ಹುಡುಗಿಯನ್ನ ದಪ್ಪಗಾಗಿಸಿ ಪುಷ್ಟಿ ಕಾಣುವಂತೆ ಮಾಡಿ ಮದುವೆ ಫಿಕ್ಸ್ ಮಾಡು, ದೇವರಿಗೆ ಪತ್ರ ಬರೆದ ಭಕ್ತ…!

ಪ್ರಾರ್ಥಿಸಲು ಪ್ರತಿಯೊಬ್ಬರಿಗೂ ಕಾರಣಗಳಿವೆ. ದೇವರ ಬಳಿ ಕೇಳಿಕೊಳ್ಳಲು ಅನಂತ ಸಮಸ್ಯೆಗಳಿವೆ. ಬುದ್ದಿ ಕೊಡು ಶಕ್ತಿ ಕೊಡು ಆರೋಗ್ಯ ಕೊಡು ದುಡ್ಡು ಕೊಡು, ಹೀಗೆಲ್ಲಾ ಕೇಳಿಕೊಳ್ತಾರೆ. ಆದರೆ, ಅಲ್ಲೊಬ್ಬ ಮಹಾನ್ ಭಕ್ತ ಸಂಬಳ ತಂದು ನನ್ನ ಕೈಗೆ ಕೊಡು, ಹುಡುಗಿನ ದಪ್ಪ ಮಾಡು, ಮದುವೆನ ಫಿಕ್ಸ್ ಮಾಡು ಅಂತ ಪತ್ರ ಬರೆದು ಕಾಣಿಕೆ ಹುಂಡಿಯಲ್ಲಿ ಹಾಕಿರೋ ಘಟನೆ ನಡೆದಿದೆ.

ಜಿಲ್ಲೆಯ ಕಳಸ ತಾಲೂಕಿನಲ್ಲಿ ಪ್ರಸಿದ್ಧ ಕಳಸೇಶ್ವರ ಸ್ವಾಮಿ ದೇಗುಲದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಆಗ ಅಲ್ಲಿನ ಹುಂಡಿಯಲ್ಲಿ ಸುಮಾರು 18 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿತ್ತು. ಆದರೆ, ಹಣದ ಜೊತೆ ಮುಗ್ಧ ಭಕ್ತನೋರ್ವ ದೇವರಿಗೆ ಬರೆದ ಪತ್ರ ಓದಿದ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಅಧಿಕಾರಿಗಳು.ಮುಖದಲ್ಲಿ ಮಂದಹಾಸ ಮೂಡಿದೆ. ಜೊತೆಗೆ, ಆ ಭಕ್ತನ ಮೇಲೆ ಅವರಿಗೆ ಕರುಣೆ ಮೂಡಿದೆ.

ಆತ ತನ್ನ ಪತ್ರದಲ್ಲಿ ಪ್ರಾಪಂಚಿಕ ಹಲವು ವಿಷಯಗಳ ಬಗ್ಗೆ ನೋವು ತೋಡಿಕೊಂಡು, ” ಸಂಬಳ ತಂದು ಇಂತವರಿಗೆ ಕೊಡಲಿ, ಹುಡುಗಿಯನ್ನ ದಪ್ಪ ಮಾಡಿ ಪುಷ್ಠಿಯಾಗಿ ಕಾಣುವಂತೆ ಮಾಡು, ಯಾವುದೇ ವಿಘ್ನವಿಲ್ಲದೆ ಮದುವೆ ಮಾಡಿಸು” ಎಂದು ಬರೆದಿರೋದು ನಗೆಗಡಲಿನಲ್ಲಿ ತೇಲಿಸಿದೆ.

