ಕಣ್ಣಿಗೆ ಖಾರದ ಪುಡಿ ಬಿದ್ದರೂ, ಓಡುವಾಗ ಬಿದ್ದು ಗಾಯ ಮಾಡಿಕೊಂಡರೂ ಹಠ ಹಿಡಿದು ಡಕಾಯಿತನನ್ನು ಬೆನ್ನಟ್ಟಿ ಹಿಡಿದು ಶೌರ್ಯ ಮೆರೆದ ಗೃಹಿಣಿ !

ಹೈದರಾಬಾದ್: ಹೈದರಾಬಾದ್‌ನ ಈ ಗಟ್ಟಿಗಿತ್ತಿ ಗೃಹಿಣಿಯ ಶೌರ್ಯದ ಕಥೆ ಕೇಳಿದರೆ ಎಂಥವರೂ ತಲೆದೂಗಲೇಬೇಕು. ಕಳ್ಳ ಕಣ್ಣಿಗೆ ಖಾರದ ಪುಡಿ ಎರಚಿದರೂ, ಆತನನ್ನು ಹಿಡಿಯುವ ರಭಸದಲ್ಲಿ ಜಾರಿ ಬಿದ್ದು ಕಾಲಿಗೆ ಏಟಾದರೂ ಬಿಡದೇ ಈಕೆ  ಓಡಿ ಹೋಗುತ್ತಿದ್ದ ಕಳ್ಳನನ್ನು ಹಿಡಿದಿದ್ದಾಳೆ.

ತೆಲಂಗಾಣದ ಸೂರ್ಯಪೇಟೆ ಜಿಲ್ಲೆ ಮೋಟೆ ತಾಲೂಕಿನ ಅಪ್ಪಣ್ಣಗುಡೆಂ ಗ್ರಾಮದ ಬಾಲಾಜಿನಗರದಲ್ಲಿ ಗೃಹಿಣಿ ಸಿರೀಶಾ ತಮ್ಮ ಕುಟುಂಬದ ಜತೆ ವಾಸಿಸುತ್ತಿದ್ದಾರೆ. ಇವರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪಕ್ಕದ ಇನ್ನೆರಡು ಮನೆಗಳು ಬಾಡಿಗೆಗೆ ಇವೆ ಎಂದು ಮಾಲೀಕರು ಬೋರ್ಡ್ ಹಾಕಿದ್ದರು. ಇದೇ ನೆಪ ಮಾಡಿಕೊಂಡು ಬಂದಿದ್ದಾನೆ ಮನೆ ಬಾಡಿಗೆದಾರನ ವೇಷದ ಡಕಾಯಿತ.

ಮೊದಲು, ಬಾಡಿಗೆಗೆ ಇರುವ ಮನೆಯನ್ನು ತಾನು ನೋಡಬೇಕು ಎಂದಿದ್ದಾನೆ. ಆ ಸಮಯದಲ್ಲಿ ಮಾಲೀಕರು ಬೇರೆ ಕಡೆ ಹೋಗಿದ್ದರಿಂದ ಸಿರೀಶಾ ಅವರು ಮಾಲೀಕರು ಇಲ್ಲ ಎಂದು ಆತನಿಗೆ ಹೇಳಿದ್ದಾರೆ. ಆಗ ಆತ ನಾನು ಇಲ್ಲಿರುವ ನಂಬರ್ ಪಡೆದು ಮಾಲೀಕರಿಗೆ ಕರೆ ಮಾಡಿದ್ದೇನೆ. ಅವರು ನೀವು ಮನೆ ತೋರಿಸುತ್ತೀರಿ ಎಂದಿದ್ದಾರೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ಸಿರೀಶಾ ತಮ್ಮ ಬಳಿ ಮಾಲೀಕರು ಕೊಟ್ಟಿರುವ ಕೀಲಿಯಿಂದ ಮನೆ ತೆರೆದು ತೋರಿಸಿದ್ದಾರೆ, ಇನ್ನೊಂದು ಮನೆ ತೋರಿಸುವಂತೆ ಕಳ್ಳ ಹೇಳಿದ್ದಾನೆ. ಆಗ ಇನ್ನೊಂದು ಮನೆಯ ಬಾಗಿಲು ತೆರೆಯಬೇಕು ಎನ್ನುವಷ್ಟರಲ್ಲಿ ಕಳ್ಳ ಸಿರೀಶಾ ಅವ ಕಣ್ಣಿಗೆ ಖಾರದ ಪುಡಿ ಎರಚಿದ್ದಾನೆ. ಅವರ ಕೊರಳಿನಲ್ಲಿದ್ದ 10 ಗ್ರಾಂಗೂ ಅಧಿಕ ಬಂಗಾರದ ತಾಳಿಯನ್ನು ಕಿತ್ತುಕೊಂಡು ಕೆಳಗೆ ಓಡಿ ಹೋಗಿದ್ದಾನೆ. ಕಣ್ಣಿಗೆ ಏನೇ ಬಿದ್ರೂ ಅದರ ನೋವು ಏನೂಂತ ಎಲ್ಲಾರಿಗೂ ಗೊತ್ತಿರುವ ಸಂಗತಿ. ಅದರಲ್ಲೂ ಖಾರಾದ ಪುಡಿ ಬಿದ್ದರೆ, ನಿಂತಲ್ಲಿಂದ ಕದಲಲಾಗದೆ ಕಣ್ಣುಜ್ಜಿ ಕೊಳ್ಳುವುದರಲ್ಲೆ ನಾವು ಬ್ಯುಸಿ. ಬೇರೆ ಏನೊಂದೂ ಗೋಚರ ಆಗದಷ್ಟು ನೋವಿನ ಸಂಗತಿ ಅದು.

