ಸಾರ್ವಜನಿಕ ಗಣೇಶೋತ್ಸವ:ವಿಶ್ಲೇಷಣೆ

ಲೇಖನ : ಬಿ.ಕೆ.ಸವಣೂರು

ನಮ್ಮ ಹಿರಿಯರು ಯಾವುದೇ ಕೆಲಸ ಪ್ರಾರಂಭಿಸುವ ಮೊದಲು ಮಹಾಗಣಪತಿಯನ್ನು ನೆನೆದು ಮತ್ತೆ ಕಾರ್ಯ ಪ್ರಾರಂಭಿಸುತ್ತಿದ್ದರು.ಅದಕ್ಕೆ ಯಾವುದೇ ಧರ್ಮ ಅಡ್ಡ ಬರುತ್ತಿರಲಿಲ್ಲ.ಅದುದರಿಂದ “ಗಣಪತಿ” ಎಂಬ ಈ ನಾಲ್ಕು ಅಕ್ಷರಗಳ
ಈ ಹೆಸರನ್ನು ಕೇಳದವರು ಭಾರತದಲ್ಲಿ ಯಾರೂ ಇರಲಾರರು ಎಂದು ನನ್ನ ಅನಿಸಿಕೆ. ಇದು ಇತ್ತೀಚಿಗೆ ಪ್ರಾರಂಭವಾದ ಉತ್ಸವವಂತೂ ಅಲ್ಲವೇ ಅಲ್ಲ.ಇದನ್ನು ಪ್ರಾರಂಭಿಸಿದವರು ಸಾಮಾನ್ಯ ಒಬ್ಬ ವ್ಯಕ್ತಿಯಲ್ಲ.ಇದನ್ನು ಪ್ರಾರಂಭಿಸಿದ ಉದ್ದೇಶ ಕೂಡಾ ಒಬ್ಬ ವ್ಯಕ್ತಿಯ ಲಾಭಕ್ಕಾಗಿ, ಪ್ರತಿಷ್ಠೆಗಾಗಿ, ಒಂದು ಪಕ್ಷಕ್ಕಾಗಿ, ಒಂದು
ಧರ್ಮಕ್ಕಾಗಿ, ಒಂದು ಜಾತಿಗಾಗಿ ಪ್ರಾರಂಭವಾದ ಉತ್ಸವ ಅಲ್ಲವೇ ಅಲ್ಲ.

ಇದು ಪ್ರಾರಂಭವಾದದ್ದು ಜನರ ಸಂಘಟನೆಗಾಗಿ,ಇದರ ಮೂಲಕ ಏನೋ ಒಂದು ದೊಡ್ಡ ನಿಧಿಯನ್ನು ಪಡೆಯುವುದಕ್ಕಾಗಿ.ಆ ನಿಧಿ ಬೇರೆ ಯಾವುದೂ ಅಲ್ಲ,ಅದುವೇ ಪರಕೀಯರಿಂದ ಮುಕ್ತಿಯನ್ನು ಪಡೆದು ಬಿಗಿ ಸಂಕಲೆಯಿಂದ ಬಿಡುಗಡೆ ಹೊಂದುವ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಒಂದು ಉತ್ಸವ.ಅದನ್ನು ಪ್ರಾರಂಭಿಸಿದವರು ಕೂಡಾ ಓರ್ವ ಅಪ್ಪಟ ವೀರ,ಧೀರ, ಸ್ವಾತಂತ್ರ್ಯ ಪ್ರೇಮಿ,ಭಾರತೀಯರ ಸ್ವಾತಂತ್ರ್ಯಕ್ಕಾಗಿ ತುಡಿತವನ್ನು ಹೊರ ಹಾಕಿದ ಬಾಲಗಂಗಾಧರ ತಿಲಕ್. ಅಂದು ಮಹಾರಾಷ್ಟ್ರದಲ್ಲಿ ಈ ಮಹಾನ್ ಹುತಾತ್ಮರು ಹುಟ್ಟುಹಾಕಿದರು.
ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಪರಕೀಯರನ್ನು ನಮ್ಮ ದೇಶದಿಂದ ಹೊರದಬ್ಬಲು ಹಲವಾರು ಮಾರ್ಗೋಪಾಯಗಳನ್ನು ಹುಡುಕುತ್ತಿದ್ದರು.

