ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ 7,000 ಬಸ್​ಗಳು ಬುಕ್; ವಿವಿಧೆಡೆ ಬಸ್ ಸಂಚಾರದಲ್ಲಿ ವ್ಯತ್ಯಯ

ದಾವಣಗೆರೆ: ದಾವಣಗೆರೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನಾಚರಣೆಯ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕಾಗಿ ಭಾನುವಾರದವರೆಗೆ 325ಕ್ಕೂ ಹೆಚ್ಚು ವಾಯುವ್ಯ ರಸ್ತೆ ಸಾರಿಗೆ ಬಸ್‌ಗಳು ಸೇರಿದಂತೆ ಒಟ್ಟು 7,000 ಬಸ್​ಗಳು ಬುಕ್ ಆಗಿವೆ.

ಆಗಸ್ಟ್ 3ರಂದು ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಕಾರ್ಯಕ್ರಮಕ್ಕಾಗಿ ಇನ್ನೂ ನೂರಾರು ಬಸ್‌ಗಳನ್ನು ಕಾಯ್ದಿರಿಸುವ ನಿರೀಕ್ಷೆಯಿದೆ. ದಾವಣಗೆರೆ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ 6 ಸಾವಿರ ಕಾರ್ಯಕರ್ತರನ್ನು ಆಹ್ವಾನಿಸಿ ಕರೆದೊಯ್ಯಲು ಸಿದ್ಧತೆ ನಡೆದಿದೆ. ಈ ಕಾರ್ಯಕ್ರಮದ ಹಿನ್ನೆಲೆ ಜನರು ಸಹ ಬಸ್‌ಗಳು ಇಲ್ಲದೇ ಪರದಾಡಬೇಕಿದೆ.

‘ಸಿದ್ದರಾಮೋತ್ಸವ’ ಕ್ಕಾಗಿ ಸುಮಾರು 7 ಸಾವಿರ ಬಸ್‌ಗಳಲ್ಲಿ ಜನರು ತೆರಳಲಿದ್ದು, ವಿವಿಧೆಡೆ ಬಸ್ ಸಂಚಾರದಲ್ಲಿ ಆಗಸ್ಟ್ 3 ಮತ್ತು 4ರಂದು ವ್ಯತ್ಯಯ ಉಂಟಾಗಲಿದೆ. ಹೀಗಾಗಿ, ದೂರ ಪ್ರಯಾಣ ಮಾಡುವ ಯೋಜನೆ ಹಾಕಿಕೊಂಡವರು ಬಸ್‌ಗಳ ಲಭ್ಯತೆ ಬಗ್ಗೆ ಒಮ್ಮೆ ಪರಿಶೀಲಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಇದೇ ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗದದಿಂದ ಸುಮಾರು 200 ಬಸ್‍ಗಳನ್ನು ಕರಾರು ಒಪ್ಪಂದದ ಮೇಲೆ ಒದಗಿಸಲಾಗಿದೆ ಎಂದು ಹೇಳಿದೆ. ಬಳ್ಳಾರಿ, ಸಿರುಗುಪ್ಪ, ತೆಕ್ಕಲಕೋಟೆ, ಕುರುಗೋಡು, ಕುಡಿತಿನಿ, ಕಂಪ್ಲಿ, ಸಂಡೂರು ಕಡೆಗಳಿಂದ ವಿವಿಧ ಸ್ಥಳಗಳಿಗೆ ತೆರಳುವ ಬಸ್ಸುಗಳ ದೈನಂದಿನ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಪ್ರಯಾಣಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

ಸಿದ್ದರಾಮೋತ್ಸವಕ್ಕಾಗಿ ರಾಜ್ಯಾದ್ಯಂತ ಬಸ್‌ಗಳು ಬುಕ್ ಆಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ 50, ಹಾವೇರಿಯಲ್ಲಿ 90, ಗದಗದಲ್ಲಿ 85 ಮತ್ತು ಧಾರವಾಡ ಜಿಲ್ಲೆಯಲ್ಲಿ 90 ಬಸ್‌ಗಳು ಬುಕ್ ಆಗಿವೆ. ಇದರಿಂದ ಸಾರಿಗೆ ಸಂಸ್ಥೆಗೆ ಅಂದಾಜು 39 ಲಕ್ಷ ರೂ.ಗಳ ಆದಾಯ ಬರುವ ನಿರೀಕ್ಷೆ ಇದೆ. ಸಿದ್ದರಾಮಯ್ಯ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಸ್ಥಾನಕ್ಕೇರುವ ಸಾಧ್ಯತೆ ಹೆಚ್ಚಿರುವುದರಿಂದ ಜನಪ್ರತಿನಿಧಿಗಳು ಮತ್ತು ಪಕ್ಷದ ಕಾರ್ಯಕರ್ತರು ಶಕ್ತಿ ಪ್ರದಶರ್ನಕ್ಕೆ ಮುಂದಾಗಿದ್ದಾರೆ.

ಸಮಾವೇಶಕ್ಕೆ ಸಿದ್ದರಾಮಯ್ಯ ತವರು ಕ್ಷೇತ್ರ ಬಾದಾಮಿಯಿಂದಲೇ 25 ಸಾವಿರ ಜನರು ಆಗಮಿಸಲಿದ್ದಾರೆ. ವಿವಿಧ ಜಿಲ್ಲೆಗಳಿಂದ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಆಗಮಿಸಲು ಸುಮಾರು 7 ಸಾವಿರ ಬಸ್‌ಗಳನ್ನು ಬುಕ್ ಮಾಡಲಾಗಿದೆ.

ಇದೇ ಆಗಸ್ಟ್ 3ರಂದು ದಾವಣಗೆರೆ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ನಡೆಯಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಕಳೆದ ಎರಡು ವಾರಗಳಿಂದ ರಾತ್ರಿ ಹಗಲು ನಡೆಯುತ್ತಿರುವ ವೇದಿಕೆ, ಕಾರ್ಯಕರ್ತರಿಗೆ ಪೆಂಡಾಲ್, ಆಸನ, ಊಟದ ಸಿದ್ಧತೆ ಕೆಲಸಗಳು ಭರ್ಜರಿ ಸಾಗಿದೆ. ಈ ಕಾರ್ಯಕ್ರದಮ ಮುಖ್ಯ ವೇದಿಕೆಯಲ್ಲಿ ಆಗಸ್ಟ್ 3ರಂದು 2 ಗಂಟೆಗಳ ಕಾರ್ಯಕ್ರಮವಿರುತ್ತದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಬಿಕೆ ಹರಿಪ್ರಸಾದ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 5 ಲಕ್ಷ ಕಾರ್ಯಕರ್ತರು ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದ್ದು ಎಲ್ಲಾ ಉಪವೇದಿಕೆಗಳಲ್ಲೂ ಕಾರ್ಯಕ್ರಮ ವೀಕ್ಷಿಸಲು ಬೃಹತ್ ಎಲ್ ಇ ಡಿ ಪರದೆ ವ್ಯವಸ್ಥೆ ಮಾಡಲಾಗಿದೆ.

Leave A Reply

Your email address will not be published.