Health Tips : ಈ 6 ಬಗೆಯ ಟೀ ಮಾಡಿ ಆರೋಗ್ಯ ವೃದ್ಧಿಸಿ | ‘ಗಿಡಮೂಲಿಕೆ ಚಾ’ ಗಳ ಪ್ರಯೋಜನ ಇಲ್ಲಿದೆ

ಹೆಚ್ಚಿನವರ ದಿನಚರಿ ಒಂದು ಕಪ್ ಟೀಯಿಂದ ಆರಂಭವಾಗುತ್ತದೆ. ಮನಸ್ಸಿಗೆ ಹಿತಕರ ಅನುಭವ ನೀಡುವ ಚಾಯವನ್ನೂ ಬಯಸದೇ ಇರುವವರೇ ವಿರಳ. ನಾವು ಸೇವಿಸುವ ಟೀ ಗೆ ಶುಂಠಿ, ಜೇನುತುಪ್ಪ, ಔಷಧೀಯ ಗುಣ ಹೊಂದಿರುವ ಗಿಡಮೂಲಿಕೆಗಳನ್ನು ಬೆರೆಸಿ ಕುಡಿದರೆ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

ಗಿಡಮೂಲಿಕೆ ಬಳಸಿ ತಯಾರಿಸುವ ಟೀ ಹಾಗೂ ತಯಾರಿಸುವ ವಿಧಾನ ತಿಳಿಯುವುದಾದರೆ:
ಹರ್ಬಲ್ ಟೀ ಎಂದೇ ಪ್ರಸಿದ್ದಿ ಪಡೆದಿರುವ ಈ ಟೀ ಸಂಪೂರ್ಣ ಆಯುರ್ವೇದಿಕಾ ಗಿಡಮೂಲಿಕೆಗಳಿಂದ ತಯಾರಿಸಲಾಗುತ್ತದೆ. ಈ ಚಹಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.

ಆರೋಗ್ಯದ ಜೊತೆಗೆ ರುಚಿ ಮತ್ತು ಪರಿಮಳವನ್ನು ಇಷ್ಟಪಡುವ ಜನರು ಪುದೀನಾ ಚಹಾವನ್ನು ವಿಶೇಷವಾಗಿ ನೆಚ್ಚಿಕೊಂಡು, ತಾಜಾತನದ ಅನುಭವದ ಜೊತೆಗೆ ದೇಹದ ಜೀರ್ಣಾಂಗ ವ್ಯವಸ್ಥೆಗೆ ನೆರವಾಗುತ್ತದೆ. ಪುದೀನಾ ಟೀ ಸೇವನೆ ಮಾಡುವುದರಿಂದ ತ್ವಚೆ ಆರೋಗ್ಯವಾಗಿರುತ್ತದೆ. ಇದಲ್ಲದೆ, ಪುದಿನಾದಲ್ಲಿ ಅಡಕವಾಗಿರುವ ಉತ್ಕರ್ಷಣ ನಿರೋಧಕ ಅಂಶ ದೇಹವನ್ನು ರೋಗಗಳಿಂದ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ. ಟೀ ತಯಾರಿಸುವ ವಿಧಾನ: ಪುದಿನಾದ ತಾಜಾ ಎಲೆಗಳನ್ನು 4 ರಿಂದ 5 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಕುದಿಸಿ ಮತ್ತು ಬಿಸಿ ಚಹಾದಂತೆ ಕುಡಿಯಬಹುದು. ರಾತ್ರಿ ಮಲಗುವ ಮುನ್ನ ಇದನ್ನು ಕುಡಿದರೆ ಒಳ್ಳೆಯ ನಿದ್ದೆ ಬರುತ್ತದೆ.
ಮತ್ತೊಂದು ರೀತಿಯಲ್ಲಿ ಸಹ ಪುದೀನಾ ಟೀ ತಯಾರಿಸಬಹುದು. 8-10 ಪುದೀನ ಎಲೆಗಳು, ಕರಿಮೆಣಸು, ಕಪ್ಪು ಉಪ್ಪು, 2 ಕಪ್ ನೀರು ಹಾಕಿ ಕುದಿಸಿ ನಂತರ ಅದಕ್ಕೆ ಮೆಂತೆ ಸೊಪ್ಪು, ಕರಿಮೆಣಸು, ಕಪ್ಪು ಉಪ್ಪನ್ನು ಹಾಕಿ ಸ್ವಲ್ಪ ಹೊತ್ತು ಕುದಿಸಿ ಸಿದ್ಧಪಡಿಸಬಹುದು.

