ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋದ ಮಗನನ್ನು ಉಳಿಸಲು ನೀರಿಗೆ ಧುಮುಕಿದ ತಾಯಿ | ಮಗ ರಕ್ಷಣೆ, ಮಹಿಳೆ ನೀರುಪಾಲು

ಓಣಂ ಹಬ್ಬದ ಪ್ರಯುಕ್ತ ಮಹಿಳೆಯೋರ್ವರು, ತನ್ನ ಕುಟುಂಬಸ್ಥರ ಜೊತೆಗೆ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವಘಡವೊಂದು ಸಂಭವಿಸಿದೆ. ಹೌದು, ಸೌಪರ್ಣಿಕಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ, ಮಗ ನೀರಿನಲ್ಲಿ ಕೊಚ್ಚಿಕೊಂಡು ಹೋಗುವುದನ್ನು ಕಂಡು, ಆತನನ್ನು ಉಳಿಸಲು ನೀರಿಗೆ ಧುಮುಕಿದ್ದಾಳೆ. ಈ ಸಂದರ್ಭದಲ್ಲಿ ಮಹಿಳೆ ನೀರುಪಾಲಾಗಿದ್ದಾರೆ.

ಕೇರಳದ ತಿರುವನಂತಪುರಂನ ಕಾಚಗಡ ತಾಲೂಕಿನ ಚಕ್ಕಪಾಲ್ ಚಿಳಪಿಲ್ಲೆ ಗ್ರಾಮದ ನಿವಾಸಿ ಚಾಂದಿ ಶೇಖ‌ರ್ (42 ವರ್ಷ) ಎಂಬ ಮಹಿಳೆಯೇ ನೀರು ಪಾಲಾದ ಮಹಿಳೆ.

ಚಾಂದಿಶೇಖ‌ರ್ ಅವರ ಪತಿ ಮುರುಗನ್ ಓಣಂ ಹಿನ್ನೆಲೆಯಲ್ಲಿ ತನ್ನ ಕುಟುಂಬಸ್ಥರ ಜೊತೆಯಲ್ಲಿ ಮೂಕಾಂಬಿಕೆಯ ದರ್ಶನಕ್ಕಾಗಿ ಕೊಲ್ಲೂರಿಗೆ ಬಂದಿದ್ದಾರೆ. ಹಾಗಾಗಿ ಕೊಲ್ಲೂರಿನ ಯಮುನಾ ವಿಹಾರ್ ವಸತಿ ಗೃಹದಲ್ಲಿ ಉಳಿದುಕೊಂಡಿದ್ದಾರೆ.

ಶನಿವಾರ ಸಂಜೆ 5.15ರ ಸುಮಾರಿಗೆ ಕೊಲ್ಲೂರಿನ ಸೌಪರ್ಣಿಕಾ ಸ್ನಾನ ಘಟ್ಟದಲ್ಲಿ ಎಲ್ಲರೂ ಸ್ನಾನ ಮಾಡುತ್ತಿದ್ದ ವೇಳೆಯಲ್ಲಿ ಆದಿತ್ಯನ್ ನದಿಯಲ್ಲಿ ನೀರಿಗೆ ಇಳಿದಾಗ ನೀರಿನ ಸೆಳೆತಕ್ಕೆ ಆತ ಕೊಚ್ಚಿಕೊಂಡು ಹೋಗಿದ್ದಾನೆ. ಈ ವೇಳೆಯಲ್ಲಿ ಆದಿತ್ಯನ್ ರಕ್ಷಣೆಗೆ ಚಾಂದಿ ಶೇಖರ್ ಮುಂದಾಗಿದ್ದಾರೆ. ನಂತರ ಮುರುಗನ್ ಇಬ್ಬರ ರಕ್ಷಣೆಗೆ ಮುಂದಾಗಿದ್ದಾರೆ.

ಆದರೆ ಸ್ಥಳೀಯರ ಸಹಕಾರದಿಂದ ಮುರುಗನ್ ಹಾಗೂ ಮಗ ಆದಿತ್ಯನ್ ನನ್ನು ರಕ್ಷಣೆ ಮಾಡಲಾಗಿದೆ. ಆದರೆ ನೀರಿನ ಸೆಳೆತಕ್ಕೆ ಸಿಲುಕಿದ ಮಹಿಳೆ ನೀರು ಪಾಲಾಗಿದ್ದಾರೆ. ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋಗಿರುವ ಮಹಿಳೆಗಾಗಿ ಅಗ್ನಿಶಾಮಕ ದಳ ಹಾಗೂ ಕೊಲ್ಲೂರು ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ. ಈ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.