Shocking News | 37,000 ಅಡಿ ಎತ್ತರದಲ್ಲಿ ವಿಮಾನ ಹಾರುವಾಗಲೇ ಕಾಲು ಚಾಚಿ ಮಲಗಿದ ಇಬ್ಬರೂ ಪೈಲೆಟ್’ಗಳು

ನವದೆಹಲಿ: 37,000 ಅಡಿ ಎತ್ತರದಲ್ಲಿ ವಿಮಾನ ಹಾರುವಾಗಲೇ ಇಬ್ಬರು ಪೈಲಟ್ ಗಳು ನಿದ್ರೆಗೆ ಜಾರಿರುವ ಕಳವಳಕಾರಿ ಘಟನೆ ನಡೆದಿದೆ.

ಸುಡಾನ್​ನ ಖಾರ್ಟೌಮ್ ಎಂಬ ವಿಮಾನ ನಿಲ್ದಾಣದಿಂದ ಹೊರಟ ವಿಮಾನವು ಇಥಿಯೋಪಿಯಾದ ಅಡಿಸ್ ಅಬಾಬಾಕ್ಕೆ ತೆರಳುತ್ತಿತ್ತು. ವಿಮಾನದ ಪೈಲಟ್​ಗಳು ವಿಮಾನ ಮೇಲಕ್ಕೆ ತಲುಪಿ ಅಲ್ಲಿ ಹಾರಾಟ ನಡೆಸುತ್ತಿದ್ದಂತೆ ಮನೆಯಲ್ಲಿ ಮಲಗಿ ನಿದ್ರೆ ಹೋದಂತೆ, ಕಾಲು ಚಾಚಿ ಮಲಗಿ ನಿದ್ರೆಗೆ ಜಾರಿದ್ದಾರೆ. ಆ ಮೂಲಕ ತಮ್ಮದಲ್ಲದೆ, ಇತರ ಸಹ ಪ್ರಯಾಣಿಕರ ಜೀವವನ್ನು ಕೂಡಾ ಅಪಾಯಕ್ಕೆ ದೂಡಿದ್ದಾರೆ.

ಇಥಿಯೋಪಿಯನ್ ಏರ್​ಲೈನ್ಸ್​ ವಿಮಾನದ ಪೈಲಟ್​ಗಳು ಈ  ಪ್ರಮಾದ ಎಸಗಿದ್ದು, ವಿಮಾನ ಬರೋಬ್ಬರಿ 37 ಸಾವಿರ ಅಡಿ ಎತ್ತರದಲ್ಲಿ ಸಂಚರಿಸುತ್ತಿದ್ದಾಗ ವಿಮಾನದ ಪೈಲಟ್​ ನಿದ್ರೆಗೆ ಜಾರಿದ್ದಾರೆ. ಅದರ ಜತೆಗೆ ವಿಮಾನದ ಕೋ ಪೈಲೆಟ್ ಕೂಡಾ ನಿದ್ರೆಗೆ ಜಾರಿದ್ದಾರೆ ಎಂಬ ಮಾಹಿತಿ ಲಭ್ಯ ಆಗಿದೆ.

ಈ ಘಟನೆ ಸೋಮವಾರ ನಡೆದಿದ್ದು, ಏವಿಯೇಷನ್ ಹೆರಾಲ್ಡ್ ಪ್ರಕಾರ, ವಿಮಾನ ಸಂಖ್ಯೆ ಇಟಿ343 ವಿಮಾನ ನಿಲ್ದಾಣವನ್ನು ಸಮೀಪಿಸಿದಾಗ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಎಚ್ಚರಿಕೆಯನ್ನು ನೀಡಿತು. ಆದರೆ ಪೈಲಟ್‌ಗಳು ನಿದ್ರಿಸುತ್ತಿದ್ದರಿಂದ ಎಚ್ಚರಿಕೆ ಅವರ ಗಮನಕ್ಕೆ ಬರಲೇ ಇಲ್ಲ. ಬೋಯಿಂಗ್ 737 ನ ಆಟೋಪೈಲಟ್ ವ್ಯವಸ್ಥೆಯು ಆನ್ ಆಗಿದ್ದ ಕಾರಣದಿಂದ ವಿಮಾನ ವಿಮಾನ ನಿಲ್ದಾಣದಿಂದ ಮುಂದಕ್ಕೆ ಹೋಯಿತು. ಅದರ ಪರಿಣಾಮ ವಿಮಾನ ನಿಗದಿತ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನವು ನಿಲ್ದಾಣ ಬಿಟ್ಟು ಮುಂದೆ ಹೋಗಿದ್ದು, ನಿಗದಿಯಾದ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಲಿಲ್ಲ. ಆನಂತರ ಎಷ್ಟು ಸಮಯದ ನಂತರ ಪೈಲೆಟ್ ಗಳು ನಿದ್ದೆಯಿಂದ ಎಚ್ಚೆತ್ತುಕೊಂಡಿದ್ದಾರೆ. ಆಗ ನಿದ್ರೆಯಿಂದ ಎಚ್ಚೆತ್ತು, ಸುಮಾರು 25 ನಿಮಿಷಗಳ ನಂತರ ಅಡಿಸ್ ಅಬಾಬಾ ವಿಮಾನ ನಿಲ್ದಾಣದ ರನ್​ವೇ ನಲ್ಲಿ ವಿಮಾನವನ್ನು ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಮಾಡಲಾಗಿದೆ. ಇದೇ ಕಾರಣಕ್ಕೆ ವಿಮಾನವು ತನ್ನ ಮುಂದಿನ ಹಾರಾಟಕ್ಕೆ ಹೊರಡುವ ಮೊದಲು ಸುಮಾರು 2.5 ಗಂಟೆಗಳ ಕಾಲ ನಿಲ್ದಾಣದಲ್ಲಿಯೇ ಇತ್ತು ಎನ್ನಲಾಗಿದೆ.