ಔಷಧೀಯ ಗುಣಗಳನ್ನು ಹೊಂದಿರುವಂತಹ ಶುಂಠಿಯು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗಿದ್ದು, ಇದರ ಜೊತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಶುಂಠಿ ಚಹಾವು ತುಂಬಾ ಪ್ರಯೋಜನಕಾರಿಯಾಗಿದೆ. ಇದಲ್ಲದೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ, ಹಸಿವನ್ನು ಹೆಚ್ಚಿಸುತ್ತದೆ. ಶುಂಠಿ ಟೀ ತಯಾರಿಸಲು ಮೊದಲು ಶುಂಠಿಯನ್ನು ನೀರಿನಲ್ಲಿ ಒಂದು ನಿಮಿಷ ಕುದಿಸಿ ಬಳಿಕ ಚಹಾ ಎಲೆಗಳನ್ನು ಸೇರಿಸಿ ಮತ್ತೊಮ್ಮೆ ಕುದಿಸಿ ಫಿಲ್ಟರ್ ಮಾಡಿ ಜೇನುತುಪ್ಪ ಸೇರಿಸಿ ಸೇವಿಸಬಹುದು.

ತುಳಸಿ ಚಹಾವನ್ನು ಸೇವಿಸುವುದರಿಂದ ಉಸಿರಾಟದ ಸಮಸ್ಯೆ, ಸಕ್ಕರೆಯನ್ನು ನಿಯಂತ್ರಿಸಲು ಸಹಕರಿಸುತ್ತದೆ.
ತುಳಸಿ ಟೀ ತಯಾರಿಸಲು ನೀರಿಗೆ ತುಳಸಿ ಎಲೆ, ಶುಂಠಿ ಹಾಕಿ ಚೆನ್ನಾಗಿ ಕುದಿಸಬೇಕು. ಬಳಿಕ ಅದಕ್ಕೆ ಕಾಳುಮೆಣಸು, ಲವಂಗ, ಸಣ್ಣ ಏಲಕ್ಕಿ ಮತ್ತು ಚಹಾ ಎಲೆಗಳನ್ನು ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಕುದಿಸಿ ನಂತರ ಬೆಲ್ಲವನ್ನು ಸೇರಿಸಿ ಕುದಿಸಿ ಫಿಲ್ಟರ್ ಮಾಡಿ ಚಹಾ ಸೇವಿಸಬಹುದು.

ಲೆಮನ್ ಗ್ರಾಸ್ ಚಹಾದಲ್ಲಿ ಕೇವಲ ದೇಹಕ್ಕೆ ಬೇಕಾದ ಆಂಟಿಆಕ್ಸಿಡೆಂಟ್ ಮಾತ್ರವಲ್ಲದೆ ಹೃದಯಕ್ಕೆ ಅಗತ್ಯವಾಗಿ ಬೇಕಾದ ಆಂಟಿಆಕ್ಸಿಡೆಂಟ್ ಗಳಿದ್ದು, ಹೃದಯದ ರಕ್ತನಾಳಗಳ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ಫ್ರೀ ರಾಡಿಕಲ್ ಗಳಿಂದ ಯಾವುದೇ ಭಾಗದಲ್ಲಿ ಜೀವಕೋಶಗಳ ಹಾನಿಯನ್ನು ತಡೆಯುತ್ತವೆ. ಲಿಂಬು ಹುಲ್ಲಿನ ಟೀ ಮಾಡಿ ಸೇವನೆ ಮಾಡಿದರೆ ಮೂಳೆ ರಚನೆಯನ್ನು ಸುಧಾರಿಸಿ ಮೂಳೆಗಳು ಬಲಗೊಳ್ಳಲು ಅನುಕೂಲವಾಗುತ್ತದೆ. ಈ ಚಹಾ ತಯಾರು ಮಾಡಲು ಒಂದು ಸಣ್ಣ ಸ್ಟೀಲ್ ಪಾತ್ರೆಯಲ್ಲಿ ಎರಡು ಕಪ್ ನೀರು ಹಾಕಿ ಕುದಿಸಿ. ಲೆಮನ್ ಗ್ರಾಸ್ ತೆಗೆದುಕೊಂಡು ಅದನ್ನು ಚೆನ್ನಾಗಿ ಸ್ವಚ್ಛ ಮಾಡಿ ನೀರಿನಲ್ಲಿ ಹಾಕಿ ಐದಾರು ನಿಮಿಷ ಕುದಿಸಿ ಸೋಸಿಕೊಳ್ಳಬೇಕು. ಸ್ವಲ್ಪ ತಣ್ಣಗಾದ ಮೇಲೆ ಅದಕ್ಕೆ ಸ್ವಲ್ಪ ಜೇನು ತುಪ್ಪ ಮತ್ತು ನಿಂಬೆ ಹುಳಿ ಸೇರಿಸಬೇಕು. ಬೇಕಾದರೆ, ದಾಲ್ಚಿನ್ನಿ ಪುಡಿಯನ್ನು ಕೂಡ ಸೇರಿಸಬಹುದು.