ಆ ಸಂದಿಗ್ಧ ಪರಿಸ್ಥಿತಿಯಲ್ಲಿ ಏನು ಮಾಡಬೇಕಾದರೂ ಜನರನ್ನು ಒಟ್ಟುಸೇರಿಸಬೇಕಿತ್ತು.ಅದು ಅಷ್ಟು ಸುಲಭವಾಗಿರಲಿಲ್ಲ,ಯಾಕೆಂದರೆ ಜನ ಒಟ್ಟು ಸೇರಲು ಬ್ರಿಟಿಷರು ಬಿಡುತ್ತಿರಲಿಲ್ಲ.ಇನ್ನೊಂದು ಕಡೆ ಜನ ಒಟ್ಟು ಸೇರಲು ಭಯ ಪಡುತ್ತಿದ್ದರು.
ಆಗ ಬಾಲಗಂಗಾಧರ ತಿಲಕರು ಕಂಡುಕೊಂಡ ಒಂದು ಮಾರ್ಗವೇ ವಿಘ್ನ ನಿವಾರಕ ,ಅಂದು ಎಲ್ಲಾ ಧರ್ಮಗಳು ಪೂಜಿಸುತ್ತಿದ್ದ ಗಣೇಶ, ಗಣಪತಿ,ಪಾರ್ವತಿ ಪುತ್ರ ವಿಘ್ನೇಶ್ವರನ ಉತ್ಸವ.
ಅಂದರೆ ಜನರು ಒಂದೇ ಮನಸ್ಸಿನಿಂದ ,ಒಕ್ಕೊರಲಿನಿಂದ ಗರ್ವದಿಂದ ಒಟ್ಟು ಸೇರಬೇಕಾದರೆ ಅದು ಧಾರ್ಮಿಕ ಕ್ಷೇತ್ರದಿಂದ ಮಾತ್ರ ಸಾಧ್ಯ.ಅದಕ್ಕಾಗಿಯೇ ತಿಲಕರು ಸಾರ್ವಜನಿಕ ಗಣೇಶೋತ್ಸವವನ್ನು ಆಯ್ದುಕೊಂಡರು.ಅಂದ್ರೆ ಅವರ ಉದ್ದೇಶ ಧರ್ಮದ ಧ್ರುವೀಕರಣ ಆಗಿರಲಿಲ್ಲ.ಅವರ ಉದ್ದೇಶ ಒಂದೇ ಅದು ಪರಕೀಯರನ್ನು ಭಾರತದಿಂದ ಒದ್ದೋಡಿಸುವುದು,ಅವರ ಕೆಟ್ಟ ಆಡಳಿತವನ್ನು ಕಿತ್ತೊಗೆಯುವುದು, ಸಹಸ್ರಾರು ವರ್ಷಗಳಿಂದ ಪರಕೀಯರ ಕಪಿ ಮುಷ್ಟಿಯಲ್ಲಿ ಸಿಕ್ಕಿ ನರಳುತ್ತಿದ್ದ ಭಾರತ ಮಾತೆಯನ್ನು ಬಿಡುಗಡೆ ಮಾಡುವುದು, ಅವರ ಅಂತಿಮ ಗುರಿಯಾಗಿತ್ತು.

