ಸರ್ವರ್ ಗೆ ಪಿಂಡ ಇಟ್ಟ ಹೋರಾಟಗಾರ, ಪಿತೃ ಪಕ್ಷ ಹಿನ್ನೆಲೆ ವಿಭಿನ್ನ ಪ್ರತಿಭಟನೆ ಮಾಡಿ ಗಮನ ಸೆಳೆದು ಹೋರಾಟ

ಇವತ್ತು ಕೋಲಾರದಲ್ಲಿ ಪಿಂಡ ಇಡುವ ಕಾರ್ಯಕ್ರಮ. ಪಿತೃ ಪಕ್ಷದ ಹಿನ್ನೆಲೆಯಲ್ಲಿ ಸತ್ತವರಿಗೆ ಪಿಂಡ ಇಡುವುದು ನಾವೆಲ್ಲ ನಂಬಿಕೊಂಡು ಬಂದ ಆಚರಣೆ. ಪಿತೃ ಪಕ್ಷದ ಸಂದರ್ಭ ಪಿಂಡ ಪ್ರದಾನ ಮಾಡಿ ಪಿತೃ ಪಕ್ಷಾಚರಣೆ ಮಾಡಲಾಗುತ್ತದೆ. ಆದರೆ ಇಲ್ಲಿ ಸರ್ವರ್ ಗೆ ಪಿಂಡ ಪ್ರದಾನ ಮಾಡಿ ನೆನಪಿನ ನಮನ ಅರ್ಪಿಸಲಾಗಿದೆ. ಸತ್ತು ಹೋದ ಸರ್ವರಿಗೆ ಎಡೆ ಇಟ್ಟು ಕೈ ಮುಗಿಯಲಾಗಿದೆ.

ಕೋಲಾರ ಜಿಲ್ಲೆಯ ಬಹುತೇಕ ಸರ್ಕಾರಿ ಕಛೇರಿಗಳಲ್ಲಿ ಸರ್ವರ್ ಸಮಸ್ಯೆ. ಇವತ್ತು ಕೋಲಾರದಲ್ಲಿ ಮಾತ್ರವಲ್ಲ ರಾಜ್ಯದಲ್ಲಿ ಎಲ್ಲೇ ಸರಿ ರೇಷನ್ ಕೊಳ್ಳಲು ಕೂಡ ಸರ್ವರ್ ಚಾಲೂ ಇರಬೇಕಾದದ್ದು ಅಗತ್ಯ. ಸರ್ವರ್ ಒಂದು.ಮಲಗಿ ಬಿಟ್ಟರೆ ಸಾರ್ವಜನಿಕರು ಪಡುವ ಕಷ್ಡ ಅಷ್ಟಿಷ್ಟಲ್ಲ. ಇಂತಹಾ ಸರ್ವರ್ ನಿಂದ ತೊಂದರೆ ಪಡುತ್ತಿರುವುದನ್ನ ಗಮನಿಸಿದ ಕೋಲಾರದ ಹೋರಾಟಗಾರನೊರ್ವರು ಸತ್ತ ಸರ್ವರ್ ಗೆ ಪಿಂಡ ಪ್ರದಾನ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಇಂದು ಪಿತೃ ಪಕ್ಷಗಳಾದ ಹಿನ್ನೆಲೆಯಲ್ಲಿ, ನೊಂದ ಈ ಸಾಮಾಜಿಕ ಹೋರಾಟಗಾರರು ಸಾವು ಕಂಡ ಸರ್ವರ್ ಗಳಿಗೆ ಶಾಸ್ತ್ರೋಕ್ತ ವಾಗಿ ಪಿಂಡ ಪ್ರದಾನ ಮಾಡಿ ಗಮನ ಸೆಳೆದಿದ್ದಾರೆ. ಅವರು ಸರ್ಕಾರಿ ಮಾಲೀಕತ್ವದ ಸರ್ವರ್ ಗಳಿಗೆ ಪಿಂಡ ಪ್ರದಾನ ಮಾಡಿದ ವಿಡಿಯೋ ಸಧ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕರಪನಹಳ್ಳಿ ನಿವಾಸಿ ಪ್ರಸನ್ನ ಕುಮಾರ ಸ್ವಾಮಿ ಎಂಬವರೇ ಪಿಂಡ ಇಟ್ಟ ಅಲ್ಲಿಯ ಹೋರಾಟದ ಭಟ್ಟ !!

