ಪ್ರವೀಣ್ ನೆಟ್ಟಾರು ಹತ್ಯೆ : ನೇರವಾಗಿ ಭಾಗಿಯಾದ ಮೂವರ ಗುರುತು ಪತ್ತೆ| ಬಂಧನ ವಾರಂಟ್ ಹೊರಡಿಸಿ ಆಸ್ತಿ ಮುಟ್ಟುಗೋಲು ಹಾಕಲು ಚಿಂತನೆ

ಮಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಮೂವರು ಆರೋಪಿಗಳ ಗುರುತು ಪತ್ತೆಹಚ್ಚಲಾಗಿದೆ. ಮೂವರ ಹೆಸರು, ವಿಳಾಸ, ಭಾವಚಿತ್ರ ದೊರೆತಿದೆ. ಆರೋಪಿಗಳು ಬಚ್ಚಿಟ್ಟುಕೊಂಡಿದ್ದು, ಅವರ ವಿರುದ್ದ ಬಂಧನ ವಾರಂಟ್ ಹೊರಡಿಸಿ ಆಸ್ತಿ ಮುಟ್ಟುಗೋಲು ಹಾಕಲು ಚಿಂತನೆ ನಡೆಯುತ್ತಿದೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಕರಣದಲ್ಲಿ ಈಗಾಗಲೇ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಮುಖ್ಯ ಆರೋಪಿಗಳು ಮನೆ ಖಾಲಿ ಮಾಡಿ ತಲೆಮರೆಸಿಕೊಂಡಿದ್ದು, ಶೀಘ್ರವಾಗಿ ಅವರನ್ನು ಬಂಧಿಸಲಾಗುವುದು. ಆರೋಪಿಗಳು ತಲೆಮರೆಸಿಕೊಳ್ಳಲು ಸಹಕಾರ ನೀಡಿದವರನ್ನೂ ದಸ್ತಗಿರಿ ಮಾಡುತ್ತೇವೆ. ಕರ್ನಾಟಕ ಪೊಲೀಸ್ ಮತ್ತು ಎನ್ಐಎ ಜತೆಯಾಗಿ ತನಿಖೆ ನಡೆಸುತ್ತಿದ್ದೇವೆ ಎಂದರು.

ಬಂಧಿತ ಆರೋಪಿಗಳಿಗೆ ಪಿಎಫ್ಐ ಜತೆ ಲಿಂಕ್ ಬಗ್ಗೆ ಶಂಕೆ ಇದೆ. ಈ ಬಗ್ಗೆ ಸಾಕ್ಷ್ಯ ಸಂಗ್ರಹಿಸಿದ್ದೇವೆ. ಆರೋಪಪಟ್ಟಿಯಲ್ಲಿ ಈ ಬಗ್ಗೆ ದಾಖಲೆ ಸೇರ್ಪಡೆ ಮಾಡಲಾಗುವುದು ಎಂದರು. ಪ್ರಕರಣದ ಮುಂದಿನ ತನಿಖೆ ಹಾಗೂ ಮುಖ್ಯ ಆರೋಪಿಗಳ ಬಂಧನ ಬಗ್ಗೆ ಬೆಳ್ಳಾರೆಯಲ್ಲಿ ಸಭೆ ನಡೆಸಲಾಗುತ್ತಿದೆ.

ದ.ಕ. ಜಿಲ್ಲಾ ಪೊಲೀಸ್, ಮಂಗಳೂರು ನಗರ ಪೊಲೀಸ್, ಹಾಸನ, ಮಂಡ್ಯ ಸಹಿತ ಎಂಟು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಎಡಿಜಿಪಿ ಮಾಹಿತಿ ನೀಡಿದರು.

ಪೊಲೀಸರು ಈ ರೀತಿ ಹೇಳುತ್ತಿರುವುದರಿಂದ, ಒಂದಂತೂ ಸ್ಪಷ್ಟ ಆಗಿದೆ. ಮುಖ್ಯವಾಗಿ ಕೊಲೆಯಲ್ಲಿ ಭಾಗಿಯಾದವರು ಅಂದರೆ ನೇರವಾಗಿ ತಲವಾರು ಬೀಸಿದವರು ಇನ್ನೂ ಸಿಕ್ಕಿ ಬಿದ್ದಿಲ್ಲ. ಈಗ ಸಿಕ್ಕವರೆಲ್ಲ ಮಾಹಿತಿ ನೀಡಿದವರು, ಸಹಾಯ ಮಾಡಿದವರು, ಸಾಕ್ಷ್ಯ ನಾಶಕ್ಕೆ ತೊಡಗಿದವರು, ಬಚ್ಚಿಟ್ಟವರು ಇತ್ಯಾದಿಗಳು. ನೇರವಾಗಿ ಬೈಕಲ್ಲಿ ಬಂದು ಕೊಂದವರು ಇನ್ನೂ ಸಿಕ್ಕಿಲ್ಲ ಅನ್ನುವುದು ಈಗ ಸ್ಪಷ್ಟ ಆಗುತ್ತಿದೆ. ಇದೇ ಒಟ್ಟಾರೆ ಕೇಸಿನಲ್ಲಿ ಆಗಿರುವ ಹಿನ್ನಡೆ.

Leave A Reply

Your email address will not be published.