ಆದ್ರೆ ಆಲ್ಲಿ ಇದ್ದುದು ಸಿರೀಶಾ ಎಂಬ ಧೈರ್ಯದ ಹುಡುಗಿ. ಕಣ್ಣು ಖಾರದ ಪುಡಿಯಿಂದ ಉರಿಯುತ್ತಿದ್ದರೂ ಅದನ್ನು ಉಜ್ಜಿಕೊಂಡು ಕಳ್ಳನ ಬೆನ್ನಟ್ಟಿದ್ದಾರೆ ಸಿರೀಶಾ. ಇದು ಮೊದಲ ಮಹಡಿಯಾಗಿದ್ದರಿಂದ ಕಳ್ಳ ಸಲೀಸಾಗಿ ಕೆಳಕ್ಕೆ ಇಳಿದು ಓಡಿದ್ದಾನೆ. ಆದರೂ ಆತನ ಬೆನ್ನು ಬಿಡದ ಸಿರೀಶಾ ಓಡುವಾಗ ಆಯತಪ್ಪಿ ಬಿದ್ದು ಕಾಲಿಗೆ ಗಾಯಮಾಡಿಕೊಂಡಿದ್ದಾರೆ. ಆದರೂ ಆಕೆ ಬಿಟ್ಟು ಕೊಟ್ಟಿಲ್ಲ. ಪರದಾಡಿಕೊಂಡು ಕಳ್ಳನನ್ನು ಹಿಡಿಯಲು ಮುಂದೆ ಬಂದಿದ್ದಾಳೆ. ಅಷ್ಟರಲ್ಲಿ ಕಳ್ಳ ಬೈಕ್ ಆನ್ ಮಾಡಿದ್ದ. ಇನ್ನೇನು ಬೈಕ್ ಗೇರ್ ಗೆ  ಬೀಳುವಶ್ಟರಲ್ಲಿ ಬೈಕ್ ನ ಹಿಂದೆ ಇರುವ ಹ್ಯಾಂಡಲ್ ಗೆ ಗಟ್ಟಿಯಾಗಿ ಕೈ ಇಟ್ಟಿದ್ದಾಳೆ.
ಡಕಾಯಿತ ಏಕಾಏಕಿ ಆಕ್ಸಲೇಟರ ತಿರುವಿದ್ದಾನೆ. ಬೈಕ್ ಮುಂದೆ ಹೋಗಿದೆ. ಆದರೂ ಸಿರೀಷ ಕೈ ಬಿಟ್ಟಿಲ್ಲ. ಸಾಧ್ಯವಾದ ಶಕ್ತಿ ಹಾಕಿ ಎಳೆದು ಹಿಡಿದಿದ್ದಾಳೆ. ಹತ್ತು ಮೀಟರ್ ಅವಳನ್ನು ಎಳೆದುಕೊಂಡು ಹೋದ ಬೈಕು ಹೊಯ್ದಾಡಿ ಆತನ ಸಮೇತ ಬಿದ್ದು ಬಿಟ್ಟಿದೆ. ಇದೇ ವೇಳೆ ಸಿರೀಶಾ ಜೋರಾಗಿ ಕೂಗಿಕೊಂಡಿದ್ದರಿಂದ ಇಬ್ಬರು ಸ್ಥಳೀಯ ಯುವಕರು ಬಂದು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೊದಲೇ ಬಿದ್ದು ಏಟು ಮಾಡಿಕೊಂಡಿದ್ದ ಸಿರೀಶಾ ಅವರು ಬೈಕ್ ಎಳೆದಿದ್ದರಿಂದ ಮೊಣಕಾಲುಗಳಿಗೂ ಗಾಯವಾಗಿದೆ. ಪೊಲೀಸರು ಕಳ್ಳನಿಂದ ಚಿನ್ನದ ಸರ ವಶಪಡಿಸಿಕೊಂಡು ಸಿರೀಶಾಗೆ ನೀಡಿದ್ದಾರೆ. ಆರೋಪಿಯಿಂದ ಬೈಕ್ ಹಾಗೂ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಮ್ಮ ವಿಶೇಷ ಧೈರ್ಯ ದಿಂದ ಸಿರೀಶಾ ಅವರು ಈಗ ಹೈದರಾಬಾದ್ ನಲ್ಲಿ ಭಾರಿ ಪ್ರಸಿದ್ಧಿ ಪಡೆದುಕೊಂಡಿದ್ದು, ಒಂಟಿ ಗೃಹಿಣಿಯ ಈ ಸಾಹಸಕ್ಕೆ ತಲೆದೂಗುತ್ತಿದ್ದಾರೆ.

Leave A Reply

Your email address will not be published.