ಲೈಕೋರೈಸ್ ಚಹಾ ,ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದ್ದು, ಯಕೃತ್ತು, ವಸಡಿನ ಸೋಂಕು, ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಈ ಚಹಾವನ್ನು ತಯಾರಿಸಲು, ಮೊದಲನೆಯದಾಗಿ 1 ತುಂಡು ಲೈಕೋರೈಸ್ ತೆಗೆದುಕೊಂಡು, ಇದನ್ನು 1 ಕಪ್ ನೀರಿನಲ್ಲಿ ಚೆನ್ನಾಗಿ ಕುದಿಸಿ. ನಂತರ, ಸ್ವಲ್ಪ ಅರಿಶಿನ ಮತ್ತು ಕರಿಮೆಣಸಿನ ಪುಡಿಯನ್ನು ಸೇರಿಸಿ ಫಿಲ್ಟರ್ ಮಾಡಿ ಸೇವಿಸಬಹುದು.

ಗ್ರೀನ್‍ ಟೀಯನ್ನು ಬಳಸುವುದರಿಂದ, ನೀವು ತೂಕವನ್ನು ಕಳೆದುಕೊಳ್ಳಬಹುದು. ನಿತ್ಯ ಕುಡಿದರೆ ವೃದ್ಧಾಪ್ಯ ಬೇಗ ಬರುವುದಿಲ್ಲ. ಇದು ಶೂನ್ಯ ಕ್ಯಾಲೊರಿಗಳನ್ನು ಹೊಂದಿರುತ್ತದೆ.
ಈ ಟೀಯನ್ನು ತಯಾರಿಸಲು ಒಂದು ಪಾತ್ರೆಯಲ್ಲಿ 2-4 ಗ್ರಾಂ ಹಸಿರು ಚಹಾ ಎಲೆಗಳನ್ನು ಸೇರಿಸಿ. ನೀರನ್ನು ಚೆನ್ನಾಗಿ ಕುದಿಸಿ. ಈ ನೀರನ್ನು ಲೋಟಕ್ಕೆ ಸುರಿದು, 2-3 ನಿಮಿಷಗಳ ಕಾಲ ಬಿಟ್ಟು, ಸ್ವಲ್ಪ ತಣ್ಣಗಾದಾಗ ಕುಡಿಯಬಹುದು.

ಅಶ್ವಗಂಧವನ್ನು ಸೇವಿಸುವುದರಿಂದ ದೌರ್ಬಲ್ಯ, ನಿದ್ರೆಯ ಕೊರತೆ, ಒತ್ತಡ, ಸಂಧಿವಾತದಂತಹ ರೋಗಗಳು ಶೀಘ್ರವಾಗಿ ದೂರವಾಗುತ್ತವೆ. ಇದಲ್ಲದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಬಳಿಕ 1 ರಿಂದ 2 ಅಶ್ವಗಂಧದ ಬೇರು ಅಥವಾ ಒಂದು ಚಮಚ ಅಶ್ವಗಂಧ ಪುಡಿಯನ್ನು ಸೇರಿಸಿ 10 ನಿಮಿಷಗಳ ಕಾಲ ಕುದಿಸಿ ಅದಕ್ಕೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಫಿಲ್ಟರ್ ಮಾಡಿ ಅಶ್ವಗಂಧದ ಟೀ ಸೇವಿಸಬಹುದು. ಗಿಡಮೂಲಿಕೆಗಳಿಂದ ತಯಾರಿಸಿದ ಚಹಾದ ಸೇವನೆಯು ತಾಜಾತನದ ಜೊತೆಗೆ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ.

Leave A Reply

Your email address will not be published.