ಪೆನ್ಸಿಲ್, ಮ್ಯಾಗಿ ಕೇಳಿದ್ರೆ ಅಮ್ಮ ಬೈಯುತ್ತಾಳೆ, ನಾನೇನು ಮಾಡ್ಲಿ ಎಂದು ಮೋದಿಗೆ ಪತ್ರ ಬರೆದ ಪುಟ್ಟ ಬಾಲಕಿ

ನವದೆಹಲಿ: ದೇಶದಲ್ಲಿ ಬೆಲೆ ಏರಿಕೆಯ ಬಿಸಿ ಎಲ್ಲಾ ಜನತೆಗೂ ತಟ್ಟಿದೆ. ಹಿರಿಯರು ಕಿರಿಯರು ಎನ್ನದೆ ಪ್ರತಿಯೊಬ್ಬರಿಗೂ ಬೇಸರ ತಂದಿದೆ. ಯಾವುದೇ ಒಂದು ವಸ್ತು ಖರೀದಿಸಬೇಕಾದರೂ ತಲೆ ಕೆಡಿಸುವಂತೆ ಆಗಿದೆ. ಹೌದು. ಇದೀಗ ಪುಟ್ಟ ಪೋರಿ ಬೆಲೆ ಏರಿಕೆಯಿಂದ ತನಗಾದ ನಷ್ಟವನ್ನು ಮೋದಿಯವರಿಗೆ ಪತ್ರ ಬರೆಯುವ ಮೂಲಕ ತೋರ್ಪಡಿಸಿಕೊಂಡಿದ್ದಾಳೆ.

ಹೌದು. ಉತ್ತರ ಪ್ರದೇಶದ ಕನ್ನೂಜ್ ಜಿಲ್ಲೆಯ ಕೃತಿ ದುಬೆ ಎಂಬ 6 ವರ್ಷದ ಬಾಲಕಿ ತನಗೆ ಎದುರಾಗಿರುವ ಸಮಸ್ಯೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾಳೆ. ಮ್ಯಾಗಿ, ಪೆನ್ಸಿಲ್ ಬೆಲೆ ಜಾಸ್ತಿ ಆಗಿರುವುದರಿಂದ ನನಗೆ ತೊಂದರೆಯಾಗಿದೆ ಎಂದು ಹಿಂದಿ ಭಾಷೆಯಲ್ಲಿ ಪತ್ರ ಬರೆದಿದ್ದು, ಇದೀಗ ಈಕೆಯ ಪತ್ರ ವೈರಲ್ ಆಗಿದೆ.

“ನನ್ನ ಹೆಸರು ಕೃತಿ ದುಬೆ. ನಾನು 1ನೇ ತರಗತಿಯಲ್ಲಿ ಓದುತ್ತಿದ್ದೇನೆ. ಮೋದಿಯವರೇ, ನಿಮ್ಮ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದೆ. ನನ್ನ ಪೆನ್ಸಿಲ್, ರಬ್ಬರ್ ಬೆಲೆ ಕೂಡ ಹೆಚ್ಚಾಗಿದೆ. ನಾನು ಇಷ್ಟಪಟ್ಟು ತಿನ್ನುವ ಮ್ಯಾಗಿ ಬೆಲೆಯೂ ಏರಿಕೆಯಾಗಿದೆ. ಇದರಿಂದಾಗಿ ನಾನು ಪೆನ್ಸಿಲ್ ಬೇಕು ಎಂದು ಹೇಳಿದರೆ ನನ್ನ ಅಮ್ಮ ನನಗೆ ಹೊಡೆಯುತ್ತಾಳೆ. ನಾನು ಏನು ಮಾಡಬೇಕು? ಶಾಲೆಯಲ್ಲಿ ನನ್ನ ಜೊತೆ ಕೂರುವವರು ನನ್ನ ಪೆನ್ಸಿಲ್ ಕದ್ದು ನನಗೆ ಅಮ್ಮನಿಂದ ಹೊಡೆಸುತ್ತಿದ್ದಾರೆ “ಎಂದು ಆಕೆ ಪತ್ರ ಬರೆದಿದ್ದಾಳೆ.

ಬಾಲಕಿಯ ತಂದೆ ವಿಶಾಲ್ ದುಬೆ ವೃತ್ತಿಯಲ್ಲಿ ವಕೀಲರಾಗಿದ್ದು, ಇದು ನನ್ನ ಮಗಳ ಮನ್ ಕಿ ಬಾತ್ ಎಂದು ಹೇಳಿದ್ದಾರೆ. ಅಲ್ಲದೆ, ಆಕೆಯ ಪತ್ರದ ಹಿಂದಿರುವ ಕಾರಣವನ್ನು ತಿಳಿಸಿದ್ದಾರೆ. ಆಕೆ ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡು ಬಂದು, ಹೊಸ ಪೆನ್ಸಿಲ್ ಕೇಳಿದ್ದಕ್ಕೆ ಆಕೆಯ ಅಮ್ಮ ಪೆಟ್ಟು ಕೊಟ್ಟಿದ್ದಳು. ಅದರಿಂದ ಬೇಸರಗೊಂಡು ಆಕೆ ಈ ಪತ್ರ ಬರೆದಿದ್ದಾಳೆ ಎಂದು ಕೃತಿಯ ತಂದೆ ಹೇಳಿದ್ದಾರೆ. ಒಟ್ಟಾರೆ ಈಕೆಯ ಕ್ಯೂಟ್ ಪತ್ರ ಎಲ್ಲೆಡೆ ವೈರಲ್ ಆಗಿದೆ.

Leave A Reply

Your email address will not be published.