Workout : ಮಹಿಳೆಯರು ಈ ಸಂದರ್ಭಗಳಲ್ಲಿ ವರ್ಕೌಟ್ ಮಾಡಲೇಬಾರದು…

ಅತಿಯಾದರೆ ಅಮೃತವೂ ವಿಷವೇ!!! ಇದು ಕೇವಲ ಆಹಾರ ಕ್ರಮಗಳಿಗೆ ಅನ್ವಯವಾಗುವ ಮಾತಲ್ಲ. ಫಿಟ್ ಹಾಗೂ ಸ್ಲಿಮ್ ಆಗಿರಬೇಕೆಂದು ಅತಿಯಾಗಿ ದೇಹವನ್ನು ದಂಡಿಸಿದರೂ ಕೂಡ ಅಪಾಯವೇ. ವ್ಯಾಯಾಮ ಅತಿಯಾದರೆ ದೇಹದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎನ್ನುವ ಸಂಗತಿ ಎಲ್ಲರಿಗೂ ತಿಳಿದಿದೆ. ಇದಕ್ಕೆ ಇತ್ತೀಚಿನ ದಿನಗಳಲ್ಲಿ ಜೀವಂತ ನಿದರ್ಶನಗಳನ್ನು ಕೂಡ ನಾವು ಗಮನಿಸಿದ್ದೇವೆ. ದೈಹಿಕ ಚಟುವಟಿಕೆಗಳಿಗೂ, ಆಹಾರ ಪದ್ಧತಿಗೂ ಹೊಂದಾಣಿಕೆ ಇಲ್ಲದೇ ಹೋದರೆ ಅನಾರೋಗ್ಯ ಉಂಟಾಗುತ್ತದೆ. ಡಯೆಟ್ ಮೆತ್ತು ಜಿಮ್ಮಿನಲ್ಲಿ ಬೆವರು ಹರಿಸುವುದರಿಂದ ತೂಕ ಕಡಿಮೆಯಾಗಬಹುದು ನಿಜ. ಆದರೆ ಅದರಿಂದ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತವೆ. ಅತಿಯಾದ ವರ್ಕೌಟ್ ನಿಂದ ಹೃದಯದ ಮೇಲೆ ಒತ್ತಡ ಬೀಳುತ್ತದೆ. ಅಮೆರಿಕದಲ್ಲಿ ನಡೆದ ಸಂಶೋಧನೆಯೊಂದು ಅತಿಯಾದ ವ್ಯಾಯಾಮದಿಂದ ಹೃದಯದ ತೊಂದರೆ ಉಂಟಾಗಬಹುದು ಎಂಬುದನ್ನು ದೃಢಪಡಿಸಿದೆ.

ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟು ವ್ಯಾಯಾಮವನ್ನೇ ಮಾಡಿಕೊಂಡು ಹೋದರೆ ಯಾವುದೇ ತೊಂದರೆ ಬಾರದು. ಆ ಬಗೆಯ ವ್ಯಾಯಾಮದಿಂದ ರಕ್ತಪರಿಚಲನೆ, ಜೀರ್ಣಾಂಗ ವ್ಯವಸ್ಥೆ ಮತ್ತು ದೇಹದಿಂದ ಟಾಕ್ಸಿನ್ಸ್ ಗಳನ್ನು ಹೊರಹಾಕುವ ಪ್ರಕ್ರಿಯೆ ಎಲ್ಲವೂ ಸರಾಗವಾಗಿ ನಡೆಯುತ್ತದೆ.ಅಷ್ಟೆ ಅಲ್ಲದೆ ವರ್ಕ್ಔಟ್ ಮಾಡುವುದರಿಂದ ನಮ್ಮ ದೇಹವು ಕ್ರಿಯಾಶೀಲವಾಗಿ, ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ . ಆದರೆ ಕೆಲವು ಸಂದರ್ಭಗಳಲ್ಲಿ ಮಹಿಳೆಯರು ವರ್ಕೌಟ್ ಮಾಡಲೇಬಾರದು.
ಅತಿಯಾದ ವರ್ಕೌಟ್ ಕೆಲ ಸಂದರ್ಭಗಳಲ್ಲಿ ಮಹಿಳೆಯರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.ಗರ್ಭಾವಸ್ಥೆಯಲ್ಲಿ ಮಹಿಳೆಯರು ವ್ಯಾಯಾಮ ಮಾಡುವುದು ಅಷ್ಟು ಒಳಿತಲ್ಲ. ಒಂದು ವೇಳೆ ಗರ್ಭಿಣಿ ಮಹಿಳೆಯರು ವ್ಯಾಯಾಮ ಮಾಡಲೇಬೇಕು ಎನ್ನುವಂತಿದ್ದರೆ, ಮೊದಲನೆಯದಾಗಿ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು. ಗರ್ಭಾವಸ್ಥೆಯಲ್ಲಿ ಸರಳ ವ್ಯಾಯಾಮಗಳನ್ನು ಮಾತ್ರ ಮಾಡಿ ಅರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು.

ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಿಗೆ ವಿಶ್ರಾಂತಿಯ ಅವಶ್ಯಕತೆ ಇದ್ದು, ಕೆಲವು ದಿನಗಳವರೆಗೆ ವ್ಯಾಯಾಮ ಮಾಡಬಾರದು. ಶಸ್ತ್ರಚಿಕಿತ್ಸೆಯ ನಂತರ ಮತ್ತೆ ವರ್ಕೌಟ್ ಮಾಡಲು ವೈದ್ಯರನ್ನು ಸಲಹೆ ಸೂಚನೆ ಕೇಳುವುದು ಉತ್ತಮ.ಪಿರಿಯಡ್ಸ್ ಸಮಯದಲ್ಲಿ ರಕ್ತದ ಹರಿವಿನ ಕೊರತೆಯಿಂದಾಗಿ, ದೇಹದಲ್ಲಿ ದೌರ್ಬಲ್ಯ ಉಂಟಾಗುವ ಸಂಭವವಿದ್ದು , ಕೆಲ ಮಹಿಳೆಯರಿಗೆ ವಿಶ್ರಾಂತಿಯ ಅಗತ್ಯವಿದ್ದಾಗ ,ಅಂತಹ ಸಮಯದಲ್ಲಿ ವ್ಯಾಯಾಮವನ್ನು ನಿಲ್ಲಿಸುವುದು ಒಳ್ಳೆಯದು. ಯಾವುದಾದರೂ ಗಂಭೀರ ಗಾಯವನ್ನು ಹೊಂದಿದ್ದರೆ, ಆ ಸಂದರ್ಭದಲ್ಲಿಯೂ ನೀವು ವರ್ಕೌಟ್ ಅಥವಾ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಕು. ಗಾಯದ ಸಮಯದಲ್ಲಿ ವರ್ಕೌಟ್ ಮಾಡುವುದರಿಂದ ದೇಹಕ್ಕೆ ಹೆಚ್ಚು ಒತ್ತಡವಾಗಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ, ಈ ಸಮಯದಲ್ಲಿ ವ್ಯಾಯಾಮವನ್ನು ನಿರ್ಲಕ್ಷಿಸಬೇಕು.ದೈಹಿಕ ಚಟುವಟಿಕೆ ಮಾಡುವುದರಿಂದ ಸಾಕಷ್ಟು ಉತ್ತಮ ಪರಿಣಾಮಗಳು ದೊರೆಯುತ್ತವೆ. ದೇಹಕ್ಕೆ ಅತ್ಯಂತ ಚೈತನ್ಯವೂ ಸಿಗುತ್ತದೆ. ಮಾನಸಿಕವಾಗಿಯೂ ಅಷ್ಟೇ ಸದೃಢತೆ ದೊರೆಯುತ್ತದೆ. ಆದರೆ, ಹೆಚ್ಚು ವರ್ಕೌಟ್ ಮಾಡಿದರೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಇತ್ತೀಚಿನ ದಿನಗಳಲ್ಲಿ ಸುಂದರ ಫಿಟ್ ಬದುಕಿನ ಆಮಿಷಕ್ಕೆ ಬಲಿಯಾಗಿ ಯುವಪೀಳಿಗೆ ಅನವಶ್ಯಕ ಒತ್ತಡಗಳನ್ನು ತಂದುಕೊಳ್ಳುತ್ತಿರುವುದು ವಿಪರ್ಯಾಸ. ಕ್ರಮದಲ್ಲಿ ಬದಲಾವಣೆ, ಜೀವನ ಶೈಲಿಯಲ್ಲಿ ಅತಿಯಾದ ಒತ್ತಡವು ಕೂಡ ಹೃದಯ ಸಂಬಂಧಿತ ಸಮಸ್ಯೆ ಉಂಟು ಮಾಡಬಹುದು. ಹಾಗಾಗಿ ಅರೋಗ್ಯ ಕಾಪಾಡಲು ನಿಯಮಿತ ವ್ಯಾಯಾಮ ಮಾಡಿದರೆ ಒಳ್ಳೆಯದು.

Leave A Reply

Your email address will not be published.