ಹಳೆ ಕಾರು ಮಾರಾಟಕ್ಕೆ ಹೊಸ ನಿಯಮ ಜಾರಿ!

ಇಂದು ಪ್ರತಿಯೊಬ್ಬ ವಾಹನ ಸವಾರನು ಕೂಡ ಹೊಸದಾಗಿ ವಾಹನ ಖರೀದಿಸಿದರೆ ಕೆಲವು ವರ್ಷಗಳವರೆಗೆ ಬಳಸಿ ಬಳಿಕ ಸೇಲ್ ಮಾಡೋದು ಮಾಮೂಲ್ ಆಗಿ ಬಿಟ್ಟಿದೆ. ಹೀಗಾಗಿ, ಹೊಸ ವಾಹನಗಳ ಮಾರಾಟದಂತೆಯೇ ಹಳೇ ವಾಹನಗಳ ಕೊಡುಕೊಳ್ಳುವಿಕೆ ಸಹ ಹೆಚ್ಚಾಗಿ ನಡೆಯುತ್ತದೆ. ಇದೀಗ  ಹಳೆ ಕಾರುಗಳ ಮಾರಾಟಕ್ಕೆ ಹೊಸ ನಿಯಮ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಬಳಸಿದ ವಾಹನಗಳ ಖರೀದಿದಾರರು ಮತ್ತು ಮಾರಾಟಗಾರರ ರಕ್ಷಣೆಯ ಉದ್ದೇಶ ಹಾಗೂ ಪಾರದರ್ಶಕತೆ ಕಾಪಾಡುವ ಹಿನ್ನೆಲೆಯಲ್ಲಿ ಹೊಸ ಮಾರ್ಗ ಸೂಚಿ ಜಾರಿಗೆ ತರಲಾಗುತ್ತಿದ್ದು, ಹಳೆ ಕಾರು ಖರೀದಿಸಿದ ಮಾಲೀಕರು ನಿಯಮ ಉಲ್ಲಂಘಿಸಿದ ಸಂದರ್ಭದಲ್ಲಿ ವಾಹನಗಳ ಹಿಂದಿನ ಮಾಲೀಕನಿಗೆ ದಂಡ ನೀಡುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ನೂತನ ನಿಯಮ ಜಾರಿಯಾದ ನಂತರದಲ್ಲಿ, ಆನ್​ಲೈನ್ ಮತ್ತು ಆಫ್​ಲೈನ್ ಮಧ್ಯವರ್ತಿಗಳು ತಾವು ಮಾರಾಟ ಮಾಡಲು ಉದ್ದೇಶಿಸಿರುವ ಯಾವುದೇ ವಾಹನಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಬೇಕಾಗುತ್ತದೆ ಮತ್ತು ಸಂಸ್ಥೆಯ ಹೆಸರನ್ನು ರಾಜ್ಯ ಸಾರಿಗೆ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ನಂತರವೇ ಮರು ಮಾರಾಟಗಾರನಿಗೆ ಅಗತ್ಯ ಲೈಸೆನ್ಸ್ ನೀಡಲಾಗುತ್ತದೆ.

2022ರ ಆರ್ಥಿಕ ವರ್ಷದಲ್ಲಿ 35 ಲಕ್ಷ ಹಳೇ ಕಾರುಗಳ ಮಾರಾಟವಾಗಿದೆ. ಈ ಪ್ರಮಾಣ ಹೆಚ್ಚುತ್ತಲೇ ಹೋಗುವುದರಲ್ಲಿ ಸಂದೇಹವಿಲ್ಲ. ಅದರಲ್ಲೂ ಈಗ ಆನ್​ಲೈನ್ ಮಾರಾಟ ಹೆಚ್ಚಿರುವ ಹಿನ್ನೆಲೆಯಲ್ಲಿ ಗ್ರಾಹಕ ಸುರಕ್ಷತಾ ಕ್ರಮಗಳು ಅನಿವಾರ್ಯ. ಯಾಕೆಂದರೆ, ಮಾರಾಟದ ನಂತರದಲ್ಲಿ ಹೊಸ ಮಾಲೀಕನ ಹೆಸರಿಗೆ ದಾಖಲೆ ವರ್ಗಾವಣೆಯಾಗದಿರುವುದು, ನಕಲಿ ದಾಖಲೆ ಸೃಷ್ಟಿಸಿ ಗ್ರಾಹಕರನ್ನು ವಂಚಿಸುವುದು ಮುಂತಾದ ತೊಂದರೆಗಳು ಎದುರಾಗುತ್ತದೆ.

ಹೊಸ ನಿಯಮ ಬಂದ ತರುವಾಯ, ವಾಹನಗಳನ್ನು ಮರು ಮಾರಾಟ ಮಾಡುವಾಗ ಹೊಸ ಮಾಲೀಕತ್ವದ ವಿವರಗಳನ್ನು ನವೀಕರಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಡೀಲರ್ ಜವಾಬ್ದಾರಿಯಾಗಿರುತ್ತದೆ. ಇದರಿಂದ ಪಾರದರ್ಶಕ ವ್ಯವಸ್ಥೆಗೆ ಅನುವಾಗುತ್ತದೆ. ವಾಹನ ಮಾರಾಟಗಾರ ಹಾಗೂ ಗ್ರಾಹಕ ಇಬ್ಬರಿಗೂ ನಿರಾಳತೆ ಸಿಗುತ್ತದೆ. ಹಾಗಿಲ್ಲವಾದಲ್ಲಿ ಮುಂದೆಂದಾದರೂ ಕಾನೂನು ತೊಡಕಿನಲ್ಲಿ ಸಿಕ್ಕಿಬಿದ್ದರೆ ಇಬ್ಬರಿಗೂ ಸಮಸ್ಯೆಯಾಗುತ್ತದೆ.

ರೀಸೆಲ್ಲರ್ ಡೀಲರ್ ಶಿಪ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಲೈಸೆನ್ಸ್ ರದ್ದುಗೊಳಿಸಿ ದಂಡ ವಿಧಿಸಲಾಗುವುದು. ವಾಹನ ಮಾರಾಟಕ್ಕೆ ನೋಂದಾಯಿಸಿದ ನಂತರದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಡೀಲರ್ ಮಾತ್ರ ಜವಾಬ್ದಾರಿಯಾಗಿರುತ್ತಾರೆ.

Leave A Reply

Your email address will not be published.