ಮಂಗಳೂರು: ಶಿಕ್ಷಕಿಯ ಮಾತನ್ನು ಸವಾಲಾಗಿ ಸ್ವೀಕರಿಸಿದ ಬಾಲಕ!! ಪ್ರತಿಭಾ ಕಾರಂಜಿಯಲ್ಲಿ ಮಾಡಿದ ಹಾಸ್ಯಭರಿತ ಭಾಷಣ ಭಾರೀ ವೈರಲ್!!

ಮಂಗಳೂರು: ನಗರದ ಹೊರವಲಯದ ದೇರಳಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಯೊಬ್ಬ ಪ್ರತಿಭಾ ಕಾರಂಜಿಯಲ್ಲಿ ಮಾಡಿದ ಹಾಸ್ಯಭರಿತ ಭಾಷಣವೊಂದರ ತುಣುಕೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುವುದರೊಂದಿಗೆ, ಬಾಲಕನ ಮಾತು ಕೇಳಿದ ಜನ ಬಿದ್ದು ಬಿದ್ದು ನಗುವಂತಾಗಿದೆ.

ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಆಫ್ವಾನ್ ಎಂಬ ವಿದ್ಯಾರ್ಥಿ ಮಾಡಿದ ಭಾಷಣ ಇದಾಗಿದ್ದು, ಈತ ವೈರಲ್ ಆಗುವುದರ ಹಿಂದೆ ಶಿಕ್ಷಕಿಯ ಪಾತ್ರವೇ ಮಹತ್ತರವಾಗಿದ್ದು, ಟೀಚರ್ ಹೇಳಿದ ಮಾತಿಗೆ ಮರು ಮಾತಾಡದೆ ಬಾಲಕ ಮಾಡಿದ ಭಾಷಣದಿಂದಾಗಿ ಸಾಮಾಜಿಕ ಜಾಲತಾಣ ಆತನನ್ನು ಮೆಚ್ಚಿಕೊಂಡಿದೆ. ತರಗತಿಯಲ್ಲಿ ಕೀಟಲೆ ಮಾಡಿದಾಗ ಟೀಚರ್ ಎದ್ದು ನಿಲ್ಲಿಸಿ, ಕೈ ಹಿಡಿದು ಮುಂದೆ ಕರೆತಂದು ಈಗ ಮಾತಾಡು ಎಂದಿದ್ದಾರಂತೆ. ಆಗ ಸುಮ್ಮನಾದ ಬಾಲಕನಿಗೆ ಶಿಕ್ಷೆಯಂತೆ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಲು ಹೇಳಿದ್ದಾರೆ, ಅದಕ್ಕಾಗಿ ಇಲ್ಲಿ ನಿಂತು ಮಾತನಾಡುತ್ತಿದ್ದೇನೆ ಎಂದು ಕೆಲ ಹಾಸ್ಯ ಪ್ರಸಂಗಗಳ ಜೊತೆಗೆ ಮಾತು ಪ್ರಾರಂಭಿಸುತ್ತಾನೆ.

ಈತನ ಮಾತಿಗೆ ಇಡೀ ಸಭೆಯೇ ನಗೆಗಡಲಲ್ಲಿ ತೇಲಿದ್ದು, ಕೆಲ ಹೊತ್ತಿನಲ್ಲೇ ಈತನ ಭಾಷಣದ ತುಣುಕು ಜಿಲ್ಲೆ ಬಿಟ್ಟು ಹೊರಜಿಲ್ಲೆಗಳಿಗೂ ತಲುಪಿತ್ತು. ಅನೇಕರು ಆತ ಭವಿಷ್ಯದಲ್ಲಿ ಓರ್ವ ಉತ್ತಮ ಮಾತುಗಾರ ಆಗುತ್ತಾನೆ ಎಂದು ಕಾಮೆಂಟ್ ಕೂಡಾ ಮಾಡಿದ್ದು, ಬಾಲಕನ ಮಾತಿಗೆ ಎಲ್ಲರೂ ಫಿದಾ ಆಗಿದ್ದಾರೆ.

ಈ ಬಗ್ಗೆ ನಮ್ಮ ವರದಿಗಾರರೊಂದಿಗೆ ಸ್ವತಃ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಆಲಿಸ ವಿಮಲಾ, “ಸರ್ಕಾರಿ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಎಲ್ಲಾ ರೀತಿಯ ಪ್ರತಿಭೆಗಳಿದ್ದು ಸರಿಯಾದ ವೇದಿಕೆ ಸಿಕ್ಕಲ್ಲಿ ಉಪಯೋಗಿಸಿಕೊಳ್ಳಲು ನಮ್ಮ ವಿದ್ಯಾರ್ಥಿಗಳಿಗೆ ಸೂಚಿಸಿ, ಮಾರ್ಗದರ್ಶನ ನೀಡುತ್ತಾ ಬರುತ್ತಿದ್ದೇವೆ. ಆಫ್ವಾನ್ ಮಾಡಿದ ಭಾಷಣಕ್ಕೆ ದ್ವಿತೀಯ ಬಹುಮಾನ ಬಂದಿದ್ದು, ಪ್ರತಿಭಾ ಕಾರಂಜಿಯ ಮೂಲಕ ಪ್ರತಿಭೆಯ ಅನಾವರಣವಾಗಿದೆ” ಎಂದರು.

Leave A Reply

Your email address will not be published.