ಉಪ್ಪಿನಂಗಡಿ : ಅದೃಷ್ಟಶಾಲಿ ಗ್ರಾಹಕರಾಗಿ ಆಯ್ಕೆಯಾಗಿದ್ದೀರೆಂದು ಮೊಬೈಲ್ ಪಾರ್ಸೆಲ್ | ಅಂಚೆ ಮೂಲಕ ಬಂದ ಪ್ಯಾಕ್ ಓಪನ್ ಮಾಡಿದಾಗ ಇದ್ದಿದ್ದು?

ಇಂದಿನ ಕಾಲ ಹೇಗೆ ಬದಲಾಗಿದೆ ಅಂದರೆ ಒಂದು ವಸ್ತು ಖರೀದಿಸಬೇಕಾದರೂ ಒಮ್ಮೆ ಯೋಚಿಸುವ ಮಟ್ಟಿಗೆ. ಯಾಕೆಂದರೆ ಅಷ್ಟರ ಮಟ್ಟಿಗೆ ಬೆಳೆದು ನಿಂತಿದೆ ವಂಚಕರ ಮೋಸದ ಜಾಲ. ಪೇಟೆ ಪಟ್ಟಣ ಮಾತ್ರವಲ್ಲದೆ ಹಳ್ಳಿಗಳಿಗೂ ಹಬ್ಬುತ್ತಿದೆ ವಂಚಕರ ತಂಡ.

ಹೌದು. ಇಂತಹ ಒಂದು ಮೋಸದ ಜಾಲಕ್ಕೆ ದಕ್ಷಿಣ ಕನ್ನಡದ ಉಪ್ಪಿನಂಗಡಿ ಸಾಕ್ಷಿಯಾಗಿದೆ. ಅದೃಷ್ಟಶಾಲಿ ಗ್ರಾಹಕರಾಗಿ ಆಯ್ಕೆಯಾದ ಸಂದೇಶವನ್ನು ನಂಬಿ ವಂಚನೆಗೆ ಒಳಗಾದ ಘಟನೆ ನಡೆದಿದೆ.

ಅದೃಷ್ಟಶಾಲಿ ಗ್ರಾಹಕರಾಗಿ ಆಯ್ಕೆಯಾದ ಹಿನ್ನೆಲೆ 8,800 ರೂ. ಮುಖಬೆಲೆಯ ಮೊಬೈಲ್ ಫೋನ್ ಅನ್ನು 1,785 ರೂ.ಗೆ ಕಳುಹಿಸಲಾಗಿದೆ ಎನ್ನುವ ಸಂದೇಶವನ್ನು ನಂಬಿ ಅಂಚೆ ಮೂಲಕ ಬಂದ ಪಾರ್ಸೆಲ್ ಖರೀದಿಸಿದ ವ್ಯಕ್ತಿಗೆ ಮೊಬೈಲ್ ಫೋನ್ ಬದಲು ಕೆಟ್ಟು ಹೋದ ತಿಂಡಿಯ ಪೊಟ್ಟಣ ಕಳುಹಿಸಿ ವಂಚಿಸಿದ್ದಾರೆ.

ಉಪ್ಪಿನಂಗಡಿಯ ದೇವಳವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಭವಾನಿ ಶಂಕರ್ ಎಂಬವರು ಇತ್ತೀಚೆಗಷ್ಟೇ ತನ್ನ ಮನೆ ಮಂದಿಗೆಂದು ಮೂರು ವಿವೋ ಕಂಪೆನಿಯ ಮೊಬೈಲ್ ಪೋನ್ ಅನ್ನು ಖರೀದಿಸಿದ್ದರು. ಇದರ ಬಳಿಕ ಸಂಸ್ಥೆಯ ಅಧಿಕಾರಿಯೆಂದು ಹೇಳಿ, ಅವರ ಮೊಬೈಲ್ ಪೋನ್‌ಗೆ ಕರೆಯೊಂದನ್ನು ಮಾಡಿ ಮೂರು ಮೊಬೈಲ್ ಖರೀದಿಸಿದ್ದಕ್ಕೆ ಸಂಸ್ಥೆಯ ಲಕ್ಕಿ ಗ್ರಾಹಕರಾಗಿ ನೀವು ಆಯ್ಕೆಯಾಗಿದ್ದೀರಿ. ಈ ಹಿನ್ನೆಲೆಯಲ್ಲಿ 8,800 ರೂ ಬೆಲೆಯ ಮೊಬೈಲ್ ಪೋನ್ ನ್ನು ಕೇವಲ 1,785 ರೂಪಾಯಿಗೆ ಕಳುಹಿಸಲಾಗುವುದು. ಹಣ ತೆತ್ತು ಅಂಚೆ ಕಚೇರಿಯಿಂದ ಪಡೆದುಕೊಳ್ಳಿ’ ಎಂದು ತಿಳಿಸಿದ್ದರು.

