಿಸಾರವಾಗಿದೆ.

ಲೂಸ್ ಮೋಷನ್ ಯಾವಾಗ ಶುರುವಾಗುತ್ತೆ ಅನ್ನೋದು ಗೊತ್ತಾಗದು. ಆಹಾರದಲ್ಲಿ ಏರುಪೇರಾದ ತಕ್ಷಣ ಕೆಲವರಿಗೆ ಬೇಧಿ ಶುರುವಾಗುತ್ತದೆ. ಹೊರಗಡೆ ಆಹಾರ ಸೇವಿಸಿದರಂತೂ ಪರಿಸ್ಥಿತಿ ಹದಗೆಡುತ್ತದೆ. ಬಿಸಿಲಿನ ಬೇಗೆ ಮತ್ತು ಡೀ ಹೈಡ್ರೈಷನ್ ಜೊತೆಗೆ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಾಗುತ್ತದೆ. ಒಂದು ವೇಳೆ ಇದಕ್ಕೆ ವೈರಸ್ ಅಥವಾ ಬ್ಯಾಕ್ಟೀರಿಯಾಗಳ ಸೋಂಕು ಕಾರಣವಾಗಿದ್ದು ಈ ಸೋಂಕು ಉಲ್ಭಣಗೊಂಡಿದ್ದರೆ ಅತಿಸಾರ ಸತತವಾಗಿದ್ದು ಮೂರನೆಯ ದಿನಕ್ಕೂ ಮುಂದುವರೆಯಬಹುದು.

ಕೆಲವು ವ್ಯಕ್ತಿಗಳಿಗೆ ಕೆಲವು ಆಹಾರಗಳು ಅಲರ್ಜಿಕಾರಕವಾಗಿದ್ದು ಇವನ್ನು ಜೀರ್ಣಿಸಲು ಸಾಧ್ಯವಿಲ್ಲದೇ ತಕ್ಷಣವೇ ವಿಸರ್ಜಿಸಲು ನೀಡುವ ಸೂಚನೆಯೂ ಅತಿಸಾರಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಜಠರ ಮತ್ತು ಕರುಳುಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತ, ಕ್ರಾನ್ಸ್ ಕಾಯಿಲೆ, ಸೀಲಿಯಾಕ್ ಕಾಯಿಲೆ, ಜಠರದ ಹುಣ್ಣು ಅಥವಾ ಅಲ್ಸರೇಟಿವ್ ಕೋಲೈಟಿಸ್ ಅಥವಾ ಪಿತ್ತಕೋಶದ ಕಾಯಿಲೆಯೂ ಅತಿಸಾರಕ್ಕೆ ಕಾರಣವಾಗಬಹುದು.

ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರ ತಿನ್ನುವುದರಿಂದ ಹಾಗೂ ದೇಹದಲ್ಲಿ ಮೆಗ್ನೀಸಿಯಮ್ ಪ್ರಮಾಣ ಹೆಚ್ಚಾದಾಗಲು ಲೂಸ್ ಮೋಷನ್ ಶುರುವಾಗುತ್ತದೆ.

ಇದಕ್ಕೆ ಪರಿಹಾರ ನೀಡುವ ಆಹಾರ ಕ್ರಮಗಳು ಈ ಕೆಳಗೆ ನೀಡಲಾಗಿದೆ :
ನೀರು ದೇಹವನ್ನು ಹೈಡ್ರೇಟ್ ಮಾಡಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಲೂಸ್ ಮೋಷನ್ ಶುರುವಾದಾಗ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ನಿಂಬೆ ಹಣ್ಣಿನ ಪಾನಕ ಮಾಡಿ ಸೇವನೆ ಮಾಡಬಹುದು. ನಿಂಬೆ ಹಣ್ಣಿನ ಪಾನಕವನ್ನು ಅನೇಕ ರೀತಿಯಲ್ಲಿ ತಯಾರಿಸಲಾಗುತ್ತದೆ. ನಿಂಬೆ ರಸಕ್ಕೆ ನೀರು ಬೆರೆಸಿ, ಸಕ್ಕರೆ ಹಾಕಿ, ಚಿಟಕಿ ಉಪ್ಪನ್ನು ಹಾಕಿ ಕುಡಿಯುವುದು ಒಳ್ಳೆಯದು. ಇದು ದೇಹವನ್ನು ಹೈಡ್ರೀಕರಿಸುತ್ತದೆ. ಜೊತೆಗೆ ದೇಹಕ್ಕೆ ಶಕ್ತಿ ನೀಡುತ್ತದೆ. ನಿಂಬೆ ಪಾನಕವನ್ನು ದಿನಕ್ಕೆ 2- 3 ಬಾರಿ ಸೇವನೆ ಮಾಡಬೇಕು. ಇದು ದೇಹದಲ್ಲಿ ಖನಿಜಗಳನ್ನು ಉತ್ಪಾದಿಸಲು ನೆರವಾಗುತ್ತದೆ ಅಲ್ಲದೆ, ನಿಂಬೆ ಹಣ್ಣಿನ ಪಾನಕ, ಭೇದಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ಮೊಸರಿನಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರ್ಯಾಗಳು ಕರುಳುಗಳಲ್ಲಿ ಲ್ಯಾಕ್ಟಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ಹಾಗೂ ಈ ಆಮ್ಲವೇ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಹಾಗೂ ಜೀರ್ಣಕ್ರಿಯೆಗೆ ಸಹಕಾರಿಯಾಗುವ ವಾತಾವರಣವನ್ನು ಕಲ್ಪಿಸಿ ಅತಿಸಾರವನ್ನುಂಟುಮಾಡುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತವೆ.

