Indian models : ಭಾರತದ ಚಿತ್ರ ನಟ ನಟಿಯರಿಗೂ ಕಮ್ಮಿ ಇಲ್ಲದಷ್ಟು ಸಂಭಾವನೆ ಪಡೆಯುತ್ತಾರೆ ಮಾಡೆಲ್ ಗಳು!!

ಪ್ರತಿಯೊಬ್ಬರಿಗೂ ಅವರದ್ದೇ ಆದ ಕನಸುಗಳು, ಒಳ್ಳೆಯ ಉದ್ಯೋಗ, ಕೈ ತುಂಬಾ ಸಂಬಳ ಇಷ್ಟಿದ್ದರೆ ಸಾಕು ಎಂದು ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡು ದುಡಿಯುವುದು ಸಾಮಾನ್ಯವಾಗಿದೆ. ಲಾಕ್ ಡೌನ್ ಆದ ಮೇಲಂತೂ ವರ್ಕ್ ಫ್ರಮ್ ಹೋಂ ಆಪ್ಶನ್ ಸಿಕ್ಕ ಮೇಲೆ, ಬೆಳಿಗ್ಗೆ ಒಂದು ಕಂಪನಿಯಲ್ಲಿ, ಸಂಜೆ ಮತ್ತೊಂದು ಕಂಪನಿಯಲ್ಲಿ ಕೆಲಸ ನಿರ್ವಹಿಸುವ ಮಂದಿ ಕೂಡ ಇದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಾಡೆಲ್‌ಗಳು, ಫ್ಯಾಷನ್ ಛಾಯಾಗ್ರಾಹಕರು ಅಥವಾ ಸ್ಟೈಲಿಸ್ಟ್‌ಗಳಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಅಲ್ಲದೇ ಇಂದು ಮಾಡೆಲಿಂಗ್‌ ಕ್ಷೇತ್ರ ಕೇವಲ ಪಾರ್ಟ್‌ ಟೈಂ ಜಾಬ್‌ ರೀತಿ ಉಳಿಯದೆ, ಪೂರ್ಣ ಪ್ರಮಾಣದ ವೃತ್ತಿಯಾಗಿ ಬದಲಾಗಿದೆ. ಎಲ್ಲಾ ಡಿಜಿಟಲ್‌ಮಯವಾಗಿರುವಾಗ ಮಾಡೆಲಿಂಗ್‌ ಅನ್ನೋದು ಜಾಸ್ತಿ ಆದಾಯ ಗಳಿಸೋ ವೃತ್ತಿಯಾಗಿ ಬದಲಾಗಿದೆ ಎಂದರೆ ಅತಿಶಯೋಕ್ತಿ ಆಗದು.

ಚಿತ್ರರಂಗದ ಸೆಲೆಬ್ರಿಟಿಗಳ ಹೈ-ಫೈ ಲೈಫ್‌ ಸ್ಟೈಲ್, ಅವರು ಚಿತ್ರಕ್ಕೆ ಪಡೆಯಬಹುದಾದ ಕೋಟಿ ಕೋಟಿ ಸಂಭಾವನೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಆದರೆ, ಅದೇ ಕ್ಷೇತ್ರದ ಮಾಡೆಲಿಂಗ್‌ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ತಿಳಿದಿಲ್ಲ. ಝಗಮಗಿಸುವ ಲೈಟುಗಳ ಮಧ್ಯೆ ಮಿಂಚುವ ಫ್ಯಾಷನ್‌ ಶೋಗಳ ಬಗ್ಗೆ ಕೊಂಚ ಮಟ್ಟಿಗೆ ತಿಳಿದಿದ್ದರೂ ಕೂಡ ಅವರು ಪಡೆಯೋ ಸಂಭಾವನೆ ಬಗ್ಗೆ ಹೆಚ್ಚಿನವರು ತಲೆಕೆಡಿಸಿಕೊಳ್ಳುವುದಿಲ್ಲ . ಭಾರತೀಯ ಮಾಡೆಲ್‌ ಗಳ ಸ್ಯಾಲರಿ ಬಗ್ಗೆ ತಿಳಿದರೆ ಬೆರಗಾಗುವುದರಲ್ಲಿ ಸಂದೇಹವಿಲ್ಲ. ಅವರು ಗಳಿಸೋ ಆದಾಯ ಯಾವ ಐಐಎಂ ಗ್ರಾಜುಯೇಟ್‌ಗಿಂತ ಕಡಿಮೆಯಿಲ್ಲ!!

