ನಿನ್ನೆಯ ಮಹಾಮಳೆಗೆ ಯುವತಿ ಬಲಿ | ಮೊಣಕಾಲು ನೀರಿಗೆ ಸ್ಕೂಟರ್ ಬಿತ್ತೆಂದು ಕೈಚಾಚಿದ್ದು ನೇರ ಸಾವಿಗೆ

ಸಿಲಿಕಾನ್ ಸಿಟಿ ಮಂದಿಗೆ ಮಳೆರಾಯನ ಕಾಟ ತಡೆಯಲಾರದ ಮಟ್ಟಿಗೆ ಎದುರಾಗುತ್ತಿದೆ. ರಸ್ತೆ, ಮನೆ, ಮಾಲ್ ಎನ್ನದೆ ಎಲ್ಲೆಡೆ ನೀರಿನಿಂದ ಜಲಾವೃತಗೊಂಡಿದೆ. ಇಂತಹ ಅಪಾಯಕಾರಿ ಸನ್ನಿವೇಶದ ನಡುವೆ ಯುವತಿಯೊಬ್ಬಳು ವಿದ್ಯುತ್ ಶಾಕ್ ನಿಂದಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

ಅಖಿಲಾ (23) ಮೃತಪಟ್ಟ ಯುವತಿ.

ಬಿಕಾಂ ಪದವೀಧರೆಯಾಗಿದ್ದ ಅಖಿಲಾ, ಖಾಸಗಿ ಖಾಲೆಯೊಂದರ ಆಡಳಿತ ವಿಭಾಗದಲ್ಲಿ ಕಳೆದ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದರು. ತಂದೆ-ತಾಯಿ ಜೊತೆಗೆ ಸಿದ್ದಾಪುರದಲ್ಲಿರುವ ಮನೆಯಲ್ಲಿ ವಾಸವಿದ್ದರು. ನಿನ್ನೆ ರಾತ್ರಿ 8 ಗಂಟೆಗೆ ಶಾಲೆಯಲ್ಲಿ ಕೆಲಸ ಮುಗಿಸಿ ತನ್ನ ಆಯಕ್ಟೀವಾ ಬೈಕ್​ನಲ್ಲಿ ಹೊರಟ ಅಖಿಲಾ, ರಾತ್ರಿ 9.30ಕ್ಕೆ ಸಿದ್ದಾಪುರ ಬಳಿ ಇರುವ ಮಯೂರ ಬೇಕರಿ ಸಮೀಪ ಬಂದಿದ್ದಾರೆ. ರಸ್ತೆಯಲ್ಲಿ ಮಂಡಿಯುದ್ದಕ್ಕೆ ನೀರು ನಿಂತಿದ್ದರೂ, ಅದರ ಮಧ್ಯೆಯೇ ಸ್ಕೂಟರ್ ಚಲಾಯಿಸಿದ್ದಾರೆ.

ನೀರು ಹೆಚ್ಚಾಗಿದ್ದರಿಂದ ಸ್ಕೂಟರ್ ಆಫ್ ಆಗಿ ಕೆಳಗೆ ಬೀಳುವಾಗ, ಸಹಾಯಕ್ಕಾಗಿ ತನ್ನ ಬಲ ಭಾಗದಲ್ಲೇ ಇದ್ದ ವಿದ್ಯುತ್​ ಕಂಬವನ್ನು ಅಖಿಲಾ ಮುಟ್ಟಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಅಖಿಲಾ ಕೊನೆಯುಸಿರೆಳೆದಿದ್ದಾರೆ. ಅದಕ್ಕೂ ಮುನ್ನ ಕೆಳಗೆ ಬಿದ್ದಿದ್ದ ಆಕೆಯನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಅಖಿಲಾ ಪ್ರಾಣ ಬಿಟ್ಟಿದ್ದಾರೆ.

ವೈಟ್​ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ, ಮಾರತ್ತಹಳ್ಳಿಯಿಂದ ವರ್ತೂರು ಕೋಡಿ ಮಾರ್ಗ ಮಧ್ಯೆ ಇರುವ ಸಿದ್ದಾಪುರದಲ್ಲಿ ದುರಂತ ಘಟನೆ ನಡೆದಿದ್ದು, ಬೆಸ್ಕಾಂ ಮತ್ತು ಬಿಬಿಎಂಪಿ ನಿರ್ಲಕ್ಷ್ಯವೇ ಅಖಿಲಾ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ. ವಿದ್ಯುತ್ ಕಂಬಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದೇ ಆಖಿಲಾ ಸಾವಿಗೆ ಕಾರಣ ಎಂದು ಪಾಲಕರು ಮತ್ತು ಸ್ಥಳೀಯರು ಆರೋಪ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ವೈಟ್ ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ವೈದೇಹಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಇಷ್ಟೆಲ್ಲಾ ಆದರೂ ಘಟನಾ ಸ್ಥಳಕ್ಕೆ ಬಾರದ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

Leave A Reply

Your email address will not be published.