ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡಿದರೆ ಗಂಡು ಮಗು ಹುಟ್ಟೋದು ಪಕ್ಕಾ – ಮಾಂತ್ರಿಕ ನೀಡಿದ ವಿಚಿತ್ರ ಸಲಹೆ…!

ಮುಂಬೈ: ಪತ್ನಿಯನ್ನು ಸಾರ್ವಜನಿಕವಾಗಿ ಸ್ನಾನ ಮಾಡುವಂತೆ ಒತ್ತಾಯ ಮಾಡಿದ ಘಟನೆ ನಡೆದಿದೆ. ಇದೀಗ ಪತಿ ವಿರುದ್ಧ ಪುಣೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಪತ್ನಿ ಗಂಡು ಗರ್ಭಧರಿಸಬೇಕಾದರೆ ಆಕೆ ಸಾರ್ವಜನಿಕವಾಗಿ ಸ್ನಾನ ಮಾಡಬೇಕೆಂದು ಮಾಂತ್ರಿಕನೋರ್ವ ಸಲಹೆ ನೀಡಿದ್ದರಿಂದ ವ್ಯಕ್ತಿಯೊರ್ವ ತನ್ನ ಪತ್ನಿಗೆ ಸಾರ್ವಜನಿಕವಾಗಿ ಎಲ್ಲರ ಮುಂದೆ ಸ್ನಾನ ಮಾಡುವಂತೆ ಕಿರುಕುಳ ನೀಡಿದ ಹಿನ್ನೆಲೆ ಆತ ಮತ್ತು ಆತನ ಪೋಷಕರ ವಿರುದ್ಧ  ಪ್ರಕರಣ ದಾಖಲಾಗಿದೆ.

ಗಂಡು ಮಗು ಬೇಕೆಂದು ಹೆಣ್ಣೊಬ್ಬಳನ್ನು ಹೀನಾಯವಾಗಿ ನಡೆಸಿಕೊಂಡ ಆಘಾತಕಾರಿ ಘಟನೆ ವರದಿಯಾಗಿದೆ. ಮಹಿಳೆಯೊಬ್ಬರಿಗೆ ಗಂಡು ಮಗುವನ್ನು ಹೊಂದಲು ಸ್ಥಳೀಯ ತಾಂತ್ರಿಕ ಬಾಬಾ ಒಬ್ಬಾತ ಒಂದು ವಿಚಿತ್ರ ಸಲಹೆ ನೀಡಿದ್ದ. ಈ ಸಲಹೆಯ ಭಾಗವಾಗಿ ಆಕೆಯ ಪತಿ ಮತ್ತು ಅತ್ತೆ ಜನರ ಮುಂದೆಯೇ ಬೆತ್ತಲೆಯಾಗಿ ಆಕೆಯನ್ನು ಸ್ನಾನ ಮಾಡುವಂತೆ ಒತ್ತಾಯಿಸಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಪುಣೆ ಪೊಲೀಸ್‌ನ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯ ಪೊಲೀಸರು ಭಾನುವಾರ ಪತಿ, ಅತ್ತೆ ಮತ್ತು ಮೌಲಾನಾ ಬಾಬಾ ಜಮಾದಾರ್ ಎಂಬ ತಾಂತ್ರಿಕ ಬಾಬಾ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಇನ್ನೂ ಮುಂದುವರಿದು ಇತ್ತೀಚೆಗೆ ಸ್ಥಳೀಯ ತಾಂತ್ರಿಕ್ ಬಾಬಾನನ್ನು ಭೇಟಿಯಾಗಿ ಆತ ಹೇಳಿದಂತೆ ನಡೆದುಕೊಳ್ಳಲು ಒತ್ತಡ ಹೇರಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ತಾಂತ್ರಿಕ ಹೇಳುವ ಪ್ರಕಾರ, ಸಾರ್ವಜನಿಕವಾಗಿ ಜಲಪಾತದ ಕೆಳಗೆ ಬೆತ್ತಲೆಯಾಗಿ ಸ್ನಾನ ಮಾಡಿದರೆ ಮಹಿಳೆಗೆ ಗಂಡು ಮಗುವಿನ ಜನ್ಮ ಪಕ್ಕಾ ಆಗುತ್ತದೆ ಎಂದು ಮನೆಮಂದಿಗೆ ಭರವಸೆ ನೀಡಿದ್ದಾನಂತೆ ಈ ಬಾಬಾ. ಇದನ್ನು ಪಾಲಿಸಲು ಹಲವು ವಿಧಿ ವಿಧಾನಗಳ ನಂತರ, ತನ್ನ ಪತ್ನಿಯನ್ನು ರಾಯಗಡ ಜಿಲ್ಲೆಗೆ ಕರೆದೊಯ್ದು ಅಲ್ಲಿ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡಲು ಪತಿಯು, ಅತ್ತೆ ಮತ್ತು ಮನೆಯವರು ಒತ್ತಡ ಹೇರಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ.

ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಜಗನ್ನಾಥ್ ಕಲಾಸ್ಕರ್ ಪ್ರಕಾರ, “ಪೊಲೀಸರು ಐಪಿಸಿಯ ಸೆಕ್ಷನ್ 498 ಎ, 323, 420, ಮತ್ತು 504 406 ಜೊತೆಗೆ ಮಹಾರಾಷ್ಟ್ರ ತಡೆಗಟ್ಟುವಿಕೆ ಮತ್ತು ಮಾನವ ತ್ಯಾಗ ನಿರ್ಮೂಲನೆ ಮತ್ತು ಇತರ ಅಮಾನವೀಯ, ದುಷ್ಟತನದ ಸೆಕ್ಷನ್ 3 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 2013 ರಿಂದ ವರದಕ್ಷಿಣೆಗಾಗಿ ಮತ್ತು ಗಂಡು ಮಗುವಿಗೆ ಜನ್ಮ ನೀಡದಿದ್ದಕ್ಕಾಗಿ ಮಹಿಳೆಗೆ ಚಿತ್ರಹಿಂಸೆ ನೀಡಲಾಗಿದ್ದು, ಹಾಗೂ ಅತ್ತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ವ್ಯಾಪಾರ ಉದ್ದೇಶಕ್ಕಾಗಿ ತನ್ನ ಆಸ್ತಿಯ ಮೇಲೆ 75 ಲಕ್ಷ ರೂಪಾಯಿ ಸಾಲ ಪಡೆಯಲು ಪತಿ ತನ್ನ ಸಹಿಯನ್ನು ನಕಲಿ ಮಾಡಿದ್ದಾನೆ ಎಂಬುದಾಗಿ ಕೂಡ ಸಂತ್ರಸ್ತೆ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಪುಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave A Reply

Your email address will not be published.