SC-ST ಕುಟುಂಬದವರಿಗೆ ಒದಗಿಸುವ ಉಚಿತ ವಿದ್ಯುತ್ ಯೋಜನೆ ರದ್ದು! | ಈ ಕುರಿತು ಇಲಾಖೆ ನೀಡಿದ ಸ್ಪಷ್ಟನೆ ಏನು?

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬದವರಿಗೆ ‘ಅಮೃತ ಜ್ಯೋತಿ’ ಕಾರ್ಯಕ್ರಮದಡಿ 75 ಯೂನಿಟ್​ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆಯನ್ನು ಹಿಂಪಡೆಯಲಾಗಿದೆ ಎಂಬ ಮಾಹಿತಿಯೂ ಹರಿದಾಡುತ್ತಿದ್ದು, ಇದೀಗ ಇಲಾಖೆ ಸ್ಪಷ್ಟನೆ ನೀಡಿದೆ.

‘ಅಮೃತ ಜ್ಯೋತಿ’ ವಿದ್ಯುತ್ ಯೋಜನೆಯನ್ನು ರಾಜ್ಯ ಸರ್ಕಾರ ಕಳೆದ ಮೇ 18ರಂದು ರಾಜ್ಯಾದ್ಯಂತ ಜಾರಿಗೆ ತಂದಿತ್ತು. ಈ ಸಂಬಂಧ ಆಗಸ್ಟ್ 24ರಂದು ಮಾರ್ಗಸೂಚಿ ಸುತ್ತೋಲೆ ಹೊರಡಿಸಲಾಗಿತ್ತು. ಇದಕ್ಕೆ ಕೆಲವೊಂದು ತಿದ್ದುಪಡಿ ಅಗತ್ಯ ಇದ್ದ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 3ರಂದು ಅದನ್ನು ಹಿಂದಕ್ಕೆ ಪಡೆಯಲಾಗಿದೆಯಷ್ಟೇ ವಿನಾ ಯೋಜನೆಯನ್ನು ರದ್ದುಗೊಳಿಸಲಿಲ್ಲ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ.

ಬಡತನ ರೇಖೆಗಿಂತ ಕೆಳಗಿರುವ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರರಿಗೆ (ಭಾಗ್ಯಜ್ಯೋತಿ, ಕುಟೀರಜ್ಯೋತಿ ಬಳಕೆದಾರರನ್ನು ಒಳಗೊಂಡಂತೆ) ಮಾಸಿಕ 75 ಯೂನಿಟ್‍ಗಳವರೆಗೆ ಉಚಿತ ವಿದ್ಯುತ್ ನೀಡುವ ‘ಅಮೃತ ಜ್ಯೋತಿ’ ಯೋಜನೆ ಸದ್ಯ ಚಾಲ್ತಿಯಲ್ಲಿ ಇದೆ. ಈ ಯೋಜನೆಯನ್ನು ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ ಡಿಬಿಟಿ ವ್ಯವಸ್ಥೆಯಡಿ ಜಾರಿಗೊಳಿಸಲಾಗಿದೆ.

ಫಲಾನುಭವಿ ಗ್ರಾಹಕರಿಗೆ ತಾವು ಪಾವತಿಸಿದ ಒಟ್ಟು ವಿದ್ಯುತ್ ಬಿಲ್ಲಿನ ಮೊತ್ತದಲ್ಲಿ 75 ಯೂನಿಟ್‍ಗಳವರೆಗಿನ ವಿದ್ಯುತ್ ಶುಲ್ಕದ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ. ಈ ಯೋಜನೆಯ ಪ್ರಯೋಜನವು ಸುಮಾರು 39 ಲಕ್ಷ ಬಿಪಿಎಲ್ ಕುಟುಂಬಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗ್ರಾಹಕರಿಗೆ ಸಿಗಲಿದ್ದು, ಈಗಾಗಲೇ 4 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ. ಮೇ ಮತ್ತು ಜೂನ್ ತಿಂಗಳ ವಿದ್ಯುತ್ ಬಿಲ್ ಮೊತ್ತವನ್ನು ಸುಮಾರು 15 ಸಾವಿರ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಮರುಪಾವತಿಸಲಾಗಿದೆ ಎಂದು ಇಂಧನ ಇಲಾಖೆಯು ತಿಳಿಸಿದೆ.

Leave A Reply

Your email address will not be published.