ತಾನು ಪೋನ್ ಖರೀದಿಸಿರುವುದು ನಿಜವಾಗಿರುವಾಗ ನನಗೆ ಅದೃಷ್ಟ ಒಲಿದಿರುವುದೂ ನಿಜವಾಗಿರಬಹುದೆಂದು ನಂಬಿದ ಭವಾನಿ ಶಂಕರ್ ರವರು ಸೋಮವಾರದಂದು ಉಪ್ಪಿನಂಗಡಿ ಅಂಚೆ ಕಚೇರಿಗೆ ಬಂದ ಪಾರ್ಸೆಲ್ ಅನ್ನು ಹಣ ತೆತ್ತು ಪಡೆದುಕೊಂಡಿದ್ದಾರೆ. ಅಲ್ಲದೆ, ಅನುಮಾನದಿಂದ ಅಲ್ಲಿಯೇ ಪಾರ್ಸೆಲ್ ಅನ್ನು ತೆರೆದು ನೋಡಿದ್ದಾರೆ. ಈ ವೇಳೆ ಮೋಸದ ಜಾಲಕ್ಕೆ ಬಲಿಯಾಗಿದ್ದು ತಿಳಿದು ಬಂದಿದೆ. ಯಾಕೆಂದರೆ ಮೊಬೈಲ್ ಬದಲಿಗೆ ಕೆಟ್ಟು ಹೋದ ತಿಂಡಿಯ ಪೊಟ್ಟಣವನ್ನು ಪ್ಯಾಕ್ ಮಾಡಿ ಕಳುಹಿಸಿರುವುದು ಕಂಡು ಬಂದಿದೆ.

ಅದರಲ್ಲೂ ಇಲ್ಲಿ ದೊಡ್ಡ ಪ್ರಶ್ನೆಯಾಗಿ ಕಾಡಿದ್ದು, ಪೋನ್ ಖರೀದಿಸಿರುವುದು ಈ ವಂಚಕರ ತಂಡಕ್ಕೆ ತಿಳಿದಿರುವುದು ಹೇಗೆ ಎಂಬುದು. ಬೆಂಗಳೂರಿನ ಆಕಾಂಕ್ಷಾ ಮಾರ್ಕೆಟಿಂಗ್ ಎಂಬ ಸಂಸ್ಥೆಯ ಹೆಸರಿನಲ್ಲಿ ವಂಚಿಸಿರುವ ಈ ವಂಚಕರು ತಮ್ಮ ಕೃತ್ಯಕ್ಕಾಗಿಯೇ ನಕಲಿ ಸಂಸ್ಥೆಗಳನ್ನು ಸೃಷ್ಟಿಸಿದ್ದಾರೆಯೇ ಅಥವಾ ವ್ಯವಸ್ಥಿತ ಸಂಸ್ಥೆಯೊಂದರ ಹೆಸರು ಕೆಡಿಸಲು ತಮ್ಮ ಕೃತ್ಯಕ್ಕೆ ಅಂತಹ ಸಂಸ್ಥೆಯ ಹೆಸರು ಬಳಸಿದ್ದಾರೆಯೇ ಎಂದು ತನಿಖೆ ಬಳಿಕ ಪತ್ತೆಯಾಗಬೇಕಿದೆ.

Leave A Reply

Your email address will not be published.