ಇದಕ್ಕೆ ಇಡೀ ಭಾರತ ದೇಶವೇ ಕೈಜೋಡಿಸಿತ್ತು,ಮಾತ್ರವಲ್ಲದೆ ಯಶಸ್ಸು ಕೂಡಾ ಆಯಿತು.ಈ ಉತ್ಸವವನ್ನು ಧರ್ಮತೀತವಾಗಿ ಆಚರಿಸಿದರು. ಈ ಮೂಲಕ ಯುವ ಜನರ ಧ್ರುವೀಕರಣ ವಾಯಿತು. ಅಂದು ಅದೊಂದು ಭಾರತೀಯರ ಹಬ್ಬವಾಗಿತ್ತು. ಪರಿಶುದ್ಧ ಹಬ್ಬವಾಗಿತ್ತು. ಅಲ್ಲಿ ಯಾವುದೇ ಧರ್ಮ, ಜಾತಿ, ಪಕ್ಷಗಳ ದುರ್ವಾಸನೆಯೇ ಇರಲಿಲ್ಲ. ಎಲ್ಲಿ ನೋಡಿದರು ಹಬ್ಬದ ಸಂಭ್ರಮ, ಸಡಗರ, ಎಲ್ಲಾ ಮನಸ್ಸುಗಳಲ್ಲಿ ಒಂದೇ ತುಡಿತ ಸ್ವಾತಂತ್ರ್ಯ ಪಡೆಯುವುದು ಆಗಿತ್ತು.
ಆದರೆ ಇಂದು ನೋಡಿ, ಸಾರ್ವಜನಿಕ ಗಣೇಶೋತ್ಸವದ ಆಚರಣೆ ಒಂದು ಧರ್ಮದ ಆಚರಣೆಯಾಗಿ ಮಾರ್ಪಟ್ಟಿದೆ. ಆದರೆ ಕೆಲವು ಕಡೆ ಧರ್ಮಾತೀತವಾಗಿ ನಡೆಯುತಿದೆ.
ಕೆಲವಾರು ವರ್ಷಗಳ ಹಿಂದೆ ಸಾರ್ವಜನಿಕ ಗಣೇಶೋತ್ಸವಕ್ಕೆ ಯಾವುದೇ ರೀತಿಯ ಖಾಕಿಪಡೆಯ ರಕ್ಷಣೆ ಬೇಕಿರಲಿಲ್ಲ,ಪಂಚಾಯತ್ ಅನುಮತಿ ಬೇಕಿರಲಿಲ್ಲ,ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿ ಬೇಕಾದರೂ ಭಕ್ತಾದಿಗಳು ಗಣೇಶೋತ್ಸವವನ್ನು ಆಚರಿಸಬಹುದಿತ್ತು.ಅದಕ್ಕೆ ಶಾಲೆ,ಮೈದಾನ,ಮಠ ಮಂದಿರ ಎಂಬ ವ್ಯಾಪ್ತಿ ಇರಲಿಲ್ಲ.
ಇಂದು ಜನ ಬುದ್ದಿವಂತರಾಗಿದ್ದಾರೆ,ಆದರೆ ವಿವೇಕಿಗಳಾಗಿ ಉಳಿದಿಲ್ಲ,ಪಕ್ಷಾತೀತರಾಗಿಲ್ಲ ಬದಲಾಗಿ ವಿವಿಧ ಪಕ್ಷಗಳಾಗಿ ವಿಘಟನೆ ಹೊಂದಿದ್ದಾರೆ.ಹಬ್ಬವನ್ನು ಮನೋರಂಜನೆಗಾಗಿ,ಸಂಘಟನೆಗಾಗಿ ಆಚರಿಸುತ್ತಿಲ್ಲ ಬದಲಾಗಿ ಒಂದು ಸವಾಲಾಗಿ ಆಚರಿಸಲಾಗುತ್ತಿದೆ.

ಪೋಲಿಸ್ ಭದ್ರತೆಯಲ್ಲಿ ಆಚರಿಸಲಾಗುತ್ತಿದೆ.ರಾಜಕೀಯ ಪಕ್ಷಗಳ ಸಂಘಟನೆಗಾಗಿ ಆಚರಿಸಲಾಗುತ್ತಿದೆ ಎಂದರೂ ತಪ್ಪಾಗಲಾರದು.
ಇದಕ್ಕೆಲ್ಲಾ ಕಾರಣ ಕೆಟ್ಟ ರಾಜಕೀಯ ಎನ್ನುತ್ತೇವೆ.ಅದು ತಪ್ಪಾಭಿಪ್ರಾಯ.ನಮ್ಮ ದೇಶದ ರಾಜಕೀಯದಷ್ಟು ಪರಿಶುದ್ಧ, ಅತ್ಯದ್ಭುತ, ಚಾಣಾಕ್ಷ ರಾಜಕೀಯ ಇಡೀ ಜಗತ್ತಿನಲ್ಲಿಲ್ಲ.ಇದಕ್ಕೆಲ್ಲ ಕಾರಣ ಕೆಟ್ಟ ,ನೀಚ,ಕುಟಿಲ ಬುದ್ದಿಯ ರಾಜಕಾರಣಿಗಳು ಮಿತ್ರರೇ. ಇನ್ನೊಂದು ಕಾರಣ ಕೆಲವು ಮಾಧ್ಯಮಗಳಲ್ಲಿ ಭಿತ್ತರವಾಗುವ ಸುಳ್ಳು ಸುದ್ದಿಗಳು,ಗಾಳಿ ಸುದ್ದಿಗಳು ಮತ್ತು ಅರ್ಧಂಬರ್ಧ ಅರ್ಥಮಾಡಿಕೊಳ್ಳುವ ಯುವ ಜನತೆ.ನಮ್ಮ ಹಿರಿಯರು ಈ ಹಬ್ವವನ್ನು ಭಯ ಭಕ್ತಿಯಿಂದ, ಪೂಜ್ಯ ಭಾವನೆಯಿಂದ ಆಚರಿಸುತ್ತಿದ್ದರು.ಆದರೆ ಈಗ ಡಿಜೆ,ಅಶ್ಲೀಲ ಚಿತ್ರಗೀತೆಗಳೊಂದಿಗೆ ಶೋಭಾಯಾತ್ರೆ.ಮೆರವಣಿಗೆ ಮುಗಿಯುವುದರೊಳಗೆ ಸಂಗ್ರಹವಾದ ನಿಧಿಯೂ ನೀರಾಗಿ ಹೋಗುತ್ತದೆ.

