ತಾತನನ್ನೇ ಕೊಲೆ ಮಾಡಿದ ಮೊಮ್ಮಗ | 8 ತಿಂಗಳ ಬಳಿಕ ಬಯಲಾಯ್ತು ಹೂತು ಹಾಕಿದ ರಹಸ್ಯ!

ಇಂದಿನ ಯುವ ಸಮೂಹ ಸಂಬಂಧಕ್ಕಿಂತ ಆಸ್ತಿ, ಹಣಕ್ಕೆ ಹೆಚ್ಚು ಒತ್ತು ಕೊಡುವುದು ಎಂದರೆ ತಪ್ಪಾಗಲ್ಲ. ಯಾಕೆಂದರೆ ಆಸ್ತಿಗಾಗಿ ಪ್ರಾಣವನ್ನೇ ತೆಗೆದ ಘಟನೆಗಳು ವರದಿಯಾಗುತ್ತಲೇ ಇದೆ. ಇದೀಗ ಅದೇ ಸಾಲಿಗೆ ಸೇರಿದಂತೆ ಒಂದು ಘಟನೆ ನಡೆದಿದ್ದು, ಆಸ್ತಿ ವಿಚಾರವಾಗಿ ತಾತನನ್ನು ಮೊಮ್ಮಗನೇ ಕೊಲೆ ಮಾಡಿ ಹೂತು ಹಾಕಿರುವ ಘಟನೆ ನಡೆದಿದೆ.

ಆದರೆ, ಕೊಲೆ ಮಾಡಿದ ರಹಸ್ಯ 8 ತಿಂಗಳ ಬಳಿಕ ಬಯಲಾಗಿದೆ. ಇಂತಹ ವಿಚಿತ್ರ ಪ್ರಕರಣ ಗುಬ್ಬಿ ತಾಲೂಕಿನ ನಡೆದಿದೆ. ಕಲ್ಲರ್ದಗೆರೆ ಭೋವಿ ಕಾಲನಿಯ ಗೋವಿಂದಪ್ಪ (75) ಕೊಲೆಯಾಗಿದ್ದು, ಪ್ರಕರಣದ ಬೆನ್ನು ಹತ್ತಿದ ಚೇಳೂರು ಪೊಲೀಸರು ಗೋವಿಂದಪ್ಪನ ಮೊಮ್ಮಗ ಮೋಹನ್​ ಹಾಗೂ ಆತನ ಸ್ನೇಹಿತರಾದ ಪ್ರಜ್ವಲ್​, ಚೇತನ್​ ಎಂಬುವವರನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನೆಂದು ಮುಂದೆ ಓದಿ..

ಗೋವಿಂದಪ್ಪಗೆ ನಾಲ್ಕು ಎಕರೆ ಜಮೀನು ಇತ್ತು. ಇವರಿಗೆ ಒಬ್ಬ ಮಗ, ಒಬ್ಬಳು ಮಗಳಿದ್ದಳು. ಇಬ್ಬರಿಗೂ ಸಮಾನವಾಗಿ ಆಸ್ತಿ ಹಂಚಿಕೆ ಮಾಡ್ಬೇಕು ಅಂತ ಗೋವಿಂದಪ್ಪ ಪಟ್ಟು ಹಿಡಿದಿದ್ದ. ತನ್ನ ತಂದೆ ಗೋವಿಂದಪ್ಪನ ಮಾತಿಗೆ ತಲೆಕೊಡಿಸಿಕೊಳ್ಳದೆ ಸುಮ್ಮನಾಗಿದ್ದ ಪುತ್ರ ವೆಂಕಟರಮಣಪ್ಪ. ಆದರೆ, ಅತ್ತೆಗೆ ಆಸ್ತಿ ಹಂಚಲು ತಾತ ನಿರ್ಧರಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಮೊಮ್ಮಗ ಮೋಹನ್​, ಆಗಾಗ ಜಗಳವಾಡುತ್ತಿದ್ದ. ಆಸ್ತಿಯನ್ನ ಅತ್ತೆಗೆ ನಮ್ಮ ತಾತ ಬರಿತಾನೆ ಅಂತ ಕೋಪಗೊಂಡಿದ್ದ. ಹಾಗಾಗಿ ತನ್ನ ತಂದೆಗೇ ತಿಳಿಯದಂತೆ ತಾತನ‌ ಕೊಲೆಗೆ ಮೋಹನ್​ ಸ್ಕೆಚ್ ಹಾಕಿದ್ದ.

