ಗಿಫ್ಟ್ ಕೂಪನ್ ನಲ್ಲಿದ್ದ ನಂಬರ್ ಗೆ ಖುಷಿಯಿಂದ ಕರೆ ಮಾಡಿದ ದಂಪತಿಗಳಿಗೆ ಕಾದಿತ್ತು ಶಾಕ್!

ಇಂದಿನ ಕಾಲದಲ್ಲಿ ವಂಚಕರು ಯಾವ ಜಾಲವನ್ನು ಬಳಸಿಕೊಂಡು ವಂಚನೆಗೆ ಇಳಿಯುತ್ತಾರೆ ಎಂದು ಹೇಳಲು ಅಸಾಧ್ಯವಾಗಿದೆ. ಹೀಗಾಗಿ ಯಾವುದೇ ಒಂದು ವಹಿವಾಟು ಮಾಡುವ ಮುಂಚೆ ಎಚ್ಚರಿಕೆಯಿಂದ ಇರುವುದು ಮುಖ್ಯ. ಯಾಕಂದ್ರೆ ಇದೀಗ ಗಿಫ್ಟ್ ಕೂಪನ್ ಎಂಬ ಕಾನ್ಸೆಪ್ಟ್ ನಲ್ಲಿ ವಂಚನೆಗೆ ಇಳಿದಿದ್ದಾರೆ.

ಹೌದು. ಮನೆ ಬಾಗಿಲಿಗೆ ಬಂದ ಗಿಫ್ಟ್​ ಕವರ್​ ನೋಡಿ ಮೋಸ ಹೋಗಿ ಹಣ ಕಳೆದುಕೊಂಡಿರುವ ಪ್ರಕರಣ ರಾಮನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಆನೇಕಲ್​ ಮುಖ್ಯರಸ್ತೆ ನಿವಾಸಿ, ವೃತ್ತಿಯಲ್ಲಿ ಚಾಲಕರಾಗಿರುವ ಶಿವಕುಮಾರ್​ ಆನ್​ಲೈನ್​ ವಂಚಕರ ಮೋಸಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಇವರ ಮನೆಗೆ ಸ್ಪೀಡ್​ಪೋಸ್ಟ್​ ಬಂದಿದ್ದು, ಇದರಲ್ಲಿ ಆನ್​ಲೈನ್​ ಶಾಪಿಂಗ್​ ಎಂದು ನಮೂದಿಸಿದ ಕೂಪನ್​ ಇರಿಸಲಾಗಿತ್ತು. ಕುತೂಹಲಗೊಂಡ ಶಿವಕುಮಾರ್​ ಪತ್ನಿ, ಕೂಪನ್​ನಲ್ಲಿದ್ದ ನಂಬರ್​ಗೆ ಕರೆ ಮಾಡಿದಾಗ ನಿಮಗೆ ಬಹುಮಾನವಾಗಿ ಕಾರು ಬಂದಿದೆ. ಕಾರು ಬೇಕಾ? ಅಥವಾ 14.80 ಲಕ್ಷ ರೂ. ಬೇಕಾ? ಎಂದು ಪ್ರಶ್ನಿಸಿದ್ದಾರೆ. ಖುಷಿಪಟ್ಟ ಶಿವಕುಮಾರ್​ ಕಾರು ಕೊಡಿ ಎಂದಿದ್ದಾರೆ.

ಕರೆ ಕಡಿತಗೊಳಿಸಿದ ವಂಚಕರು, ಮರುದಿನ ಕರೆ ಮಾಡಿ ಡಿಎಲ್​, ಆಧಾರ್​ ಕಾರ್ಡ್​ಗಳನ್ನು ಮತ್ತೊಂದು ನಂಬರ್​ಗೆ ವಾಟ್ಸ್​ಆಪ್​ ಮೂಲಕ ತರಿಸಿಕೊಂಡಿದ್ದಾರೆ. ನಂತರ ಕಾರ್​ನ ಆರ್​ಟಿಒ ಶುಲ್ಕವೆಂದು 25600 ರೂ., ಟ್ರಾನ್ಸ್​ಪೋರ್ಟ್​ ಖರ್ಚು ಎಂದು 20 ಸಾವಿರ ರೂ., ಇತರ ಖರ್ಚು ಎಂದು 10 ಸಾವಿರ ರೂ., ನಂತರ ಡೀಸೆಲ್​ಗೆ 10 ಸಾವಿರ ರೂ.ಗಳನ್ನು ಕೇಳಿ ಎಲ್ಲವನ್ನೂ ಫೋನ್​ಪೇ ಮೂಲಕವಾಗಿ ಖಾತೆಗೆ ಹಾಕಿಸಿಕೊಂಡಿದ್ದಾರೆ. ಕೆಲ ದಿನ ಕಳೆದರೂ ಮನೆ ಬಾಗಿಲಿಗೆ ಕಾರು ಬರದಿದ್ದಾಗ ಅನುಮಾನಗೊಂಡು ಸೈಬರ್​ ಪೊಲೀಸರಿಗೆ ದೂರು ನೀಡಿದ್ದಾರೆ. ಇಂತಹ ವಂಚನೆಗೆ ನೀವು ಒಳಗಾಗೋ ಮುನ್ನ ಇರಲಿ ಎಚ್ಚರ!!..

Leave A Reply

Your email address will not be published.