ಬಾಲಿವುಡ್‌ನ ಪ್ರಾಬಲ್ಯ ಮೆರೆಯುತ್ತಿರುವುದರಿಂದ , ದೇಶದಲ್ಲಿ ಸೂಪರ್ ಮಾಡೆಲ್ ಹೆಚ್ಚು ಜನಪ್ರಿಯತೆ ಗಳಿಸಿಲ್ಲ. ಬಾಲಿವುಡ್ ಹಾಗೂ ಬೇರೆ ಬೇರೆ ಭಾಷೆಯ ಸೆಲೆಬ್ರಿಟಿಗಳು ಮಾಡೆಲ್‌ಗಳಿಗಿಂತ ಹೆಚ್ಚು ಬ್ರ್ಯಾಂಡ್ ಡೀಲ್‌ ಪಡೆದುಕೊಳ್ಳುವುದು ಎಲ್ಲರಿಗೂ ತಿಳಿದ ವಿಚಾರ.

ನಾವು ಜಾಹೀರಾತುಗಳಲ್ಲಿ ಅನೇಕ ಮಂದಿ ರೂಪದರ್ಶಿಗಳನ್ನು ಗಮನಿಸಿರಬಹುದು. ಯಾವುದೇ ಬ್ರಾಂಡ್‌ ನ ಪ್ರಮೋಷನ್ ಇದ್ದರೂ ರೂಪದರ್ಶಿಯರು ಅವಶ್ಯಕವಾಗಿದ್ದು, ಮಾಡೆಲಿಂಗ್‌ ಕ್ಷೇತ್ರದಲ್ಲಿ, ಮಹಿಳಾ ಹಾಗೂ ಪುರುಷ ರೂಪದರ್ಶಿಯರು ಲಕ್ಷಗಟ್ಟಲೇ ಆದಾಯ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಸರಾಸರಿಯಾಗಿ ಹೇಳುವುದಾದರೆ ಪುರುಷ ಮಾಡೆಲ್‌ ವಾರ್ಷಿಕ ಪ್ಯಾಕೇಜ್ ಸುಮಾರು INR 30 ಲಕ್ಷ ರೂಪಾಯಿ ಇದ್ದು, ಮಹಿಳಾ ಮಾಡೆಲ್‌ ಸುಮಾರು 40 ಲಕ್ಷ ಪಡೆಯುತ್ತಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳೆಯರಲ್ಲಿ ಕೆಲವು ಮಾಡೆಲ್‌ಗಳೆಂದರೆ ರಿಕಿ ಚಟರ್ಜಿ, ಸೋನಾಲಿಕಾ ಸಹಾಯ್, ಲಕ್ಷ್ಮಿ ರಾಣಾ ಮತ್ತು ಅರ್ಚನಾ ಅಖಿಲ್ ಕುಮಾರ್ ಆಗಿದ್ದಾರೆ. ಇದಲ್ಲದೆ, ಸೋನಾಲಿ ಶರ್ಮಾ, ಜಸ್ಮೀತ್ ದೇವಗನ್ ಮತ್ತು ತಮನ್ನಾ ಕಟೋಚ್ ಸಂಭಾವನೆಯ ವಿಷಯದಲ್ಲಿ ಈ ದಿವಾ ಗಳಿಗೆ ಸರಿಸಮಾನವಾಗಿರುವ ಹೊಸ ಮಹಿಳಾ ಮಾಡೆಲ್‌ಗಳಾಗಿದ್ದಾರೆ. ವಿವೇಕ್ ಧಿಮಾನ್, ಬರ್ದೀಪ್ ಧಿಮಾನ್, ನಿತಿನ್ ಗುಪ್ತಾ, ಗೌರವ್ ಚೌಧರಿ ಮತ್ತು ವೈಭವ್ ಆನಂದ್ ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಪುರುಷ ಮಾಡೆಲ್‌ಗಳಾಗಿದ್ದಾರೆ.

ಹೆಚ್ಚಿನ ಜಾಹಿರಾತು ನೋಡುಗರನ್ನು ತನ್ನತ್ತ ಸೆಳೆಯಲು ನಾನಾ ತಂತ್ರ ರೂಪಿಸುತ್ತದೆ. ಕೆಲವು ಜಾಹಿರಾತುಗಳು ಭಾವನೆಗಳ ಮೂಲಕ, ಇನ್ನೂ ಕೆಲವು ಮಾಹಿತಿ ಪೂರಕವಾಗಿ ಜೊತೆಗೆ ದೃಶ್ಯದ ಎಡಿಟಿಂಗ್ ಮೂಲಕ ಜನಮನದಲ್ಲಿ ತನ್ನದೇ ಟ್ರೇಡ್ ಮಾರ್ಕ್ ರೂಪಿಸಿಕೊಂಡಿದೆ.