ಇವತ್ತು ಸರ್ವರ್ ಸರ್ವ್ ಆಗದೆ ರೇಶನ್, ಆಧಾರ್, ರಿಜಿಸ್ಟ್ರೇಷನ್, ಇತರ ಸರ್ಕಾರಿ ಪಹಣಿ ಪತ್ರಗಳು ಬ್ಯಾಂಕ್ ವ್ಯವಹಾರಗಳಿಗೆ ಅದು ಅತಿ ಅಗತ್ಯ. ಸರ್ವರ್ ಇಲ್ಲದೆ ಹೋದರೆ ಕಂಪ್ಯೂಟರಿನ ಮೌಸ್ ಅನ್ನು ಎಷ್ಟು ಅಲ್ಲಾಡಿಸಿದರೂ, ಡಾಟಾ ಸತ್ತ ಇಲಿಯ ಥರ ಸುಮ್ಮನೆ ಬಿದ್ದಿರುತ್ತದೆ. ಹಾಗೆ ವ್ಯವಹಾರಗಳಿಗೆ ಅಡ್ಡಿಯಾಗಿರುವ ಸರ್ವರ್ ಗೆ ಪಿಂಡ ಬಿಟ್ಟು ವಿನೂತನ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದಾರೆ. ಅಂತರಜಾಲ ಮತ್ತು ಸರ್ವರ್ ಗಳಿಗೆ ಬಾಳೆ ಎಳೆ ಎಳೆದು ಎಡೆ ಇಟ್ಟು, ಶ್ಲೋಕಗಳನ್ನು ಪುಂಖಾನು ಪುಂಖವಾಗಿ ಉದುರಿಸಿ, ಪಿತೃ ಪಕ್ಷವನ್ನು ದೊಡ್ಡದಾಗಿ ಆಚರಣೆ ಮಾಡಿರುವ ಪಿಂಡದ ವಿಡಿಯೋ ಇವತ್ತು ಮೀಡಿಯಾಗಳ ಸರ್ವರ್ ಗಳಲ್ಲಿ ಬಲು ಜೋರಾಗಿ ಓಡಾಟ ನಡೆಸುತ್ತಿದೆ.

ಇದಕ್ಕೂ ಹಿಂದೆ ಕಿತ್ತು ಹೋಗಿದ್ದ ಡಾಂಬರು ರಸ್ತೆಗೆ ಎಳ್ಳು ನೀರು ಬಿಟ್ಟು ವಿಭಿನ್ನವಾಗಿ ಪ್ರತಿಭಟಿಸಿದ್ದ ಆಗಿರುವ ಪ್ರಸನ್ನ ಕುಮಾರ್ ಅವರ ಹೋರಾಟ ಹಾಗೂ ಪಿಂಡ‌ ಪ್ರದಾನ ಜಿಲ್ಲೆಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಯಾವುದೇ ದಾಖಲೆ ಸಮಯಕ್ಕೆ ಸರಿಯಾಗಿ ಪಡೆಯಲಾಗದೆ ಸಾರ್ವಜನಿಕರು ಕಷ್ಟ ಪಡುತ್ತಿದ್ದಾರೆ. ಅದಕ್ಕಾಗಿ ಸತ್ತು ಹೋದ ಸರ್ವರ್ ಗೆ ಪಿಂಡ ಪ್ರದಾನ ಮಾಡುತಿದ್ದೇನೆ ಎಂದು ಆತ ಆಕ್ರೋಶ ಹೊರ ಹಾಕಿದ್ದಾರೆ.

Leave A Reply

Your email address will not be published.