ಹಣ್ಣಿನ ಜ್ಯೂಸ್ ಮತ್ತು ಮಜ್ಜಿಗೆ ಕೂಡ ಭೇದಿಗೆ ಉತ್ತಮ ಪರಿಹಾರ ನೀಡುತ್ತದೆ. ದೇಹಕ್ಕೆ ಹೆಚ್ಚಿನ ದ್ರವ ಪದಾರ್ಥ ಹೋಗುವಂತೆ ನೋಡಿಕೊಳ್ಳಬೇಕು. ಹಣ್ಣಿನ ಜ್ಯೂಸನ್ನು ಮನೆಯಲ್ಲಿಯೇ ಮಾಡಿ ಸೇವನೆ ಮಾಡುವುದು ಉತ್ತಮ. ಶುಂಠಿಯಲ್ಲಿರುವ ಪ್ರತಿಜೀವಕ ಗುಣ ಅತಿಸಾರವನ್ನು ಪ್ರಚೋದಿಸುವ ಹಾನಿಕಾರಕ ರೋಗಕಾರಕಗಳನ್ನು ಕೊಲ್ಲುವುದಲ್ಲದೆ ಸರಿಯಾದ ಜೀರ್ಣಕ್ರಿಯೆಯನ್ನು ಸುಧಾರಿಸುವ ಜೀರ್ಣಾಂಗಗಳ ಕಿಣ್ವಗಳನ್ನು ಉತ್ತೇಜಿಸಿ, ಹೊಟ್ಟೆಯ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ತೊಂದರೆಗೀಡಾದ ಕರುಳಿಗೆ ಶಮನ ನೀಡುತ್ತದೆ.

ದಾಳಿಂಬೆ ಹಣ್ಣನ್ನು ಸೇವನೆ ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ. ಇದಲ್ಲದೆ ದಾಳಿಂಬೆ ಎಲೆಯನ್ನು ನೀರಿಗೆ ಹಾಕಿ ಅದನ್ನು ಕುದಿಸಿ, ಆ ನೀರನ್ನು ಕುಡಿಯುವುದರಿಂದ ಲೂಸ್ ಮೋಷನ್ ಕಡಿಮೆಯಾಗುತ್ತದೆ. ಒಂದು ಲೋಟ ಉಗುರು ಬೆಚ್ಚನೆಯ ನೀರಿಗೆ ಅರ್ಧ ಚಿಕ್ಕ ಚಮಚ ಅರಿಶಿನ ಪುಡಿ ಬೆರೆಸಿ ಕುಡಿದರೆ ಲೂಸ್ ಮೋಷನ್ ಕಡಿಮೆಯಾಗುತ್ತದೆ.

ಚಿಕ್ಕ ಚಮಚ ದಾಲ್ಚಿನ್ನಿ ಪುಡಿ, ಕೊಂಚ ಜೇನನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಬೆರೆಸಿ ಕುಡಿದರೆ ಅತಿಸಾರ ಕಡಿಮೆಯಾಗುತ್ತದೆ. ದಾಲ್ಚಿನ್ನಿ ಮತ್ತು ಜೇನಿನ ಮಿಶ್ರಣವು ಕರುಳಿನಲ್ಲಿರುವ ಹಾನಿಕಾರಕ ಅತಿಸಾರಕ್ಕೆ ಕಾರಣವಾದ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯ ಯೋಗಕ್ಷೇಮವನ್ನು ಉತ್ತೇಜಿಸಲು ಇದು ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ. ಇದರ ಸೂಕ್ಷ್ಮಜೀವಿ ನಿವಾರಕ ಮತ್ತು ಉರಿಯೂತನಿವಾರಕ ಗುಣಲಕ್ಷಣಗಳು ಸಾಮಾನ್ಯವಾಗಿ ಅತಿಸಾರದೊಂದ ಬರುವ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಎಳನೀರು ಅತಿಸಾರವನ್ನೂ ನಿಲ್ಲಿಸುವ ಗುಣವನ್ನು ಹೊಂದಿದೆ. ಪೊಟ್ಯಾಸಿಯಮ್ ಮತ್ತು ಸೋಡಿಯಂನಂತಹ ಎಲೆಕ್ಟ್ರೋಲೈಟುಗಳನ್ನು ಹೊಂದಿದ್ದು, ದೇಹದ ಎಲೆಕ್ಟ್ರೋಲೈಟುಗಳ ಸಮತೋಲನವನ್ನು ಪುನಃಸ್ಥಾಪಿಸಲು ಸಹಾಯ ಮಾಡಿ ಜೀರ್ಣಾಂಗಗಳನ್ನು ಉತ್ತಮ ಆರೋಗ್ಯದಲ್ಲಿರಿಸಲು ನೆರವಾಗುತ್ತದೆ. ಮೇಲೆ ತಿಳಿಸಿದ ಸರಳ ವಿಧಾನಗಳನ್ನು ಅನುಸರಿಸಿದರೆ ಲೂಸ್ ಮೋಶನ್ ನಿಂದ ಪಾರಾಗಬಹುದು.

Leave A Reply

Your email address will not be published.