ಅನುಭವಿ ಪುರುಷ ಮಾಡೆಲ್‌ ಜಾಹೀರಾತಿಗೆ ಹಾಗೂ ಪ್ರಚಾರ ಹಾಗೂ ಡಿಸೈನರ್‌ ಶೂಟ್‌ ಗಳಿಗೆ ತಿಂಗಳಿಗೆ 2 ರಿಂದ ಎರಡೂವರೆ ಲಕ್ಷ ಗಳಿಕೆ ಮಾಡುತ್ತಾರೆ. ಮಹಿಳಾ ಮಾಡೆಲ್‌ ಗಳು ತಿಂಗಳಿಗೆ 3 ರಿಂದ ಮೂರೂವರೆ ಲಕ್ಷ ಗಳಿಸುತ್ತಾರೆ. ಡಿಜಿಟಲ್ ಪ್ರೆಸೆನ್ಸ್‌ ಹೆಚ್ಚಿಸುವಾಗ ಮಾಡೆಲ್‌ಗಳ ಕೆಲಸವು ಹತ್ತು ಪಟ್ಟು ಹೆಚ್ಚಾಗುತ್ತದೆ.

ಇನ್ನು ದಶಕದ ಹಿಂದೆ ಕೂಡ ಮಾಡೆಲಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಜೊತೆಗೆ ಜನಪ್ರಿಯ ರೂಪದರ್ಶಿಯರಿಗೆ 30 ರಿಂದ 40 ಲಕ್ಷ ಆದಾಯ ಸಿಗುತ್ತಿತ್ತು ಎಂದರೆ ಅಚ್ಚರಿಯಾಗಹುದು.
ಬಿಸ್ನೆಸ್ ಮಾಡಿದವರೆಲ್ಲ ಲಾಭ ಗಳಿಸುತ್ತಾರೆ ಎನ್ನಲು ಸಾಧ್ಯವಿಲ್ಲ ಹಾಗೆಯೇ ಮಾಡೆಲಿಂಗ್‌ ಕ್ಷೇತ್ರದಲ್ಲಿ ಎಲ್ಲರೂ ಯಶಸ್ವಿಯಾಗುತ್ತಾರೆ ಎನ್ನಲು ಸಾಧ್ಯವಿಲ್ಲ. ನೋಡುಗರಿಗೆ ಕಾಣೋ ಮುಖಗಳು ಕೆಲವೊಂದಿಷ್ಟು ಮಾತ್ರ.

ಮಾರುಕಟ್ಟೆಯಲ್ಲಿ ಹಲವಾರು ಮಾಡೆಲಿಂಗ್ ಕೆಲಸಗಳಿದ್ದು, ಪ್ರತಿದಿನ ಹೊಸ ಹೊಸ ಬ್ರ್ಯಾಂಡ್‌ಗಳು ಮಾರುಕಟ್ಟೆ ತಲುಪಿ ಹೆಚ್ಚಿನ ಪ್ರಯೋಗಗಳು ನಡೆಸುತ್ತಲೇ ಇರುತ್ತವೆ. ತಮ್ಮ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳು ಪ್ರಚಲಿತ ವಾಗಲು ನಿಯಮಿತವಾಗಿ ಶೂಟ್ ಮಾಡಿಸುತ್ತಾರೆ.

ಇನ್‌ ಸ್ಟಾಗ್ರಾಂ ನಂಥ ಸಾಮಾಜಿಕ ಜಾಲತಾಣಗಳು ಕೂಡ ಟ್ರೆಂಡ್ ಬದಲಿಸಿ, ಪ್ರತಿ ವರ್ಷ ಕೇವಲ ಎರಡು ಪ್ರಚಾರಗಳನ್ನು ಮಾಡುತ್ತಿದ್ದ ವಿನ್ಯಾಸಕರು, ಇದೀಗ ಪ್ರತಿ ತಿಂಗಳು ಕನಿಷ್ಠ ಒಂದು ಅಭಿಯಾನವನ್ನು ಮಾಡಿಸುತ್ತಿದೆ. ಆದ್ದರಿಂದ ಮಾಡೆಲ್‌ಗಳಿಗೆ ಹೆಚ್ಚಿನ ಆದಾಯ ಗಳಿಸಲು ಅವಕಾಶದ ಬಾಗಿಲುಗಳು ತೆರೆದಿವೆ.

