ಸಾರಿಗೆ ಸಚಿವರಿಂದ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ | ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ 2814 ಚಾಲಕರ ಹುದ್ದೆಗಳ ನೇಮಕ

ಬೆಂಗಳೂರು : ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ 2814 ಚಾಲಕರ ಹುದ್ದೆಗಳನ್ನು ಶೀಘ್ರದಲ್ಲೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ವಿಧಾನಸಭೆಗೆ ತಿಳಿಸಿದ್ದು, ಈ ಮೂಲಕ ಉದ್ಯೋಗಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ವಿಧಾನಸಭೆಯಲ್ಲಿ ಶಾಸಕ ಲಿಂಬಣ್ಣನವರ ಪ್ರಶ್ನೆಗೆ ಉತ್ತರಿಸಿದ ಅವರು ‘2814 ಚಾಲಕರು ಹಾಗೂ ಇದರ ಜೊತೆ ಹೆಚ್ಚುವರಿಯಾಗಿ 250 ಚಾಲಕ ಕಂ ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಚಾಲಕರನ್ನು ನೇಮಿಸಿಕೊಳ್ಳಲಾಗುತ್ತದೆ’ ಎಂದರು.

ಸದ್ಯ ಸಂಸ್ಥೆಯಲ್ಲಿ 2500 ಚಾಲಕ, 55 ಚಾಲಕರು ( ಬ್ಯಾಕ್ ಲಾಗ್ ) , 250 ಚಾಲಕ ಕಂ ನಿರ್ವಾಹಕ ( ಬ್ಯಾಕ್ ಲಾಗ್ ) ಸೇರಿದಂತೆ ಒಟ್ಟು 2814 ಹುದ್ದೆಗಳ ನೇಮಕಕ್ಕೆ 2019 ರಲ್ಲೇ ಅಧಿಸೂಚನೆ ಹೊರಡಿಸಲಾಗಿತ್ತು. ಆದ್ರೆ, ಕೋವಿಡ್ ಕಾರಣದಿಂದ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ನೇಮಕಾತಿ ಪ್ರಕ್ರಿಯೆಗೆ ಪ್ರಸ್ತಾವನೆ ಸ್ವೀಕೃತಗೊಂಡಿದೆ ಎಂದು ಮಾಹಿತಿ ನೀಡಿದರು.

ಗದಗ ಜಿಲ್ಲೆ ಕಲಘಟ್ಟಗಿ ತಾಲ್ಲೂಕಿನ ಬಸ್ ಘಟಕಕ್ಕೆ ಶಾಸಕರ 50 ಹೊಸ ಬಸ್‍ಗಳನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ. ಆದರೆ ನಮ್ಮ ಮುಂದೆ ಸದ್ಯಕ್ಕೆ ಹೊಸ ಬಸ್‍ಗಳನ್ನು ಖರೀದಿಸುವ ಪ್ರಸ್ತಾವನೆ ಇಲ್ಲ. ಇರುವ ಕಡೆ ಬಸ್‍ಗಳನ್ನೇ ಹೊಂದಾಣಿಕೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

Leave A Reply

Your email address will not be published.