ಸ್ನೇಹಿತರೊಂದಿಗೆ 2022ರ ಜ.22ರಂದು ಗೋವಿಂದಪ್ಪನ ತಲೆಗೆ ಕಬ್ಬಿಣದ ರಾಡ್​ನಿಂದ ಹೊಡೆದು ಕೊಲೆ ಮಾಡಿ ಕಲ್ಲರ್ದಗೆರೆಯ ತೋಟದಲ್ಲಿ ಗುಂಡಿ ತೆಗೆದು ಶವ ಹೂತು ಹಾಕಿದ್ದ. ಬಳಿಕ ಏನೂ ಗೊತ್ತಿಲ್ಲದಂತೆ ಓಡಾಡಿಕೊಂಡಿದ್ದ. ಆದರೆ, ಗೋವಿಂದಪ್ಪ ವಾರಗಟ್ಟಲೆ ಬೇರೆ ಊರುಗಳಿಗೆ ಹೋಗುವ ಅಭ್ಯಾಸವಿದ್ದ ಕಾರಣ ತುಂಬಾ ದಿನಗಳಾದರೂ ಮನೆಗೆ ಬರದಿದ್ದಕ್ಕೆ ಕುಟುಂಬಸ್ಥರು ತಲೆಕೆಡಿಸಿಕೊಂಡಿರಲಿಲ್ಲ.

ಏಳೆಂಟು ತಿಂಗಳಾದ ಮೇಲೆ ಕುಟುಂಬದವರಿಗೆ ಅನುಮಾನ ಬಂದಿತ್ತು. ಅತ್ತ ಏನೂ ಅರಿಯದ ಗೋವಿಂದಪ್ಪನ ಮಗ, ತನ್ನ ತಂದೆ ಎಲ್ಲೋ ಕಾಣೆಯಾಗಿದ್ದಾರೆ ಎಂದು ಗುಬ್ಬಿ ತಾಲೂಕಿನ ಚೇಳೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.

ಇತ್ತ ಮೊಮ್ಮಗ ತಾತನ ಕೊಲೆಯಾದ ಬಳಿಕ ಪ್ರತಿದಿನ ತನ್ನಿಬ್ಬರು ಸ್ನೇಹಿತರಿಗೆ ಮೋಹನ್​ ಎಣ್ಣೆ ಪಾರ್ಟಿ ಕೊಡಿಸುತ್ತಿದ್ದ. ಯಾಕೆಂದರೆ ಕೊಲೆ ವಿಷಯ ಹೊರ ಬರಬಾರದು ಅನ್ನೋ ಕಾರಣಕ್ಕೆ. ಆದರೆ, ಇತ್ತೀಚಿಗೆ ಸ್ನೇಹಿತರನ್ನ ದೂರವಿಟ್ಟು ಎಣ್ಣೆ ಪಾರ್ಟಿ ಕೊಡಿಸೋದನ್ನ ನಿಲ್ಲಿಸಿದ್ದ. ಇದೇ ವಿಚಾರಕ್ಕೆ ಸ್ನೇಹಿತರ ನಡುವೆ ಮನಸ್ತಾಪ ಉಂಟಾಗಿತ್ತು. ಕಳೆದ ವಾರ ಎಣ್ಣೆ ಮತ್ತಲ್ಲಿ ಚೇತನ್ ಹಾಗೂ ಪ್ರಜ್ವಲ್ ಇಬ್ಬರೂ ಗೋವಿಂದಪ್ಪನ ಕೊಲೆ ರಹಸ್ಯ ಬಾಯ್ಬಿಟ್ಟಿದ್ದರು.

ಕೊಲೆ ಸುದ್ದಿ ಗ್ರಾಮದಲ್ಲೆಲ್ಲ ಹರಡುತ್ತಿದ್ದಂತೆ ಆರೋಪಿಗಳನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಆರೋಪಿಗಳ ಮಾಹಿತಿ ಮೇರೆಗೆ ಬುಧವಾರ(ಸೆ.7) ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಮೊಮ್ಮಗ ಮತ್ತು ಆತನ ಸ್ನೇಹಿತರು ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟಾರೆ ಆಸ್ತಿ ಏನನ್ನೂ ಬೇಕಾದರೂ ಒಬ್ಬ ವ್ಯಕ್ತಿಯ ಕೈಯಿಂದ ಮಾಡಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

Leave A Reply

Your email address will not be published.