ದಕ್ಷಿಣ ಕನ್ನಡ ಉಡುಪಿಯಲ್ಲಿ ಪಡಿತರ ಅಕ್ಕಿಯ ಕಳ್ಳ ಸಾಗಾಟ | 3 ಸಾವಿರ ಕ್ವಿಂಟಾಲ್ ಅಕ್ಕಿ ವಶ

ಪ್ರತಿ ತಿಂಗಳು ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ವಿತರಿಸಲು ಉಡುಪಿ ಜಿಲ್ಲೆಗೆ ಸರಾಸರಿ 40 ಸಾವಿರ ಕ್ವಿಂಟಾಲ್‌ ಅಕ್ಕಿ ಬೇಕಾಗಿದ್ದು, ಸ್ಥಳೀಯ ಕುಚ್ಚಲಕ್ಕಿಗೆ ಕೂಡ ಬೇಡಿಕೆಯಿದೆ. ಈ ನಡುವೆ ಆಂಧ್ರ ಸಹಿತ ಬೇರೆ ರಾಜ್ಯಗಳ ಕುಚ್ಚಲಕ್ಕಿಯನ್ನು ವಿತರಿಸುತ್ತಿರುವುದರಿಂದ, ಈ ಅಕ್ಕಿಯನ್ನು ಉಪಯೋಗಿಸದೆ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ.

ಈ ರೀತಿ ಅಕ್ರಮವಾಗಿ ಸಾಗಿಸಿ ಮಾರಾಟ ಮಾಡಲು ಹೊರಟ 2 ಸಾವಿರಕ್ಕೂ ಅಧಿಕ ಕ್ವಿಂಟಾಲ್‌ ಅಕ್ಕಿಯನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಜಿಲ್ಲೆಯಲ್ಲಿ 2020ರಿಂದ ಇಲ್ಲಿಯವರೆಗೆ, 32 ಕಡೆ ದಾಳಿ ನಡೆಸಿ, ಹೀಗೆ ಮಾರಾಟ ಮಾಡಲು ಯತ್ನಿಸಿದ 61 ಮಂದಿಯನ್ನು ಬಂಧಿಸಿ, 2,695 ಕ್ವಿಂಟಾಲ್‌ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಇದೇ ರೀತಿಯ ಪ್ರಕರಣ ದಕ್ಷಿಣ ಕನ್ನಡದಲ್ಲೂ ನಡೆದಿದ್ದು, ಜಿಲ್ಲೆಯಲ್ಲಿ 2021ರ ಆಗಸ್ಟ್‌ನಿಂದ ಈ ವರೆಗೆ ಒಟ್ಟು 5 ಕಡೆ ದಾಳಿ ನಡೆಸಿ 6 ಮಂದಿಯನ್ನು ಬಂಧಿಸಿ 294 ಕ್ವಿಂಟಾಲ್‌ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಪಡಿತರ ಚೀಟಿ ಹೊಂದಿದವರ ಪಟ್ಟಿ ನೋಡುತ್ತಾ ಹೊರಟರೆ, ಕಾರ್ಕಳದಲ್ಲಿ 31,060 ಕಾರ್ಡ್‌, ಕುಂದಾಪುರದಲ್ಲಿ 46,931, ಉಡುಪಿಯಲ್ಲಿ 29,028, ಕಾಪುವಿನಲ್ಲಿ 18,708, ಬ್ರಹ್ಮಾವರದಲ್ಲಿ 31,417, ಬೈಂದೂರಿನಲ್ಲಿ 26,523 ಹಾಗೂ ಹೆಬ್ರಿಯಲ್ಲಿ 9,434 ಸಹಿತ ಜಿಲ್ಲೆಯಲ್ಲಿ ಒಟ್ಟು 1,93,101 ಪಡಿತರ ಚೀಟಿಗಳಿವೆ. 8,12,269 ಸದಸ್ಯರಿದ್ದಾರೆ. ಇದರಲ್ಲಿ 7.64 ಲಕ್ಷಕ್ಕೂ ಅಧಿಕ ಸದಸ್ಯರು ಕೆವೈಸಿ ಮಾಡಿಸಿಕೊಂಡಿದ್ದಾರೆ.

ಪ್ರತೀ ಅಂತ್ಯೋದಯ ಕಾರ್ಡ್‌ಗೆ 35 ಕೆ.ಜಿ., ಬಿಪಿಎಲ್‌ ಕಾರ್ಡ್‌ನ ಪ್ರತೀ ಸದಸ್ಯರಿಗೆ 5 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಕೇಂದ್ರ ಸರಕಾರದಿಂದ ಅಂತ್ಯೋದಯ ಹಾಗೂ ಬಿಪಿಎಲ್‌ ಕಾರ್ಡ್‌ನ ಪ್ರತೀ ಸದಸ್ಯರಿಗೆ 5 ಕೆ.ಜಿ. ನೀಡಲಾಗುತ್ತದೆ. ಅಕ್ಕಿ, ಸೀಮೆಎಣ್ಣೆ ಹಾಗೂ ಇತರ ಆಹಾರ ಸಾಮಗ್ರಿಯನ್ನು ಲಭ್ಯತೆಯ ಅನುಸಾರ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಬಹುತೇಕರು ಈ ಅಕ್ಕಿಯನ್ನು ಒಂದು ಹೊತ್ತಿಗೆ ಸೀಮಿತಗೊಳಿಸಿ ಉಳಿದ ಅಕ್ಕಿಯನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಪ್ರಕರಣಗಳು ನಡೆಯುತ್ತಿವೆ.

ಪಡಿತರ ವ್ಯವಸ್ಥೆಯಡಿ ಪಡೆದ ಅಕ್ಕಿಯನ್ನು ಮಾರಾಟ ಮಾಡಿದರೆ ಇಲ್ಲವೇ ದುರುಪಯೋಗ ಪಡಿಸಿಕೊಂಡರೆ ಅಂತಹ ಕುಟುಂಬದ ಪಡಿತರ ಚೀಟಿಯನ್ನು 6 ತಿಂಗಳು ಅಮಾನತು ಮಾಡಲು ಕಾನೂನಿನಲ್ಲಿ ಅವಕಾಶವಿದೆ.

ಅಕ್ಕಿ ಅಥವಾ ಪಡಿತರವನ್ನು ಮಾರಾಟ ಮಾಡಲು ತೊಡಗಿಸಿಕೊಂಡವರ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಾಗುವುದಲ್ಲದೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲೂ ಪ್ರಕರಣ ದಾಖಲಾಗುತ್ತದೆ. ಹೀಗೆ ವಶಪಡಿಸಿಕೊಂಡ ಅಕ್ಕಿಯನ್ನು ಸಾರ್ವಜನಿಕವಾಗಿ ಹರಾಜು ಹಾಕುವ ಅಥವಾ ಪಡಿತರ ವ್ಯವಸ್ಥೆಯಲ್ಲಿ ಎಪಿಎಲ್‌ ಕಾರ್ಡ್‌ದಾರರಿಗೆ ಸರಕಾರದ ನಿರ್ದಿಷ್ಟ ಬೆಲೆಯಲ್ಲಿ ವಿತರಿಸುವ ಪ್ರಕ್ರಿಯೆಯಾಗಿ, ಬಂದ ಹಣವನ್ನು ನೇರವಾಗಿ ಸರಕಾರದ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತದೆ.

Leave A Reply

Your email address will not be published.