ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿ ಬಾಣಂತಿ ಸಾವು | ಆಸ್ಪತ್ರೆಯ ಎದುರೇ ಶವ ಇಟ್ಟು ಕುಟುಂಬಸ್ಥರಿಂದ ಪ್ರತಿಭಟನೆ

ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ ಇತ್ತೀಚೆಗೆ ಎದ್ದು ಕಾಣುತ್ತಿದೆ. ಅದೆಷ್ಟೋ ರೋಗಿಗಳು ಸರಿಯಾದ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ. ಜಗತ್ತು ನೋಡಬೇಕಾದ ನವಜಾತ ಶಿಶುಗಳು ಕೂಡ ಆಸ್ಪತ್ರೆಯವರ ಎಡವಟ್ಟಿನಿಂದ ಕಣ್ಣ್ ಮುಚ್ಚಿದಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ ಇದೇ ಸಾಲಿಗೆ ಸೇರಿದಂತೆ, ತುಮಕೂರಿನಲ್ಲೊಂದು ಘಟನೆ ನಡೆದಿದೆ.

ಹೌದು. ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಕುಣಿಗಲ್​ ತಾಲೂಕಿನ ತೆರದಕುಪ್ಪೆ ಗ್ರಾಮದ ಪಲ್ಲವಿ ಮೃತಪಟ್ಟಿದ್ದಾರೆ. ಹೀಗಾಗಿ, ಮೃತಳ ಕುಟುಂಬಸ್ಥರು ಮತ್ತು ಸಂಬಂಧಿಕರು ಆಸ್ಪತ್ರೆ ಬಳಿ ಶನಿವಾರ ಪ್ರತಿಭಟನೆ ನಡೆಸಿದ್ದಾರೆ.

ತುಂಬು ಗರ್ಭಿಣಿ ಪಲ್ಲವಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಜು.6ರಂದು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. 7ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಪಲ್ಲವಿ‌ಗೆ ಹೆರಿಗೆ ವೇಳೆ ತೀವ್ರ ರಕ್ತಸ್ರಾವ ಉಂಟಾಗಿತ್ತು.

ಈ ಬಗ್ಗೆ ವೈದ್ಯರು ಪಲ್ಲವಿಯ ಪೋಷಕರಿಗೆ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಆದಿ ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದ ಸ್ಥಿತಿ ಗಂಭೀರವಾದ ಹಿನ್ನೆಲೆ ಬೆಂಗಳೂರಿನ ಸೇವಾ ಆಸ್ಪತ್ರೆಗೆ ಪಲ್ಲವಿಯನ್ನು ಕುಟುಂಬಸ್ಥರು ಕರೆದೊಯ್ದಿದ್ದರು. ಚಿಕಿತ್ಸೆ ಫಲಿಸದೆ ಪಲ್ಲವಿ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.

ಪಲ್ಲವಿ ಸಾವಿಗೆ ಕುಣಿಗಲ್ ಸರ್ಕಾರಿ ಆಸ್ಪತ್ರೆ ವೈದ್ಯರೇ ಕಾರಣ ಎಂದು ಆರೋಪಿಸಿ ಮೃತಳ ಕುಟುಂಬಸ್ಥರು ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆ ಮುಂಭಾಗ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ವಾಹನ ಸಂಚಾರ ತಡೆದು ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪಲ್ಲವಿ ಸಾವಿಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ.

Leave A Reply

Your email address will not be published.