ನರೇಗಾ ಯೋಜನೆಯಡಿ ರೈತರಿಗೆ ಗುಡ್ ನ್ಯೂಸ್ ; ದನದ ಕೊಟ್ಟಿಗೆ ನಿರ್ಮಾಣ ಕಾಮಗಾರಿಗೆ ಸಹಾಯಧನ

ಹಾವೇರಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನೇಕ ಯೋಜನೆಗಳ ಪ್ರಯೋಜನವನ್ನು ನೀಡುತ್ತಾ ಬಂದಿದ್ದು, ಇದೀಗ ದನದ ಕೊಟ್ಟಿಗೆ ನಿರ್ಮಾಣ ಕಾಮಗಾರಿಗೆ ಸಹಾಯಧನ ನೀಡಲು ಮುಂದಾಗಿದೆ.

ಗ್ರಾಮೀಣ ಭಾಗದ ರೈತರಿಗೆ ರೂ. 57000/-ಗಳ ಧನ ಸಹಾಯದೊಂದಿಗೆ ದನದದೊಡ್ಡಿ ನಿರ್ಮಾಣ ಕಾಮಗಾರಿಗೆ ಆಯುಕ್ತಾಲಯದಿಂದ ಹೊಸ ಆದೇಶ ಹೊರಡಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್ ಅವರು ತಿಳಿಸಿದ್ದಾರೆ.

ಮೊದಲು ಎಸ್.ಸಿ. ಮತ್ತು ಎಸ್.ಟಿ. ಕುಟುಂಬಗಳಿಗೆ ಮಾತ್ರ ರೂ. 43,000/-ಗಳು ಇತರೆ ಕುಟುಂಬಗಳಿಗೆ ರೂ. 22,000/-ಗಳನ್ನು ದನದ ದೊಡ್ಡಿ ನಿರ್ಮಾಣಕ್ಕಾಗಿ ನೀಡಲಾಗುತ್ತಿತ್ತು. ದಿನಾಂಕ 20-07-2022 ರಂದು 4 ಜಾನುವಾರುಗಳಿಗೆ ರೂ. 57,000/-ಗಳ ಎಲ್ಲ ವರ್ಗದ ಜನರಿಗೆ ವೈಯಕ್ತಿಕ ಆಧಾರಿತ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಬುಡುಕಟ್ಟಗಳು, ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು , ಮಹಿಳಾ ಪ್ರಧಾನ ಕುಟುಂಬಗಳು, ವಿಕಲಚೇತನ ಕುಟುಂಬಗಳು, ಭೂ-ಸುಧಾರಣಾ ಫಲಾನುಭವಿಗಳು, ವಸತಿ ಯೋಜನೆಯಗಳ ಫಲಾನುಭವಿಗಳು, ಅರಣ್ಯ ಹಕ್ಕು ಕಾಯ್ದೆ 2006ರ ಫಲಾನುಭವಿಗಳು ಹಾಗೂ ಸಣ್ಣ ಮತ್ತು ಅತೀ ಸಣ್ಣ ರೈತರ ಕುಟುಂಬಗಳು ಸದರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಪಡೆಯಲು ಅರ್ಹರಾಗಿದ್ದಾರೆ.

ಜಿಲ್ಲೆಯ ಗ್ರಾಮೀಣ ಭಾಗದ ರೈತರು ವೈಯಕ್ತಿಕ ದನದ ದೊಡ್ಡಿ ನಿರ್ಮಾಣಕ್ಕಾಗಿ ತಮ್ಮ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ ಹೆಸರು ನೋದಾಯಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ ರೈತರಿಗೆ ನರೇಗಾ ಯೋಜನೆಯಡಿ ಸಿಹಿಸುದ್ದಿ ದೊರಕಿದೆ.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಜಿಸುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯನ್ನು ಜಾರಿಗೊಳಿಸುವುದು ಮತ್ತು ಉಸ್ತುವಾರಿ ಗ್ರಾಮೀಣಾಭಿವೃದ್ದಿ ಆಯುಕ್ತಾಲಯದ ಜವಾಬ್ದಾರಿಯಾಗಿದೆ. ಕೂಲಿ ಉದ್ಯೋಗದ ಕಾಮಗಾರಿಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆಗಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಕುಶಲ ದೈಹಿಕ ಕೆಲಸ ಮಾಡಲು ಇಚ್ಛಿಸುವ ಗ್ರಾಮೀಣ ಪ್ರದೇಶದ ವಯಸ್ಕರಿಗೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ನೂರು ದಿನಗಳ ಉದ್ಯೋಗಾವಕಾಶಗಳನ್ನು ಸ್ಥಳೀಯವಾಗಿ ನೀಡಿ, ಬಡಜನರ ಬದುಕನ್ನು ಹಸನಾಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

Leave A Reply

Your email address will not be published.