ಒಂದು ಸುಳ್ಳು ಹೇಳಿ ನಡೆದ ಮದುವೆಗೆ ಹನ್ನೊಂದು ಮಂದಿಗೆ ಶಿಕ್ಷೆ ; ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತೇ?

ಮದುವೆ ಎಂಬುದು ವಧು-ವರರಿಗೆ ಅಷ್ಟೇ ಅಲ್ಲ, ಮನೆ ಮಂದಿಗೆಲ್ಲ ಸಂಭ್ರಮ. ಅದೇ ರೀತಿ ಇಲ್ಲೊಂದು ಕಡೆ ಅದ್ದೂರಿಯಾಗಿ ಮದುವೆ ಏನೋ ಆಗಿದೆ. ಆದ್ರೆ, ಬೀಗರ ಊಟದಂದು ಮಾತ್ರ ಮನೆಯವರು ಮಾತ್ರವಲ್ಲದೆ, ಅಡುಗೆಯವರು ಕೂಡ ಪೊಲೀಸ್ ಸ್ಟೇಷನ್ ಅಲೆಯೋ ತರ ಆಗಿದೆ. ಇಷ್ಟಕ್ಕೆಲ್ಲ ಕಾರಣವಾಗಿದೆ ಒಂದು ಸುಳ್ಳು.

ಹೌದು. ಯಾವುದೇ ಒಂದು ಶುಭ ಕೆಲಸ ಒಳ್ಳೆಯ ರೀತಿಲಿ ನಡೆಯುತ್ತದೆ ಎಂದರೆ ಸುಳ್ಳು ಹೇಳಿದರೂ ತಪ್ಪಿಲ್ಲ ಅನ್ನೋದು ಹಿರಿಯರ ಮಾತು. ಆದ್ರೆ, ಈ ಮದುವೇಲಿ ಮಾತ್ರ ಅದು ತದ್ವಿರುದ್ಧವಾಗಿದೆ. ಹೌದು. ಇಂತಹುದೊಂದು ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮದುವೆಯಾದ ಹುಡುಗಿ ಮಲವಗೊಪ್ಪ ಗ್ರಾಮದವಳಾಗಿದ್ದು, ಯುವಕ ಸಂತೇಕಡೂರಿನವ. ಇಬ್ಬರೂ ದೂರದ ಸಂಬಂಧಿಗಳಾಗಿದ್ದು, ಎರಡು ವರ್ಷದ ಹಿಂದೆ ಮದುವೆಯೊಂದರಲ್ಲಿ ಭೇಟಿಯಾಗಿದ್ದರು. ಬಳಿಕ ಇಬ್ಬರ ನಡುವೆ ಮೊಬೈಲ್ ಮೂಲಕ ಆರಂಭವಾಗಿ ಮದುವೆವರೆಗೂ ಬಂದು ಮುಟ್ಟಿತ್ತು. ಇವರ ಮದುವೆಗೆ ಎರಡೂ ಕುಟುಂಬಗಳ ಸಮ್ಮತಿಯೂ ಸಿಕ್ಕಿತು.

ಆದ್ರೆ, ಹುಡುಗಿ ಮಾತ್ರ ಅಪ್ರಾಪ್ತೆಯಾಗಿದ್ದಳು. ಹೀಗಾಗಿ, ಒಂದು ವರ್ಷ ಕಾಯೋಣ ಎಂದುಕೊಂಡಿದ್ದ ಕುಟುಂಬಸ್ಥರು, ಜೂನ್‌ನಲ್ಲಿ ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿದ್ದರು. ಬಳಿಕ ಅವಸರದಲ್ಲಿ ಜುಲೈ 30ರಂದು ಮದುವೆಯನ್ನೂ ಮಾಡಿ ಬಿಟ್ಟರು. ಮದುವೆ ಏನೋ ಆಯ್ತು. ಬಳಿಕ ಎರಡು ದಿನದ ನಂತರ ಬೀಗರ ಊಟದ ದಿನ ನವವಿವಾಹಿತೆ ಅಪ್ರಾಪ್ತೆ ಎಂಬ ಸುದ್ದಿ ಹರಿದಾಡಿದೆ. ಈ ವಿಚಾರ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯವರ ಕಿವಿಗೂ ಬಿದ್ದಿದ್ದು, ಸ್ಥಳಕ್ಕೆ ತೆರಳಿದ ಮಕ್ಕಳ ರಕ್ಷಣಾ ಸಮಿತಿಯವರು ಬಾಲಕಿಯನ್ನು ಕರೆದುಕೊಂಡು ಬಂದು ಆಲ್ಕೊಳದ ಬಾಲಕಿಯರ ಬಾಲಭವನದಲ್ಲಿ ಇರಿಸಿ ದೂರು ದಾಖಲಿಸಿದ್ದಾರೆ.

ಆದ್ರೆ, ಇಲ್ಲಿ ವಿಷಯ ಏನಪ್ಪಾ ಅಂದ್ರೆ, ಒಂದು ಸುಳ್ಳು ಹೇಳಿ ಹೇಗೋ ಮದುವೆ ಮಾಡಿಸಿದ್ದಾರೆ. ಆದರೆ, ಇದರ ಶಿಕ್ಷೆ ಮನೆಯವರಿಗೆ ಮಾತ್ರವಲ್ಲದೆ ಮದುವೆ ಕೆಲಸಕ್ಕೆ ಬಂದಿದ್ದ ಎಲ್ರಿಗೂ ಕೇಸ್!. ಹೌದು. ಅಪ್ರಾಪ್ತೆಯನ್ನು ಮದುವೆಯಾದ ಯುವಕ, ಅಪ್ರಾಪ್ತೆಯ ತಂದೆ-ತಾಯಿ, ವರನ ಚಿಕ್ಕಪ್ಪ-ಚಿಕ್ಕಮ್ಮ, ಮದುವೆಗೆ ಜಾಗ ನೀಡಿದ ದೇವಸ್ಥಾನದ ಆಡಳಿತ ಮಂಡಳಿ, ಪುರೋಹಿತರು, ಇಬ್ಬರು ಫೋಟೋಗ್ರಾಫರ್‌ಗಳು, ಮದುವೆಗೆ ಅಡುಗೆ ಮಾಡಿದ ಬಾಣಸಿಗರು, ಆಹ್ವಾನ ಪತ್ರಿಕೆ ಮುದ್ರಿಸಿದ ಮುದ್ರಕರು, ಮದುವೆಗೆ ಭಾಗವಹಿಸಿದ ಸಂಬಂಧಿಕರು, ಸ್ನೇಹಿತರು ಸೇರಿ ಬರೋಬ್ಬರಿ 11 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Leave A Reply

Your email address will not be published.