ಕರಾವಳಿಗರ ಮೇಲೆ ಸಿಡಿಲಬ್ಬರದ ಮೂಲಕ ಮಳೆರಾಯನ ಅಸಹನೆ- ಆಕ್ರೋಶ, ಇಂದಿನ ಮಹಾ ಮಳೆ ನೀರಿಗೆ ಅಳಿಸಿತಾ ಮನಸ್ಸಿಗೆ ಅಂಟಿಕೊಂಡ ನೆತ್ತರ ಕಲೆ ?

ಕಳೆದ ಕೆಲ ದಿನಗಳಿಂದ ಇಳಿಕೆಯಾಗಿದ್ದ ಮಳೆ ಇಂದು ಮತ್ತೆ ತನ್ನ ಇರುವಿಕೆಯನ್ನು ಭಯಂಕರವಾಗಿ ಪ್ರದರ್ಶಿಸಿದೆ. ಒಂದರ ಮೇಲೊಂದರಂತೆ ಹರಿದ ನೆತ್ತರಿನ ಕಲೆಯೆಲ್ಲಾ ಇಂದಿನ ಮಳೆ ನೀರಿಗೆ ಚೂರೂ ಉಳಿಯದಂತೆ ಮಾಸಿಹೋಗಿದೆ. ಹಲವೆಡೆ ರಸ್ತೆಗಳಲ್ಲೇ ನೀರು ತುಂಬಿ ಸಂಚಾರಕ್ಕೆ ಕಷ್ಟವಾಗಿ, ಕೆಲ ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆಯಾಗುವುದರೊಂದಿಗೆ ಮುಂಜಾನೆ ಮಳೆ ಸುರಿದ ಕಾರಣ ಬೇಗ ಏಳುವ ಮಂದಿ ಹಾಸಿಗೆಯಲ್ಲೇ ಬೆಚ್ಚನೆ ಮಲಗುವಂತಾಗಿದೆ.

ಮಳೆ ನೀರಿಗೆ ಮಾಸಿತೇ ನೆತ್ತರ ಕಲೆ ?

ಜಿಲ್ಲೆಯಲ್ಲಿ ಕರಾವಳಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ವಾರ ತುಂಬುತ್ತಿದ್ದಂತೆ ಹಲವು ಘಟನೆಗಳು ನಡೆದುಬಿಟ್ಟಿದೆ. ವ್ಯಾಪಾರ ವಹಿವಾಟು, ಶಾಲಾ ಕಾಲೇಜು ಎಲ್ಲವೂ ಬೇಸಿಗೆಯಲ್ಲಿ ಇರುವಂತೆಯೇ ಇದ್ದ ಹೊತ್ತಲ್ಲಿ ಒಂದೊಂದೇ ಕಡೆಯಲ್ಲಿ ಹೆಣಗಳು ಉರುಳಲು ಆರಂಭಿಸಿತ್ತು. ಬೆಳ್ಳಾರೆಯಲ್ಲಿ ಆದ ಒಂದು ಕೊಲೆಯ ಬಳಿಕ ಇಡೀ ಕರಾವಳಿಯೇ ರಕ್ತಸಿಕ್ತವಾಗಿದೆ.
ಕರಾವಳಿಯಲ್ಲಿ ಇಂದು ಜುಲೈ 30ರ ಮುಂಜಾನೆ ಸಿಡಿಲಬ್ಬರದ ಮಳೆ ಹುಯ್ದಿದೆ. ಒಂದು ವಾರದಿಂದ ಕೊಂಚ ಬಿಸಿ ಏರಿದ್ದ ಇಳೆ ಮುಂಜಾನೆಯಾಗುತ್ತಲೇ ತಂಪಾಗಿದೆ. ನಿನ್ನೆ, ಮೊನ್ನೆ ಎಲ್ಲಾ ಬಿಸಿಲು-ಬಿಸಿಲು ಎಂದು ಬೊಬ್ಬಿಡುತ್ತಿದ್ದ ಪ್ರತಿಯೊಬ್ಬರ ಬಾಯಲ್ಲೂ ನಸುಕಿನ ವೇಳೆ ‘ವಾ ಬರ್ಸ ಮರ್ರೆ’ ಎನ್ನುವ ಮಾತುಗಳು ಕೇಳಲಾರಂಭಿಸಿತ್ತು. ನಸುಕಿನ ವೇಳೆ ಸುಮಾರು 3 ಗಂಟೆಗೆ ಗುಡುಗು ಸಿಡಿಲಿನೊಂದಿಗೆ ಆಗಮಿಸಿದ ಮಳೆರಾಯ ಕರಾವಳಿಗರ ಮೇಲೆ ತನ್ನ ಅಸಹನೆ ತೋರ್ಪಡಿಸಿದ್ದ. ಬರೋಬ್ಬರಿ 2 ಗಂಟೆಗೂ ಹೆಚ್ಚು ಕಾಲ ಒಂದೇ ಸಮನೆ ಬಡಿದು ತನ್ನ ಆಕ್ರೋಷ ಹೊರಹಾಕಿದ್ದ. ಮಳೆ ರಸ್ತೆಗಂಟಿದ ನೆತ್ತರ ಕಲೆಯನ್ನು ಹೇಗೋ ಉಜ್ಜಿ ಹಾಕಿರಬಹುದು, ಆದರೆ ಮನಸ್ಸಿನ ದ್ವೇಷದ ಕಲೆ ತೊಳೆಯುವುದು ಹೇಗೆ, ಯಾವಾಗ ?- ಎನ್ನುವುದು ಶಾಂತಿ ಪ್ರಿಯರ ಪ್ರಶ್ನೆ.

ಇಂದಿನ ಮಂಗಳೂರು ನಗರದ ಮಳೆಗೆ ಪಂಪ್ವೆಲ್ ಓವರ್ ಬ್ರಿಡ್ಜ್ ಬಳಿಯಲ್ಲಿ ರಸ್ತೆಯಲ್ಲೇ ಹೊಳೆಯಂತೆ ನೀರು ಹರಿದಿದೆ. ಇದರ ಪರಿಣಾಮ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತ.
ಅಲ್ಲಿ ಪಡೀಲ್, ಪಂಪ್ವೆಲ್, ನಂತೂರು, ಜ್ಯೋತಿ, ಬಲ್ಲಾಳ್ ಬಾಗ್, ಲಾಲ್ ಬಾಗ್, ಕೊಂಚಾಡಿ, ಕಾವೂರು, ಕೊಟ್ಟಾರ, ಮುಂತಾದೆಡೆ ವರ್ಷಘೋಷದ ಅಬ್ಬರಕ್ಕೆ ಜನ ನಿಬ್ಬೆರಗಾಗಿದ್ದರು. ಮಂಗಳೂರಿನ ಹೊರವಲಯದ ಕೈಕಂಬ, ಗುರುಪುರ ವಾಮಂಜೂರು, ಮುಂತಾದೆಡೆ ವರುಣ ಆರ್ಭಟಿಸಿದ್ದಾನೆ. ಅದಲ್ಲದೇ ಜಿಲ್ಲೆಯ ತಾಲ್ಲೂಕಿನ ಹಲವೆಡೆ ಭಾರೀ ಮಳೆಯಾಗಿದೆ. ಕೆಲವೆಡೆ ರಸ್ತೆಯಲ್ಲಿ ಅರ್ಧ ಕಾರು ಮುಳುಗುವಷ್ಟರ ಮಟ್ಟಿಗೆ ಮಳೆ ಸುರಿದಿದೆ.

Leave A Reply

Your email address will not be published.