Breaking News । PFI ಮತ್ತು SDPI ನಿಷೇಧಕ್ಕೆ ರಾಜ್ಯ ಶಿಫಾರಸು – ಜಗದೀಶ್ ಶೆಟ್ಟರ್ ಹೇಳಿಕೆ !

ಹುಬ್ಬಳ್ಳಿ: ಯಾವುದೇ ಹಂತದಲ್ಲಾದರೂ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಬಿಜೆಪಿಯ ಹಿರಿಯರೊಬ್ಬರು ಹೇಳಿದ್ದಾರೆ. ಹಾಗಾದರೆ, ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳ ನಿಷೇಧ ಸನ್ನಿಹಿತವಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸುವ ಕುರಿತು ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿದೆ. ಯಾವುದೇ ಹಂತದಲ್ಲಾದರೂ ಇವುಗಳನ್ನು ನಿಷೇಧಿಸುವ ವಿಶ್ವಾಸವಿದೆ. ಆ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು. ಆ ಮೂಲಕ ರಾಜ್ಯದ ಮನವಿಯನ್ನು ಕೇಂದ್ರ ಪರಿಗಣಿಸಿ, ಈ ಎರಡು ಸಂಘಟನೆಗಳನ್ನು ಕೇಂದ್ರವು ನಿಷೇಧಿಸುತ್ತಾ ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ. ಅವರ ಹೇಳಿಕೆಯ ಪ್ರಕಾರ ರಾಜ್ಯ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸುವ ಕುರಿತು ನಿರ್ಧಾರ ಮಾಡಿದೆ. ಕೇಂದ್ರ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಜನ್ಮದಿನದ ಅಮೃತಮಹೋತ್ಸವದಿಂದ ಬಿಜೆಪಿಗೆ ನಡುಕ ಉಂಟಾಗಿಲ್ಲ. ಪಕ್ಷದ ಬೆಳವಣಿಗೆ, ಸಂಘಟನೆಗೆ ಇದರಿಂದ ಯಾವುದೇ ಧಕ್ಕೆ ಆಗಿಲ್ಲ. ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಸೂಚನೆಯಂತೆ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡರು. ಅದು ತೋರಿಕೆಯ ಒಗ್ಗಟ್ಟು ಅಷ್ಟೇ. ಕಾಂಗ್ರೆಸ್‌ನಲ್ಲಿನ ಆಂತರಿಕ ಜಗಳ ದೊಡ್ಡದಾಗುತ್ತಿದ್ದು, ಈ ಜನ್ಮ ದಿನಾಚರಣೆಯಿಂದ ಕಾಂಗ್ರೆಸ್‌ಗೇ ಸಮಸ್ಯೆಯಾಗಿದೆ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದ್ದಾರೆ.

ಈಗ ಕಾಂಗ್ರೆಸ್‌ನವರಿಗೆ ಬೇರೆ ವಿಷಯ ಇಲ್ಲದೆ, ಖಾದಿ ವಿಚಾರದಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ. ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರದತ್ತ ಈಗಷ್ಟೇ ಅವರು ಇಣುಕುತ್ತಿದ್ದಾರೆ. ಅಲ್ಲಿಗೆ ಭೇಟಿ ನೀಡಿದ ರಾಹುಲ್ ಗಾಂಧಿ ಕೇವಲ ಎರಡು ನಿಮಿಷ ಇದ್ದರು. ಅಧಿಕಾರದಲ್ಲಿದ್ದಾಗ ಖಾದಿ ಬಗ್ಗೆ ಕಾಳಜಿ ತೋರದ ಕಾಂಗ್ರೆಸ್, ಈಗ ನಾಟಕವಾಡುತ್ತಿದೆ ಎಂದರು. ಬಿಜೆಪಿ ವತಿಯಿಂದ ನಡೆದ ಸಂಕಲ್ಪಯಾತ್ರೆ, ರೈತರ ಸಮಾವೇಶ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ 4-5 ಲಕ್ಷ ಜನ ಸೇರಿದ್ದರು. ಸಿದ್ದರಾಮಯ್ಯ ಜನ್ಮದಿನದ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರ ಸೇರಿದ್ದ ದೊಡ್ಡ ವಿಷಯವೇನೂ ಅಲ್ಲ. ಆ ಕಾರ್ಯಕ್ರಮಕ್ಕಾಗಿ ಬಹಳಷ್ಟು ಹಣ ಖರ್ಚು ಮಾಡಿದ್ದಾರೆ. ಆದರೆ, ದೇಶದಲ್ಲಿ ಕಾಂಗ್ರೆಸ್ ಸಂಘಟನೆ ದಿನೇ ದಿನೇ ಕುಸಿಯತ್ತಿದೆ. ರಾಜ್ಯವೂ ಶೀಘ್ರ ಕಾಂಗ್ರೆಸ್ ಮುಕ್ತವಾಗುತ್ತದೆ ಎಂದು ಅವರು ಟೀಕಿಸಿದ್ದಾರೆ.

ಖಾದಿ ಉತ್ಪಾದನೆ ಮತ್ತು ಮಾರಾಟಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಕೇಂದ್ರ ಸರ್ಕಾರ ಖಾದಿಗೆ ಮಹತ್ವ ಕೊಟ್ಟಿದೆ. ರಾಷ್ಟ್ರಧ್ವಜ ತಯಾರಿಕೆಯಲ್ಲಿ ಎಲ್ಲಾದರೂ ಲೋಪವಾಗಿದ್ದರೆ ಸರಿಪಡಿಸಲಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ರಾಷ್ಟ್ರಧ್ವಜ ಬೇಕಿರುವುದರಿಂದ ಪಾಲಿಸ್ಟರ್ ಧ್ವಜಗಳು ಅನಿವಾರ್ಯವಾಗಿವೆ. ಆದರೆ ವಾಸ್ತವದಲ್ಲಿ, ಖಾದಿ ಉತ್ಪಾದನೆ, ಖಾದಿ ಬಟ್ಟೆಗಳ ಮಾರಾಟ ಹೆಚ್ಚಿದೆ ಎಂದು ಅವರು ಹೇಳಿದರು.

Leave A Reply

Your email address will not be published.