ಆ ಪತ್ರದಲ್ಲಿ, ” ಮಂಜುಳ ಎಂಬ ಹುಡುಗಿ ತನ್ನ ಅತ್ತೆ-ಮಾವನ ಜೊತೆ ಪ್ರೀತಿಯಿಂದ ಇರುವಂತೆ ಮಾಡು. ಮಂಜುಳ ಮನಸ್ಸಿನಲ್ಲಿ ರಾಜಮ್ಮ ಮತ್ತು ಬಸವರಾಜುನನ್ನ ಒಳ್ಳೆಯವರಾಗಿಸು. ದೇವರಾಜುಗೆ ಕೈತುಂಬಾ ಸಂಬಳ ಸಿಗುವ ಸರ್ಕಾರಿ ಕೆಲಸ ಕೊಡಿಸು. ನಮ್ಮ ಋಣದ ಬಾಧೆ ಹಾಗೂ ಸಾಲದ ಭಾದೆಯನ್ನ ಬೇಗ ತೀರಿಸು, ರಮೇಶ-ಮಂಜುಳ ಒಪ್ಪಿಕೊಂಡಿರುವ ಒಂದು ಲಕ್ಷ ರೂಪಾಯಿ ಹಣವನ್ನು ಆದಷ್ಟು ಬೇಗ ಹಿಂದಿರುಗಿಸುವಂತೆ ಮಾಡು ದೇವಾ. ರಾಮಕೃಷ್ಣ-ಅರುಣ ಇಬ್ಬರೂ ಹಣವನ್ನ ಬೇಗ ಕೊಡುವಂತೆ ಮಾಡು…” ಎಂದು ತನ್ನ ಸಮಸ್ತ ಕುಟುಂಬಸ್ಥರ ಸಮಸ್ಯೆ ಮತ್ತು ಆರ್ಥಿಕ ವ್ಯವಹಾರಗಳ ಸೂಕ್ತ ವಿಲೇವಾರಿಗೆ ಆ ಭಕ್ತ ದೇವರ ಮಧ್ಯಸ್ಥಿಕೆ ಕೇಳಿಕೊಂಡಿದ್ದಾರೆ.

ಈ ಅಮಾಯಕ ಭಕ್ತನ ಸಮಸ್ಯೆಗಳ ಪಟ್ಟಿಗೆ ಅಧಿಕಾರಿಗಳು ಒಮ್ಮೆ ಶಾಕ್ ಆಗಿದ್ದು, ಕೊನೆಗೆ ಆತನ ಮೇಲೆ ಅಲ್ಲಿದ್ದವರಿಗೆಲ್ಲಾ ಕನಿಕರ ಮೂಡಿದೆ. ಈ ಕಳಸೇಶ್ವರ ದೇವಾಲಯದಲ್ಲಿ ಈ ರೀತಿಯ ಪತ್ರ ಇದೇ ಮೊದಲಲ್ಲ. ಒಂದೆರಡು ವರ್ಷಗಳ ಹಿಂದೆಯೂ ಇದೇ ರೀತಿ ಪತ್ರ ಪತ್ತೆಯಾಗಿತ್ತು. ಆಗಲೂ ಕೂಡ ಭಕ್ತನೋರ್ವ ಪ್ರೀತಿ, ಪ್ರೇಮ, ಉದ್ಯೋಗ ಹಣ -ಋಣ ಸಮಸ್ಯೆ ಬಗ್ಗೆ ಪತ್ರ ಬರೆದಿದ್ದ. ಪತ್ರ ಬರೆದವನ ಮನೆಯ ಮತ್ತು ಮನಸ್ಸಿನ ನೋವು ಆ ಕಳಸೇಶ್ವರ ಮಾತ್ರ ಬಲ್ಲ. ಅದನ್ನು ಶೀಘ್ರ ಕಳಸ ಸಮೇತ ಆಶೀರ್ವದಿಸಿ ಈಡೇರಿಸಲಿ ಎಂದು ಅಲ್ಲಿನ ಅರ್ಚಕರು ಅಧಿಕಾರಿಗಳು ಆ ಮುಗ್ಧ ಭಕ್ತನ ಪರ ಬೇಡಿಕೊಂಡಿದ್ದಾರಂತೆ.

Leave A Reply