ಇನ್ನು ರನ್‌ವೇ ಶೋಗಳಲ್ಲಿ, ಒಬ್ಬ ಪುರುಷ ಮಾಡೆಲ್ ಪ್ರತಿ ಪ್ರದರ್ಶನಕ್ಕೆ ಸುಮಾರು 7 ರಿಂದ 10 ಸಾವಿರದಷ್ಟು ಆದಾಯ ಗಳಿಸಿದರೆ, ಮಹಿಳಾ ರೂಪದರ್ಶಿ ಅನುಭವದ ಅನುಸಾರ ಪ್ರತಿ ಪ್ರದರ್ಶನಕ್ಕೆ 15 ರಿಂದ 20 ಸಾವಿರ ರೂ.ಗಳನ್ನು ಗಳಿಸಬಹುದು. ಪ್ರಮೋಷನಲ್‌ ಶೂಟಿಂಗ್‌ ಮತ್ತು ಟಿವಿ ಜಾಹೀರಾತುಗಳನ್ನು ಮಾಡುವ ಮಾಡೆಲ್‌ಗಳಂತೆ ರ್‍ಯಾಂಪ್ ಮಾಡೆಲ್‌ಗಳು ಹೆಚ್ಚು ಹಣವನ್ನು ಗಳಿಸದಿರಬಹುದು, ಆದರು ಮಾಡೆಲಿಂಗ್‌ ಕ್ಷೇತ್ರದಲ್ಲಿ ಟ್ರೆಂಡ್ ಸೃಷ್ಟಿಸಿದವರು 3 ದಿನಗಳ ರಾಂಪ್ ಶೋಗಳಿಗೆ 3 ಲಕ್ಷದವರೆಗು ಆದಾಯ ಗಳಿಸಬಹುದು .

ಭಾರತೀಯ ಫ್ಯಾಷನ್‌ ಕ್ಷೇತ್ರದಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಜನಪ್ರಿಯರಾಗಿರುವ ಸಬ್ಯಸಾಚಿ ಅವರ ಡಿಸೈನರ್‌ ಬಟ್ಟೆಗಳು ಜಾಗತಿಕ ಮಟ್ಟದಲ್ಲಿ ಹೆಚ್ಚು ಹೆಸರು ಗಳಿಸಿದ್ದು, ಡಿಸೈನರ್‌ ಬಟ್ಟೆಗಳ ಪ್ರಚಾರ ಮಾಡುವ ಮಾದರಿಗಳಿಗೆ ಉತ್ತಮ ಸಂಭಾವನೆಯನ್ನು ನೀಡಲಾಗುತ್ತಿದೆ. ಅದು ಪುರುಷ ಅಥವಾ ಮಹಿಳೆಯಾಗಿರಲಿ, ಅವರು ಒಂದು ದಿನಕ್ಕೆ ಸುಮಾರು INR 80 ಸಾವಿರದಿಂದ 1 ಲಕ್ಷದವರೆಗೆ ಪಾವತಿಸುತ್ತಾರೆ. ಮಾಡೆಲ್‌ ಗಳಿಗೆ ದೊಡ್ಡ ಮೊತ್ತದ ಸಂಭಾವನೆ ನೀಡುವವರಲ್ಲಿ ಅನಿತಾ ಡೋಂಗ್ರೆ ಹೆಸರು ಮೊದಲಿಗರಾಗಿದ್ದು, ತಮ್ಮ ಮಹಿಳಾ ರೂಪದರ್ಶಿಗಳಿಗೆ ದಿನದ ಪ್ರಚಾರದ ಚಿತ್ರೀಕರಣಕ್ಕಾಗಿ 2 ಲಕ್ಷ ರೂ. ಪಾವತಿಸುವುದು ವಿಶೇಷ.

ಮಾಡೆಲಿಂಗ್‌ ನಲ್ಲಿ ಆಸಕ್ತಿ ಇರುವವರು ಈ ಕ್ಷೇತ್ರದಲ್ಲಿ ಒಳ್ಳೆಯ ಟ್ರೇನಿಂಗ್‌ ಪಡೆದು ಇದನ್ನು ಪೂರ್ಣಪ್ರಮಾಣದ ವೃತ್ತಿಯಾಗಿ ಆಯ್ಕೆ ಮಾಡಿಕೊಂಡು, ಫ್ಯಾಷನ್‌ ಜೊತೆಗೆ ಒಳ್ಳೆಯ ಆದಾಯವನ್ನೂ ಗಳಿಸಬಹುದು.

Leave A Reply

Your email address will not be published.