ಗೋವಾ ಕಾಂಗ್ರೆಸ್‌ಗೆ ಬಿತ್ತು ದೊಡ್ಡ ಹೊಡೆತ! | ಅತ್ತ ರಾಹುಲ್‌ ಗಾಂಧಿ ಭಾರತ್‌ ಜೋಡೊ ಯಾತ್ರೆ , ಇತ್ತ ಕಾಂಗ್ರೆಸ್ ಶಾಸಕರು ಬಿಜೆಪಿ ಜೋಡೊ ಯಾತ್ರೆ

ಕಾಂಗ್ರೆಸ್ ಪಕ್ಷಕ್ಕೆ ಎಲ್ಲೆಡೆ ದೊಡ್ಡ ಹೊಡೆತ ಬೀಳುತ್ತಲೇ ಇದ್ದು, ಇದೀಗ ಗೋವಾ ರಾಜಕೀಯದಲ್ಲಿ ಕಾಂಗ್ರೆಸ್ ಗೆ ಶಾಕ್ ಎದುರಾಗಿದೆ. ಹೌದು. 8 ಮಂದಿ ಕಾಂಗ್ರೆಸ್ ಶಾಸಕರು ಮತ್ತು ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ್‌ ಶೇಟ್‌ ತಾನಾವಡೆ ಇಂದು ಬೆಳಗ್ಗೆ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದರು. ಮಾಜಿ ಮುಖ್ಯಮಂತ್ರಿ ದಿಗಂಬರ್‌ ಕಾಮತ್‌, ವಿರೋಧ ಪಕ್ಷದ ನಾಯಕ ಮೈಕೆಲ್‌ ಲೋಬೊ ಸೇರಿ ಒಟ್ಟೂ ಎಂಟು ಶಾಸಕರು ಇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದರು. ಗೋವಾದಲ್ಲಿ ಒಟ್ಟೂ 11 ಕಾಂಗ್ರೆಸ್‌ ಶಾಸಕರಿದ್ದು, ಮೂರು ಶಾಸಕರು ಮಾತ್ರ ಕಾಂಗ್ರೆಸ್‌ನಲ್ಲಿ ಮುಂದುವರೆಯಲಿದ್ದಾರೆ.

ಬಿಜೆಪಿ ಸೇರ್ಪಡೆಗೊಳ್ಳುತ್ತಿರುವ ಶಾಸಕರಲ್ಲಿ ದಿಗಂಬರ್ ಕಾಮತ್, ಮೈಕೆಲ್ ಲೋಬೋ, ದೇಲಿಲಾ ಲೋಬೋ, ರಾಜೇಶ್ ಫಾಲ್ಲೇಸಾಯಿ, ಕೇದಾರ್ ನಾಯಕ್, ಸಂಕಲ್ಸ್ ಅಮೋಲ್ಕರ್, ಅಲೆಕ್ಸ್ ಸಿಕ್ವೆರಾ ಮತ್ತು ರುಡಾಲ್ಫ್ ಫೆರ್ನಾಂಡಿಸ್ ಸೇರಿದ್ದಾರೆ. ಅವರು ಸಿಎಂ ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಈ ಬೆಳವಣಿಗೆಯ ಬಗ್ಗೆ ಈ ಹಿಂದೆ ಸುಳಿವು ನೀಡಿದ್ದರು. ಈ ಕುರಿತು ಅವರು “ಕೋಗಿಲೆ ಹಕ್ಕಿ ಕೂಗುತ್ತಿದೆ, ಹಿಂದಿನ ಪೋರ್ಚುಗೀಸ್ ಪ್ರಾಂತ್ಯದಲ್ಲಿ ಏನೋ ಅಡುಗೆ ಮಾಡುತ್ತಿದೆ. ಉತ್ತಮ ವಾಸನೆ ಇಲ್ಲ.! ಕೋಗಿಲೆ ಹಕ್ಕಿ ತಪ್ಪಾಗಿದೆ ಎಂದು ಭಾವಿಸುತ್ತೇವೆ.” ಎಂದು ಟ್ವಿಟ್ ಮಾಡಿದ್ದರು. ಆದರೀಗ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುವುದು ಖಚಿತವಾಗಿದೆ.

ಬುಧವಾರ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ರನ್ನು ಭೇಟಿಯಾಗಿ ಅವರ ಸಮ್ಮುಖದಲ್ಲೇ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ದಿಗಂಬರ್‌ ಕಾಮತ್‌ ಬಿಜೆಪಿ ಸೇರ್ಪಡೆಯಾದ ನಂತರ ಮಾತನಾಡಿದ್ದು “ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲ ಪಡಿಸಲು ಬಿಜೆಪಿಗೆ ಸೇರಿದ್ದೇವೆ,” ಎಂದು ಹೇಳಿದ್ದಾರೆ.

ಕಾಂಗ್ರೆಸ್ ಇತ್ತೀಚಿನ ದಿನಗಳಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ, ಸಮಾಜವಾದಿ ಪಕ್ಷಕ್ಕೆ ತೆರಳಿದ್ದರು. ಕರ್ನಾಟಕದಲ್ಲಿ ಬ್ರಿಜೇಶ್‌ ಕಾಳಪ್ಪ ಕಾಂಗ್ರೆಸ್‌ ತೊರೆದು ಆಮ್‌ ಆದ್ಮಿ ಪಕ್ಷ ಸೇರಿದ್ದಾರೆ. ಒಟ್ಟಿನಲ್ಲಿ ಒಂದೆಡೆ ರಾಹುಲ್‌ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತ್‌ ಜೋಡೊ ಯಾತ್ರೆ ಮಾಡುತ್ತಿದ್ದರೆ, ಕಾಂಗ್ರೆಸ್ ಶಾಸಕರು ಬಿಜೆಪಿ ಜೋಡೊ ಯಾತ್ರೆ ಮಾಡುತ್ತಿದ್ಧಾರೆ. ಭಾರತ್ ಜೋಡೋ ಯಾತ್ರೆ’ಯಲ್ಲಿ (Bharat Jodo Yatra) ತೊಡಗಿರುವ ಕಾಂಗ್ರೆಸ್‌ಗೆ ಗೋವಾದಲ್ಲಿ ಭಾರೀ ಹಿನ್ನಡೆಯಾಗಲಿದೆ.

Leave A Reply

Your email address will not be published.