ಜಲಪಾತದ ದೃಶ್ಯ ಕಣ್ತುಂಬಿಕೊಳ್ಳುತ್ತಾ ಫೋಟೋ ಗೆ ಫೋಸ್ ಕೊಡುತ್ತಿದ್ದವ ನೋಡ ನೋಡುತ್ತಿದ್ದಂತೆಯೇ ಮಾಯ

ಬಿಡದೇ ಸುರಿಯುತ್ತಿರುವ ಮಳೆಗೆ ಅದೆಷ್ಟೋ ಜನ ಅರಿವಿಲ್ಲದೆಯೇ ಕಣ್ಣ್ ಮುಚ್ಚಿದ್ದಾರೆ. ಇಂತಹ ಅಪಾಯಕಾರಿ ಘಟನೆಗಳು ತಿಳಿದಿದ್ದರು, ಇಂದಿನ ಯುವ ಸಮೂಹ ತಮ್ಮ ಚೇಷ್ಟೆ ಮಾತ್ರ ಬಿಡುವುದಿಲ್ಲ. ಹೌದು. ತುಂಬಿ ಹರಿಯುತ್ತಿರುವ ಮಳೆಗೆ ಜಲಪಾತ ಭೋರ್ಗರೆಯುವ ದೃಶ್ಯ ಕಣ್ತುಂಬಿಕೊಳ್ಳಲೆಂದು ಹೋಗಿ, ಯುವಕ ನೀರಲ್ಲೇ ಕೊಚ್ಚಿ ಹೋದ ಘಟನೆ ನಡೆದಿದೆ.

ತಮಿಳುನಾಡಿನ ಪುಲ್ಲವೇಲಿ ಜಲಪಾತ ಬಳಿ ಈ ಘಟನೆ ನಡೆದಿದ್ದು, ಧಾರಾಕಾರ ಮಳೆ ಹಿನ್ನೆಲೆಯಲ್ಲಿ ದಿಂಡಿಗಲ್​ನ ಪುಲ್ಲವೇಲಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಹೀಗಾಗಿ, ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ಸ್ಥಳೀಯರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಅಪಾಯ ಲೆಕ್ಕಿಸದೆ ಫೋಟೋ, ವಿಡಿಯೋಗೆ ಪೋಸ್ ಕೊಡಲು ಮುಂದಾದ ಯುವಕನೋರ್ವ ಆಯತಪ್ಪಿ ನೂರು ಅಡಿ ಆಳಕ್ಕೆ ಬಿದ್ದು ನೀರು ಪಾಲಾಗಿದ್ದಾನೆ.

ಪರಮಕುಡಿಯ ಅಜಯ್ ಪಾಂಡಿಯನ್ ನಿನ್ನೆ ತನ್ನ ಸ್ನೇಹಿತನೊಂದಿಗೆ ಪುಲ್ಲವೇಲಿ ಜಲಪಾತ ನೋಡಲು ಬಂದಿದ್ದ. ಜಲಧಾರೆಯ ಸೌಂದರ್ಯ ನೋಡುತ್ತಾ ಮೈಮರೆತ ಆತ ಜಲಪಾತ ತುದಿಯಲ್ಲಿ ನಿಂತು ತನ್ನ ಸ್ನೇಹಿತನಿಗೆ ವಿಡಿಯೋ ತೆಗೆಯಲು ಹೇಳಿ ಪೋಸ್ ಕೊಟ್ಟಿದ್ದಾನೆ. ಹೀಗೆ ಪೋಸ್ ನೀಡುತ್ತಿದ್ದಂತೆ ಕಾಲು ಜಾರಿದ್ದು, ನೂರು ಅಡಿ ಆಳಕ್ಕೆ ಬಿದ್ದಿದ್ದಾನೆ.

ಈ ದೃಶ್ಯ ಸ್ನೇಹಿತನ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಷಯ ತಿಳಿದು ಸ್ಥಳದಲ್ಲಿದ್ದ ಪ್ರವಾಸಿಗರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯುವಕನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಒಟ್ಟಾರೆ ಫೋಟೋ ಹುಚ್ಚು ಆತನ ಪ್ರಾಣವನ್ನೇ ತೆಗೆದಿದೆ.

Leave A Reply

Your email address will not be published.