ಆದುದರಿಂದ ನಮ್ಮ ಜನ ನಾಯಕರೆಲ್ಲ ಒಂದೇ ಮನಸ್ಸಿನಿಂದ,ಪ್ರತಿಯೊಂದು ಹಬ್ಬ ಆಚರಣೆಗೂ ಕಟ್ಟುನಿಟ್ಟಿನ ನಿಯಮಗಳನ್ನು ತೆಗೆದು ಹಾಕ್ಬೇಕು ಮಾತ್ರವಲ್ಲದೆ ಸಂಪೂರ್ಣ ಸ್ವಾತಂತ್ರ್ಯ ಕೊಡಬೇಕು.ಪೋಲಿಸರ ಸರ್ಪಗಾವಲನ್ನು ತೆಗೆದುಹಾಕ್ಬೇಕು.ಮಾನ್ಯ ಬಾಲಗಂಗಾಧರ ತಿಲಕರ ಕನಸಿನ ಗಣೇಶೋತ್ಸವವನ್ನು ಆಚರಿಸಲು ಸಹಕರಿಸಬೇಕು.ಜನರಿಗೆ ಮನೋರಂಜನೆಯೊಂದಿಗೆ ಭಕ್ತಿಯಿಂದ ಆಚರಿಸಲು ಅನುವು ಮಾಡಿಕೊಡಬೇಕು.ಸರಕಾರಗಳೇ ಇಂತಹ ಹಬ್ಬಗಳನ್ನು ಆಚರಿಸಲು ಅನುದಾನ ಕೊಡಬೇಕು.

ಪಕ್ಷಾತೀತವಾಗಿ,ಜಾತ್ಯಾತೀತವಾಗಿ ಆಚರಿಸುವಂತೆ ಕಾನೂನು ತರಬೇಕು. ಒಟ್ಟಾರೆಯಾಗಿ ವಿಘ್ನೇಶ್ವರನ ಹಬ್ಬವನ್ನು ಧರ್ಮಾತೀತವಾಗಿ ಸ್ವತಂತ್ರಭಾರತದಲ್ಲಿ ಆಚರಿಸುವ ಕಾಲ ಕೂಡಿ ಬರಲಿ,ಎಲ್ಲಾ ಭಾರತೀಯರಿಗೂ ಈ ಮನಸ್ಸನ್ನು ಕೊಡಲಿ,ಭಾರತಮಾತೆಯ ಮಡಿಲಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಈ ಹಬ್ಬವನ್ನು ಸಂತೋಷದಿಂದ ಆಚರಿಸುವ ದಿನಗಳು ಬರಲಿ,ವಿಷ ಜಂತುಗಳ ನಾಶವಾಗಲಿ,ಎಲ್ಲರಿಗೂ ಗಣೇಶ ಸದ್ಭುದ್ದಿಯನ್ನು ಕೊಡಲಿ ಎಂದು ಪ್ರಾರ್ಥಿಸೋಣವಲ್ಲವೇ.
ಸರ್ವೇ ಜನ:ಸುಖಿನೋ ಭವಂತು:ಪ್ರಕೃತಿಯಲ್ಲಿ ನಡೆಯುತ್ತಿರುವ ಎಲ್ಲಾ ಅನಾಹುತಗಳು ಕಡಿಮೆಯಾಗಲಿ,ಸಮಾಜವು ಸುಭಿಕ್ಷೆಯಿಂದ ಕೂಡಿರಲಿ,ಭಾರತೀಯರೆಲ್ಲರೂ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಬದುಕುವ ಸದ್ಭುದ್ದಿಯನ್ನು ಆ ಗಣೇಶ ಕರುಣಿಸಲಿ,ಕೆಟ್ಟ ಮನಸ್ಸಿನ ಜನರ ಮನಸ್ಸು ತಿಳಿಯಾಗಲಿ,ವೈರತ್ವವನ್ನು ಮರೆತು ಸ್ನೇಹತ್ವವನ್ನು ಕೊಡಲಿ,ಬಾಲಗಂಗಾಧರ ತಿಲಕರು ಬಯಸಿದ್ದ ನಿಜವಾದ ಸ್ವಾತಂತ್ರ್ಯ ಎಲ್ಲರಿಗೂ ಸಿಗಲಿ ಎಂದು ಮತ್ತೊಮ್ಮೆ ವಿಘ್ನೇಶ್ವರನಲ್ಲಿ ಪ್ರಾರ್ಥಿಸುವ.

Leave A Reply

Your email address will not be published.