ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ | ಬೆಳ್ಳಂಬೆಳಗ್ಗೆ ಸುಳ್ಯ ಮತ್ತು ಪುತ್ತೂರಿನ 32 ಸ್ಥಳಗಳಲ್ಲಿ ಮಿಂಚಿನ ದಾಳಿ ನಡೆಸಿದ NIA ತಂಡ

ಜುಲೈ 26ರ ರಾತ್ರಿ ಪುತ್ತೂರಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು(34ವ) ಹತ್ಯೆ ಪ್ರಕರಣದ ತನಿಖೆ ಇನ್ನಷ್ಟು ತೀವ್ರಗೊಂಡಿದೆ. ಈ ಹತ್ಯಾ ಪ್ರಕರಣದ ಬೆನ್ನತ್ತಿದ್ದ, ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ( NIA) ಮಹತ್ವದ ಮಾಹಿತಿಗಳನ್ನು ಹಾಕಿದ್ದಾರೆ ಎನ್ನಲಾಗಿದೆ.

ಹೌದು, ಸೆ.6ರಂದು( ಇಂದು) ಬೆಳ್ಳಂಬೆಳಗ್ಗೆ ಪುತ್ತೂರು ಮತ್ತು ಸುಳ್ಯದ 32 ಕಡೆ ಮನೆ, ಕಟ್ಟಡಗಳಿಗೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳು ಮತ್ತು ಆರೋಪಿಗಳಿಗೆ ಸಹಕರಿಸಿದವರ ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ. ಅಷ್ಟು ಮಾತ್ರವಲ್ಲದೇ, ಎನ್.ಐ.ಎ.ಅಧಿಕಾರಿಗಳಿಗೆ ಕರ್ನಾಟಕ ಪೊಲೀಸರು ಸಹಕಾರ ನೀಡಿದ್ದಾರೆ.

ಸೆ.6ರ ಮುಂಜಾನೆ 6 ಗಂಟೆಗೆ ಸುಳ್ಯ ನಗರದ ನಾವೂರು ಬಳಿ ದಿಢೀರ್ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು ಘಟನೆಗೆ ಸಂಬಂಧಿಸಿದವರ ಮನೆಗಳಿಗೆ ತೆರಳಿ ವಿಚಾರಣೆ ನಡೆಸಿದ್ದಾರೆ ತಿಳಿದು ಬಂದಿದೆ.

ಪ್ರವೀಣ್ ಹತ್ಯೆ ಪ್ರಕರಣ ರಾಷ್ಟ್ರಾದ್ಯಂತ ಭಾರೀ ಸುದ್ದಿಯಾಗಿತ್ತು. ಹಾಗೂ ಕರಾವಳಿಯಾದ್ಯಂತ ಬಿಜೆಪಿ ಕಾರ್ಯಕರ್ತರು ಸಿಡಿದೇಳಿದ್ದು, ಹಲವಾರು ಕಾರ್ಯಕರ್ತರು ರಾಜೀನಾಮೆ ನೀಡಿದ ಪ್ರಕರಣ ನಡೆದಿತ್ತು.

ಪ್ರಮುಖವಾಗಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಗಂಭೀರವಾಗಿ ಸರಕಾರ ಪರಿಗಣಿಸಿ ಹೆಚ್ಚಿನ ತನಿಖೆಯ ದೃಷ್ಟಿಯಿಂದ ಕೇಂದ್ರದ ಎನ್.ಐ.ಎ.ಗೆ ವಹಿಸಿಕೊಡಲಾಗಿತ್ತು. ಕರಾವಳಿಯಲ್ಲಿ ನಡೆಯುವ ಕೋಮು ಕೊಲೆಗೆ ಕಾರಣ ಮತ್ತು ಕೊಲೆಗಳಿಗೆ ಸಹಕಾರ ನೀಡುವ ಕೆಲವೊಂದು ಪ್ರಮುಖ ವಿಚಾರಗಳನ್ನು ಬೇರು ಸಹಿತ ಮಾಹಿತಿ ಪಡೆದು ಸರಕಾರಕ್ಕೆ ಒಪ್ಪಿಸುವ ಕ್ರಮಕ್ಕೆ ಎನ್.ಐ.ಎ ಮುಂದಾಗಿದ್ದು, ಈಗಾಗಲೇ ತನಿಖೆ ಆರಂಭಿಸಿದೆ.

ಮಾಹಿತಿಗಳ ಪ್ರಕಾರ, ಬೆಳ್ಳಾರೆಯಲ್ಲಿರುವ ಎಸ್‌ ಡಿಪಿಐ (SDPI) ಹಾಗೂ ಪಿಎಫೈ (PFI) ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ರಾಜ್ಯ ಮಟ್ಟದ ಮುಖಂಡರುಗಳ ಮನೆ ಸೇರಿದಂತೆ ಸುಮಾರು 25 ಕ್ಕೂ ಹೆಚ್ಚು ಮನೆಗಳ ಮೇಲೆ ಎನ್‌ಐಎ (NIA) ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಅಷ್ಟು ಮಾತ್ರವಲ್ಲದೇ, ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ನಿಕಟ ಸಂಪರ್ಕ ಹೊಂದಿದವರ, ಎಸ್ ಡಿಪಿಐ ಹಾಗೂ ಪಿಎಫೈ ಸಂಘಟನೆಯಲ್ಲಿ ಗುರುತಿಸಿಕೊಂಡವರ ಮನೆಯೂ ಸೇರಿದೆ ಎಂದು ಹೇಳಲಾಗಿದೆ. ಆದರೆ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಈ ಮುಖಂಡರುಗಳ ಪೈಕಿ ಕೆಲವರು ನಿವಾಸದಿಂದ ನಿಗೂಢವಾಗಿ ಕಣ್ಮರೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಇಷ್ಟು ಮಾತ್ರವಲ್ಲದೇ, ಬೆಳ್ಳಾರೆ ಪೇಟೆಯ ಹೃದಯ ಭಾಗದಲ್ಲಿ ವಾಣಿಜ್ಯ ಬೆಳೆ ಖರೀದಿ ಅಂಗಡಿಗೂ ಎನ್ ಐಎ ಅಧಿಕಾರಿಗಳು ದಾಳಿ ಮಾಡಿರುವ ಮಾಹಿತಿ ಇದೆ. ಆದರೆ ಬೆಳ್ಳಾರೆ ಅಸುಪಾಸಿನಲ್ಲಿ ದಾಳಿಯಾಗುತ್ತಿರುವ ಮಾಹಿತಿಯನ್ನು ಮುಂಚಿತವಾಗಿ ತಿಳಿದ, ಅಲ್ಲಿ ಕೆಲಸ ಮಾಡುತ್ತಿದ್ದ ಶಂಕಿತನೋರ್ವ ಎನ್ ಐ ಎ ತಂಡ ಬರುವ ಮೊದಲೇ ಜಾಗ ಖಾಲಿ ಮಾಡಿದ್ದಾನೆಂದು, ಸ್ಥಳೀಯರು ತಿಳಿಸಿದ್ದಾರೆ.

Leave A Reply

Your email address will not be published.