ಸ್ಪೆಷಲ್ ಆಗಿದೆ ವಿದ್ಯಾರ್ಥಿಗಳ ಕಲಿಕೆಯ ನಡತೆ | ಸ್ಕಿಟ್ ಮೂಲಕ ಜೀವನ ಪಾಠ ಕಲಿಸುವ ಮುದ್ದಾದ ವೀಡಿಯೋ ವೈರಲ್

ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳಲ್ಲಿ ಶಿಸ್ತು ಕಲಿಸುವಲ್ಲಿ ಶಾಲೆಯ ಪಾತ್ರ ಅಪಾರವಿದೆ. ಹೀಗಾಗಿ, ಪ್ರಾಥಮಿಕ ಹಂತದಲ್ಲಿ ಶಿಕ್ಷಕರು ಯಾವ ರೀತಿ ಮಕ್ಕಳಿಗೆ ತಿಳಿಸಿಕೊಡುತ್ತಾರೆ ಎಂಬುದು ಮುಖ್ಯವಾಗಿರುತ್ತದೆ. ಇದೀಗ ಉತ್ತಮ ಸಂದೇಶ ಸಾರುವ ವಿದ್ಯಾರ್ಥಿಗಳ ಸ್ಕಿಟ್ ವೀಡಿಯೊ ವೈರಲ್ ಆಗಿದ್ದು, ಶಿಕ್ಷಣ ಅಂದರೆ ಹೀಗೆ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟಿದೆ.

ಪುಟ್ಟ ಪುಟ್ಟ ಪುಟಾಣಿಗಳು ದೊಡ್ಡವರಂತೆ ನಟನೆ ಮಾಡಿ, ಹಿರಿಯರಿಗೆ, ಗರ್ಭಿಣಿಯರಿಗೆ, ಮಗು ಹಿಡಿದಿರುವ ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ತೋರಿಸಿದ್ದಾರೆ. ಇಷ್ಟು ಸಣ್ಣ ವಯಸ್ಸಿಗೆ ಈ ಮಕ್ಕಳ ನಟನೆ ಎಲ್ಲರ ಮನ ಗೆದ್ದಿದೆ.

ಟರ್ಕ್‌ನ ಶಿಕ್ಷಕರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಶಿಶುವಿಹಾರದ ವಿದ್ಯಾರ್ಥಿಗಳು ಶಾಲೆಯಲ್ಲಿ ಸ್ಕಿಟ್‌ಗಳನ್ನು ಮಾಡುವುದನ್ನು ನೋಡಬಹುದಾಗಿದೆ. ಸಾರ್ವಜನಿಕ ಶಿಷ್ಟಾಚಾರದ ಬಗ್ಗೆ ಕಲಿತುಕೊಳ್ಳುವ ವೀಡಿಯೋ ಇದಾಗಿದೆ. ಟ್ವಿಟರ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ಫೀಗೆನ್ ಎಂಬ ಶಿಕ್ಷಕ, ‘ಇದನ್ನು ಉತ್ತಮ ಶಿಕ್ಷಣ ಎಂದು ಕರೆಯಲಾಗುತ್ತದೆ’ ಎಂದು ಶೀರ್ಷಿಕೆ ನೀಡಿದ್ದಾರೆ.

ವೈರಲ್ ಆಗುತ್ತಿರುವ ವೀಡಿಯೊದ ಆರಂಭದಲ್ಲಿ, ಮಕ್ಕಳು ಚಲಿಸುವ ಬಸ್‌ನ ಸೀಟಿನಲ್ಲಿ ಕುಳಿತಿರುವ ದೃಶ್ಯವನ್ನು ನೋಡಬಹುದು. ಎರಡು ಸಾಲುಗಳಲ್ಲಿ ಕುಳಿತು ಪ್ರಯಾಣಿಕರಂತೆ ವರ್ತಿಸುವ ಮಕ್ಕಳು, ಒಂದು ಮಗು ಬಸ್ ಚಾಲಕನ ಪಾತ್ರವನ್ನು ನಿರ್ವಹಿಸುತ್ತಿದೆ.

ಬಸ್ ಮುಂದಕ್ಕೆ ಚಲಿಸಿದಂತೆ, ಕೈಯಲ್ಲಿ ಕೋಲು ಹಿಡಿದು ಬಸ್ಸಿನೊಳಗೆ ಕಾಲಿಡುವ ಮಗುವೊಂದು ಮುದುಕನಂತೆ ವರ್ತಿಸುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಅಷ್ಟೇ ಅಲ್ಲದೆ, ಆ ಮುದುಕ ಪಾತ್ರ ಮಾಡುವ ಮಗು, ಬಸ್ಸಿನೊಳಗೆ ಖಾಲಿ ಸೀಟುಗಳಿಲ್ಲದ ಕಾರಣ ಮಧ್ಯದಲ್ಲಿ ನಿಂತಿರುವುದನ್ನು ಕಾಣಬಹುದು. ಆ ಸಮಯದಲ್ಲಿ ತನ್ನ ಲ್ಯಾಪ್‌ಟಾಪ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಗು ಇದನ್ನು ನೋಡಿ ಮುದುಕನಿಗೆ ತನ್ನ ಸೀಟನ್ನು ನೀಡಿ ಗೌರವ ಸೂಚಿಸುತ್ತಾನೆ.

ಇದಾದ ನಂತರ, ವಿಡಿಯೋದಲ್ಲಿ, ಚಿಕ್ಕ ಮಗುವೊಂದು ಮಹಿಳೆಯಂತೆ ವರ್ತಿಸುತ್ತಿದ್ದು, ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಬಸ್‌ನೊಳಗೆ ಬರುತ್ತಾರೆ. ಈ ಸಮಯದಲ್ಲಿ, ಮತ್ತೊಂದು ಮಗು ಎದ್ದು ನಿಂತು ಮಹಿಳೆಗೆ ತನ್ನ ಸೀಟ್‌ನ್ನು ನೀಡುತ್ತದೆ. ಗರ್ಭಿಣಿ ಮಹಿಳೆಯೊಬ್ಬರು ಬಸ್ ಹತ್ತುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಇನ್ನೊಂದು ಮಗು ಆ ಮಹಿಳೆ ಪಾತ್ರಧಾರಿಗೆ ತನ್ನ ಸೀಟ್ ಅನ್ನು ನೀಡುತ್ತದೆ.

ಹಿರಿಯರಿಗೆ, ಮಹಿಳೆಯರಿಗೆ ಸಮಾಜದಲ್ಲಿ, ಬಸ್ ಗಳಲ್ಲಿ ಯಾವ ರೀತಿ ಗೌರವ ನೀಡಬೇಕು ಎಂಬುದನ್ನು ಮಕ್ಕಳು ಸ್ಕಿಟ್ ಮೂಲಕ ತೋರಿಸಿ, ಅವರಿಗೂ ನೋಡುಗರಿಗೂ ಒಳ್ಳೆಯ ಸಂದೇಶ ಸಾರಿದ್ದಾರೆ. ಇಲ್ಲಿಯವರೆಗೆ ವೀಡಿಯೊವನ್ನು 2 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, 100 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಒಟ್ಟಾರೆ, ಪುಟ್ಟ ಮಕ್ಕಳ ದೊಡ್ಡ ಗುಣವನ್ನು ಎಲ್ಲರೂ ಕೊಂಡಾಡಿದ್ದಾರೆ.

Leave A Reply

Your email address will not be published.