ಮಂಗಳೂರು : ಬೀಚ್‌ ಅಭಿವೃದ್ಧಿ ಸಮಿತಿಯಿಂದ ನೀರಿಗೆ ಇಳಿಯದಂತೆ ಎಚ್ಚರಿಕೆ ; ಸೆ.15ರ ವರೆಗೆ ಜಲಸಾಹಸ ಕ್ರೀಡೆಗಳಿಗೆ ನಿಷೇಧ

ಮಂಗಳೂರು : ಒಂಚೂರು ಮಳೆಯಿಂದ ಬಿಡುವು ಸಿಕ್ಕಿದೆ ಅಂದುಕೊಳ್ಳುವಷ್ಟರಲ್ಲೇ ರಾಜ್ಯದಲ್ಲಿ ಮತ್ತೆ ಭಾರಿ ಮಳೆ ಪ್ರಾರಂಭವಾಗಿದೆ. ಮಳೆಯ ಆರ್ಭಟಕ್ಕೆ ಕಡಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಹೀಗಾಗಿ, ಮಂಗಳೂರು ಬೀಚ್‌ ಅಭಿವೃದ್ಧಿ ಸಮಿತಿ ಎಚ್ಚರಿಕೆಯೊಂದನ್ನು ನೀಡಿದೆ.

ಹೌದು. ಬೀಚ್‌ ಅಭಿವೃದ್ಧಿ ಸಮಿತಿ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದು, ದೂರದಿಂದಲೆ ಸಮುದ್ರವನ್ನು ವೀಕ್ಷಣೆ ಮಾಡಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತ ಪ್ರತೀ ವರ್ಷದಂತೆ ಮೇ 15ರಿಂದ ಸೆ.15ರ ವರಗೆ ಯಾವುದೇ ಜಲಸಾಹಸ ಕ್ರೀಡೆಗಳಿಗೆ ನಿಷೇಧ ಹೇರಿದ್ದು, ಈ ಸಮಯದಲ್ಲಿ ಯಾವುದೇ ವಾಟರ್‌ನ್ಪೋರ್ಟ್ಸ್ ನಡೆಸಲು ಅನುಮತಿ ಇರುವುದಿಲ್ಲ.

ಮೂಲಗಳ ಪ್ರಕಾರ ಸೆ. 10ರ ವರೆಗೆ ಈ ನಿರ್ಬಂಧ ಮುಂದುವರಿಯುವ ಸಾಧ್ಯತೆ ಇದ್ದು, ಹೀಗಾಗಿ ಪ್ರವಾಸಿಗರಿಗೆ ದೂರದಿಂದಲೇ ಬೀಚ್‌ ನೋಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಮುಂದೆ ಸಮುದ್ರದ ನೀರಿನ ಒತ್ತಡವನ್ನು ನೋಡಿಕೊಂಡು ನೀರಿಗಿಳಿಯಲು ಬಿಡಲಾಗುವುದು ಎಂದು ಬೀಚ್‌ ನಿರ್ವಾಹಕ ಸುದೇಶ್‌ ಶೆಟ್ಟಿ ಅವರು ತಿಳಿಸಿದ್ದಾರೆ.

ಬೀಚ್‌ ಅಭಿವೃದ್ಧಿ ಸಮಿತಿ ಪ್ರವಾಸಿಗರು ನೀರಿಗೆ ಇಳಿಯದಂತೆ ಪ್ರತಿವರ್ಷ ಮಳೆಗಾಲದಲ್ಲಿ ಬೀಚ್‌ನ ಉದ್ದಕ್ಕೂ ರಿಫ್ಲೆಕ್ಟೆಡ್‌ ಪಟ್ಟಿ ಮತ್ತು ಫಿಶ್‌ನೆಟ್‌ ತಡೆಬೇಲಿಯನ್ನು ಕಟ್ಟಿ ಮುನ್ನೆಚ್ಚರಿಕೆ ವಹಿಸುತ್ತಿದೆ.

Leave A Reply

Your email address will not be published.