ವಾಯುಯಾನ ವಿಶ್ಲೇಷಕ ಅಲೆಕ್ಸ್ ಮಚೆರಾಸ್ ಅವರು ಈ ಪ್ರಮಾದದ ಕುರಿತು ಖಾರವಾಗಿ ಟ್ವೀಟ್ ಮಾಡಿದ್ದು, ಆಫ್ರಿಕಾದ ಅತಿದೊಡ್ಡ ವಿಮಾನಯಾನ ಸಂಸ್ಥೆಯಲ್ಲಿನ ಘಟನೆಯ ಬಗ್ಗೆ ಗಂಭೀರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಘಟನೆಗೆ ಪೈಲಟ್​ಗಳ ಆಯಾಸವಾಗಿದ್ದೇ ಕಾರಣ ಎಂದು ಅಲೆಕ್ಸ್ ಮಚೆರಾಸ್ ಅಂದಾಜಿಸಿದ್ದು, ಪೈಲಟ್​ಗಳ ಆಯಾಸ ಆಗುವುದು ಹೊಸದೇನಲ್ಲ. ಇದು ವಿಮಾನಯಾನ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ಸಮಸ್ಯೆಯೂ ಆಗಿದೆ. ಅಲ್ಲದೇ ಪೈಲಟ್​ಗಳ ಆರೋಗ್ಯ, ವಿಶ್ರಾಂತಿ ಕುರಿತೂ ವಿಮಾನಯಾನ ಕಂಪನಿಗಳು ಒದಗಿಸಬೇಕು. ಪೈಲಟ್​ಗಳ ಬಗ್ಗೆಯೂ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದೇ ರೀತಿಯ ಘಟನೆ ಈ ಹಿಂದೆ ಅಂದರೆ ಮೇ ತಿಂಗಳಲ್ಲಿ ವರದಿಯಾಗಿತ್ತು. ನ್ಯೂಯಾರ್ಕ್‌ನಿಂದ ರೋಮ್‌ಗೆ ತೆರಳುತ್ತಿದ್ದ ವಿಮಾನವು 38,000 ಅಡಿ ಎತ್ತರದಲ್ಲಿ ಪ್ರಯಾಣಿಸುತ್ತಿದ್ದಾಗ ಇಬ್ಬರು ಪೈಲಟ್‌ಗಳು ನಿದ್ರೆಗೆ ಜಾರಿದ್ದರು. ಇತ್ತೀಚೆಗೆ ಹೆಚ್ಚಿನ ಎಲ್ಲಾ ವಿಮಾನಯಾನ ಸಂಸ್ಥೆಗಳ ಪೈಲೆಟ್ ಗಳು ಕೂಡ ರಾತ್ರಿ ಸಂಚರಿಸುವಾಗ ಒಂದು ಸಣ್ಣದಾದರೂ ಕೋಳಿ ನಿದ್ರೆ ಹೊಡೆಯುತ್ತಾರೆ ಎನ್ನುವುದು ತುಂಬಾ ಆಶ್ಚರ್ಯವೂ ಅಷ್ಟೇ ಆತಂಕಕಾರಿಯೂ ಆದ ವಿಚಾರ.

Leave A Reply

Your email address will not be published.